ಬೆಂಗಳೂರು [ಸೆ.06 ] :  ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಎರಡು ಸಾವಿರಕ್ಕೂ ಅಧಿಕ ಜನರಿಗೆ 20 ಕೋಟಿ ವಂಚಿಸಿದ್ದ ಮಾಜಿ ಸೈನಿಕ ಸೇರಿದಂತೆ ಮೂವರು ಕಬ್ಬನ್‌ಪಾರ್ಕ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹರಿಯಾಣದ ಜಿಂದ್‌ ಜಿಲ್ಲೆಯ ಸುನೀಲ್‌ಕುಮಾರ್‌ ಚೌಧರಿ, ಕೇರಳದ ಕಣ್ಣೂರು ಜಿಲ್ಲೆಯ ಪಿ.ರಿಜೇಶ ಹಾಗೂ ಕೆ.ಎಸ್‌.ರಾಜೇಶ್‌ ಬಂಧಿತರು. ಇತ್ತೀಚೆಗೆ ಖಾಸಗಿ ಕಂಪನಿ ಉದ್ಯೋಗಿ ಸಂಜೀವ್‌ ಕುಮಾರ್‌ ನೀಡಿದ ದೂರಿನ ಮೇರೆಗೆ ವಂಚನೆ ಜಾಲ ಭೇದಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಹಣದಾಸೆ ತೋರಿಸಿ ಟೋಪಿ:  ಹರಿಯಾಣದ ಸುನೀಲ್‌, ಸೇನೆಯಲ್ಲಿ ಏಳು ವರ್ಷಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ಬಳಿಕ ಇದೇ ವರ್ಷದ ಫೆಬ್ರವರಿಯಲ್ಲಿ ದೆಹಲಿ ಸಮೀಪದ ಗುರುಗ್ರಾಮದಲ್ಲಿ ವ್ಯಾಮ್‌ ಪ್ರೈ.ಲಿ ಹೆಸರಿನ ಸಂಸ್ಥೆ ಆರಂಭಿಸಿ, ಕೇರಳದ ತನ್ನ ಇಬ್ಬರು ಸ್ನೇಹಿತರನ್ನು ಸೇರಿಸಿಕೊಂಡಿದ್ದ. ಈ ಕಂಪನಿ ಶಾಖಾ ಕಚೇರಿಯನ್ನು ಬೆಂಗಳೂರಿನ ಯುಬಿ ಸಿಟಿಯಲ್ಲಿ ಆರೋಪಿಗಳು ತೆರೆದಿದ್ದರು. ತನ್ನ ಸಂಸ್ಥೆಯಲ್ಲಿ ಹಣ ಹೂಡಿದರೆ ದುಪ್ಪಟ್ಟು ಲಾಭ ಕೊಡುವುದಾಗಿ ನಂಬಿಸಿ ಜನರಿಗೆ ಅವರು ಟೋಪಿ ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅದರಂತೆ .25 ಸಾವಿರ ಹೂಡಿದರೆ ವಾರಕ್ಕೆ 1,250 ರಂತೆ 20 ವಾರಗಳು ಹಣ ಕೊಡುತ್ತೇವೆ. 21ನೇ ವಾರಕ್ಕೆ 25,000  ರು. ಮರಳಿಸುವುದಾಗಿ ಆಮಿಷವೊಡ್ಡಿದ್ದರು. ಇದೇ ರೀತಿ 50 ಸಾವಿರ ರು. ಪಾವತಿಸಿದರೆ ವಾರಕ್ಕೆ 2,500 ನಂತೆ 20 ವಾರಗಳು ಲಾಭ ಸಿಗಲಿದೆ. 21ನೇ ವಾರಕ್ಕೆ 50 ಸಾವಿರ ರು. ವಾಪಸ್‌ ಬರುತ್ತದೆ. ಹಾಗೆ 1 ಲಕ್ಷ ಹೂಡಿದರೆ ವಾರಕ್ಕೆ  5 ಸಾವಿರದಂತೆ 20 ವಾರಗಳಲ್ಲಿ 50 ಸಾವಿರ ಹಣ ಕೊಡುವುದಾಗಿ ಪ್ರಕಟಿಸಿದ್ದರು. ಈ ಮಾತು ನಂಬಿದ ಸುಮಾರು 2,500 ಜನರು ಹಣ ಹೂಡಿಕೆ ಮಾಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಈ ಹೂಡಿಕೆದಾರರಲ್ಲಿ ಬಹುತೇಕರು ಆರೋಪಿ ರಿಜೇಶ ಕೇರಳದಿಂದ ಕರೆತಂದು ಹಣ ಹೂಡಿಕೆ ಮಾಡಿಸಿದ್ದ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ಒಟ್ಟಾರೆ ಸುಮಾರು 2,500 ಮಂದಿಯಿಂದ ಮೋಸಕ್ಕೊಳಗಾಗಿದ್ದು, 20 ಕೋಟಿ ರು. ಕಳೆದುಕೊಂಡಿದ್ದಾರೆ. ಈ ಬಗ್ಗೆ ದೂರುಗಳು ಬಂದರೆ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಖಾಸಗಿ ಕಂಪನಿ ಉದ್ಯೋಗಿ ಸಂಜೀವ್‌ ಕುಮಾರ್‌ ಅವರು, ಸುನೀಲ್‌ ಸಂಸ್ಥೆಯಲ್ಲಿ 25 ರು. ಸಾವಿರ ಹಣ ಹೂಡಿದ್ದರು. ಆದರೆ ಪೂರ್ವ ಒಪ್ಪಂದಂತೆ ಲಾಭಾಂಶ ಹಂಚಿಕೆಯಾಗಲಿಲ್ಲ. ಇದರಿಂದ ಅನುಮಾನಗೊಂಡ ಅವರು, ಸೆ.2ರಂದು ಕಬ್ಬನ್‌ ಪಾರ್ಕ್ ಠಾಣೆ ದೂರು ನೀಡಿದ್ದರು. ಅದರಂತೆ ವಂಚನೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಯು.ಬಿ.ಸಿಟಿಯಲ್ಲಿದ್ದ ಆರೋಪಿಗಳ ಕಂಪನಿ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.