ಬೆಂಗಳೂರು [ಡಿ.15]:  ಕದ್ದ ಚಿನ್ನಾಭರಣ ಹಂಚಿಕೆ ವಿಚಾರದಲ್ಲಿ ಜಗಳವಾಡುತ್ತಿದ್ದ ಮೂವರು ಆರೋಪಿಗಳು ಬೇಗೂರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಕೆ.ಜಿ.ನಗರದ ಗವಿಪುರ ಗುಟ್ಟಹಳ್ಳಿ ನಿವಾಸಿಗಳಾದ ಗಣೇಶ್‌ (21), ಶಾಂತಕುಮಾರ್‌ (20) ಮತ್ತು ವೀರಮಣಿ (20) ಬಂಧಿತರು. ಆರೋಪಿಗಳಿಂದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿ.12ರಂದು ಮಧ್ಯಾಹ್ನ 3ರ ಸುಮಾರಿಗೆ ಬೇಗೂರು ಠಾಣೆ ಪೊಲೀಸರು ಗಾರ್ವೆಭಾವಿಪಾಳ್ಯದಲ್ಲಿ ಗಸ್ತು ತಿರುಗುತ್ತಿದ್ದರು. ಮೂವರು ಆರೋಪಿಗಳು ರಸ್ತೆಯಲ್ಲಿ ಯಾವುದೋ ವಸ್ತುವೊಂದರ ಹಂಚಿಕೆ ವಿಚಾರವಾಗಿ ಜಗಳ ಮಾಡಿಕೊಳ್ಳುತ್ತಿದ್ದರು. ಪೊಲೀಸರನ್ನು ನೋಡಿದ ಆರೋಪಿಗಳು ಸ್ಥಳದಿಂದ ಕಾಲ್ಕಿಳಲು ಪ್ರಯತ್ನಿಸಿದಾಗ ಅವರನ್ನು ವಶಕ್ಕೆ ಪಡೆದು ಪ್ರಶ್ನಿಸಿದ್ದರು. 

ಜೇಬು ತಪಾಸಣೆ ನಡೆಸಿದಾಗ ಚಿನ್ನಾಭರಣ ಇರುವುದು ಪತ್ತೆಯಾಗಿದೆ. ಚಿನ್ನಾಭರಣದ ಬಗ್ಗೆ ಪ್ರಶ್ನೆ ಮಾಡಿದಾಗ ಮೂವರು ಗೊಂದಲದ ಹೇಳಿಕೆ ನೀಡಿದ್ದು, ರಶೀದಿ ಕೂಡ ನೀಡಿಲ್ಲ. ಆರೋಪಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ್ದ ಚಿನ್ನಾಭರಣ ಎಂದು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.

ಬೈಕ್ ನಿಲ್ಲಿಸುವ ವಿಚಾರಕ್ಕೆ ಜಗಳ: ಬಾದಾಮಿಯಲ್ಲಿ ಲಾಠಿ ಪ್ರಹಾರ...

ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಬೇರೆ ಕಡೆ ಕಳವು ಮಾಡಿರುವ ಚಿನ್ನಾಭರಣ ಜಪ್ತಿ ಮಾಡಬೇಕಿದೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಇನ್ನಷ್ಟುಮಾಹಿತಿ ಹೊರ ಬರಲಿದೆ. ಬೀಗ ಹಾಕಿದ್ದ ಮನೆಗಳಿಗೆ ನುಗ್ಗಿ ಆರೋಪಿಗಳು ಕಳವು ಮಾಡುತ್ತಿದ್ದರು. ಕದ್ದ ಚಿನ್ನಾಭರಣ ಮಾರಾಟ ಮಾಡಿ, ಬಂದ ಹಣದಲ್ಲಿ ಮೋಜು ಮಾಡುತ್ತಿದ್ದರು ಎಂದು ತಿಳಿಸಿದರು.

ಜೈಲಿಂದ ಬಂದು ಕೃತ್ಯ:  ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಕೆಂಪೇಗೌಡ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಸುಮಾರು ಎರಡು ಕೆ.ಜಿ.ಯಷ್ಟುಚಿನ್ನಾಭರಣ ಜಪ್ತಿ ಮಾಡಿದ್ದರು. ಸೆಪ್ಟೆಂಬರ್‌ನಲ್ಲಿ ಜೈಲಿನಿಂದ ಹೊರ ಬಂದಿರುವ ಆರೋಪಿಗಳು ಪುನಃ ಕಳವು ಕೃತ್ಯ ಮುಂದುವರಿಸಿದ್ದರು ಎಂದು ಮಾಹಿತಿ ನೀಡಿದರು.