ಬೆಂಗಳೂರು [ಡಿ.13]: ವಂಚನೆ ಪ್ರಕರಣ ಸಂಬಂಧ ಬಂಧಿಸಲು ತೆರಳಿದ್ದಾಗ ದುಷ್ಕರ್ಮಿಗಳು ಪೊಲೀಸರ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿ ಪರಾರಿಯಾಗಿರುವ ಘಟನೆ ಅರಮನೆ ರಸ್ತೆಯ ಪ್ರತಿಷ್ಠಿತ ಹೋಟೆಲ್‌ ಆವರಣದಲ್ಲಿ ನಡೆದಿದೆ.

ಘಟನೆಯಲ್ಲಿ ಕಬ್ಬನ್‌ ಪಾರ್ಕ್ ಠಾಣೆ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಹನುಮಂತರಾಜು (50) ಅವರ ತಲೆ, ಎಡಗಣ್ಣು ಹಾಗೂ ಎಡಗಾಲಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಕೇರಳ ಮೂಲದ ಎಂ.ಶರೂನ್‌ ಅಲಿಯಾಸ್‌ ಅರವಿಂದ್‌, ರಿಬಿನ್‌ ಹಾಗೂ ದೇವರ ಜೀವನಹಳ್ಳಿಯ ಸೈಯದ್‌ ಅಹಮ್ಮದ್‌ನನ್ನು ಬಂಧಿಸಲಾಗಿದೆ. ಪೊಲೀಸರ ಮೇಲೆ ಗೂಂಡಾಗಿರಿ ನಡೆಸಿ ತಪ್ಪಿಸಿಕೊಂಡಿರುವ ಜೈಸನ್‌ ವರ್ಗೀಸ್‌, ಪ್ರಣವ್‌ ಮತ್ತು ರಫೀಕ್‌ ಪತ್ತೆಗೆ ತನಿಖೆ ಮುಂದುವರೆದಿದೆ.

ಇತ್ತೀಚೆಗೆ ಮಹಿಳೆಗೆ ಸಾಲ ಕೊಡಿಸುವುದಾಗಿ ನಂಬಿಸಿ 3 ಲಕ್ಷ ರು. ಪಡೆದು ಆರೋಪಿಗಳು ವಂಚಿಸಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರಿಗೆ ಅರಮನೆ ರಸ್ತೆಯ ವಿಂಡ್ಸರ್‌ ಮ್ಯಾನರ್‌ ಹೋಟೆಲ್‌ಗೆ ಊಟಕ್ಕೆ ಅರವಿಂದ್‌ ತಂಡ ಬರುವ ಬಗ್ಗೆ ಮಾಹಿತಿ ಸಿಕ್ಕಿತು. ಅದರಂತೆ ಅವರನ್ನು ಬಂಧಿಸಲು ತೆರಳಿದ್ದಾಗ ಈ ಕೊಲೆ ಯತ್ನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳ ರಾಜ್ಯದ ತಿರುವನಂತಪುರ ಮೂಲದ ಸುಮಾ ಎಂಬುವರ ಸ್ನೇಹಿತೆ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕಡಿಮೆ ಬಡ್ಡಿ ದರಲ್ಲಿ ಸಾಲ ಕೊಡಿಸುವುದಾಗಿ ಸಂದೇಶ ಬಂದಿತ್ತು. ಆಗ ಸಾಲಕ್ಕಾಗಿ ಸುಮಾ ಅವರು, ತಕ್ಷಣವೇ ಸ್ನೇಹಿತೆ ಪರವಾಗಿ ಸಂದೇಶ ಕಳುಹಿಸಿದ್ದ ನಂಬರ್‌ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಅರವಿಂದ್‌, ನಿಮಗೆ 25 ಲಕ್ಷ ರು. ಸಾಲ ಕೊಡಿಸುತ್ತೇವೆ. ಇದಕ್ಕೆ ಪ್ರತಿಯಾಗಿ  1.87 ಲಕ್ಷ ರು. ಕಮಿಷನ್‌ ಕೊಡಬೇಕೆಂದು ಎಂದಿದ್ದರು. ಈ ಮಾತಿನಿಂದ ಹುರುಪುಗೊಂಡ ಸುಮಾ, ನನಗೆ 50 ಲಕ್ಷ ರು. ಸಾಲ ಕೊಡಿಸುವಂತೆ ಕೋರಿದ್ದರು. ಇದಾದ ಕೆಲ ದಿನ ಬಳಿಕ ಅರವಿಂದ್‌, ಮತ್ತೆ ಸುಮಾ ಅವರನ್ನು ಸಂಪರ್ಕಿಸಿ ಸಾಲ ಮಂಜೂರು ಆಗಿದೆ. ಹಣವನ್ನು ಬೆಂಗಳೂರಿಗೆ ಬಂದು ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಂತೆಯೇ ನ.19ರಂದು ತಮ್ಮ ಸಂಬಂಧಿಕರ ಜತೆ ಎಂಜಿ ರಸ್ತೆ ಕಾಫಿ ಡೇಗೆ ಬಂದ ಸುಮಾ, ಅರವಿಂದ್‌ ಹಾಗೂ ಆತನ ಸಹಚರರನ್ನು ಭೇಟಿ ಮಾಡಿದ್ದರು. ಆಗ ಛಾಪಾ ಕಾಗದ ಶುಲ್ಕವೆಂದು 3 ಲಕ್ಷ ರು. ಪಡೆದು ಅರವಿಂದ್‌ ತಂಡ ಪರಾರಿಯಾಯಿತು. ಈ ಬಗ್ಗೆ ಕಬ್ಬನ್‌ ಪಾರ್ಕ್ ಠಾಣೆಯಲ್ಲಿ ಸುಮಾ ದೂರು ದಾಖಲಿಸಿದ್ದರು.

ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಮೊಬೈಲ್‌ ಕರೆಗಳು ಹಾಗೂ ಬಾತ್ಮೀದಾರರ ಮಾಹಿತಿ ಮೇರೆಗೆ ಡಿ.10ರ ರಾತ್ರಿ ಈ ತಂಡ ವಿಂಡ್ಸರ್‌ ಮ್ಯಾನರ್‌ ಹೋಟೆಲ್‌ಗೆ ಊಟಕ್ಕೆ ಬರುವ ಮಾಹಿತಿ ಪಡೆದರು. ತಕ್ಷಣವೇ ಕಾರ್ಯಪ್ರವೃತ್ತರಾದ ಕಬ್ಬನ್‌ ಪಾರ್ಕ್ ಹಾಗೂ ಹೈಗ್ರೌಂಡ್ಸ್‌ ಠಾಣೆ ಪೊಲೀಸರು, ಆರೋಪಿಗಳ ಬಂಧನಕ್ಕೆ ಜಂಟಿ ಕಾರ್ಯಾಚರಣೆಗಿಳಿದರು. ರಾತ್ರಿ 11.30ರ ಸುಮಾರಿಗೆ ಆರೋಪಿಗಳು ಕಾರಿನಲ್ಲಿ ಬಂದಿದ್ದಾರೆ. ಕೂಡಲೇ ವಾಹನ ನಿಲುಗಡೆ ಪ್ರದೇಶದಲ್ಲಿ ಅವರ ಕಾರನ್ನು ಸುತ್ತುವರೆದು ಮೂವರನ್ನು ವಶಕ್ಕೆ ಪಡೆದಿದ್ದರು. ಈ ಹಂತದಲ್ಲಿ ಆಡಿ ಕಾರಿನಲ್ಲಿ ಕುಳಿತಿದ್ದ ಇನ್ನುಳಿದ ಮೂವರನ್ನು ಬಂಧಿಸಲು ಯತ್ನಿಸಿದಾಗ ವೇಗವಾಗಿ ಕಾರು ಚಲಾಯಿಸಿದ್ದಾರೆ.

ಈ ಹಂತದಲ್ಲಿ ತಾವು ಪೊಲೀಸರು ಎಂದು ಹೇಳಿದರೂ ಸಹ ಕೇಳದೆ ಚೀತಾ ಬೈಕ್‌ನಲ್ಲಿದ್ದ ಎಎಸ್‌ಐ ಹನುಮಂತರಾಜುಗೆ ಕಾರು ಗುದ್ದಿಸಿ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಖಾಸಗಿ ವಾಹನದಲ್ಲಿ ಗಾಯಾಳು ಹನುಮಂತರಾಜುನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಂಧಿತ ಆರೋಪಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಓಡಿ ಹೋದವರ ವಿವರ ಸಿಕ್ಕಿತು. ತಲೆಮರೆಸಿಕೊಂಡಿರುವ ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.