ಹಾವೇರಿ(ಮೇ.08): ಕೊರೋನಾ ಎರಡನೇ ಅಲೆ ಶುರುವಾದ ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ 50 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಅಲ್ಲದೇ ಕಳೆದ ಕೆಲವು ದಿನಗಳಿಂದ ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.

ಕಳೆದ ವರ್ಷ ಮೇ 4ರಂದು ಜಿಲ್ಲೆಯಲ್ಲಿ ಮೊದಲ ಕೊರೋನಾ ಪಾಸಿಟಿವ್‌ ಪ್ರಕರಣ ಕಂಡುಬಂದಿತ್ತು. ಅದಾದ ಬಳಿಕ ಕೊರೋನಾ ಸೋಂಕು ಏರುತ್ತ ಸಾಗಿ 12 ಸಾವಿರ ಗಡಿ ದಾಟಿತ್ತು. ಎರಡನೇ ಅಲೆ ಶುರುವಾದ ಕೆಲವೇ ದಿನಗಳಲ್ಲಿ ಈ ಸಂಖ್ಯೆ 14 ಸಾವಿರ ದಾಟಿದೆ. ಮೊದಲ ಅಲೆಯ ವೇಳೆ ಜಿಲ್ಲೆಯಲ್ಲಿ 196 ಜನರು ಮೃತಪಟ್ಟಿದ್ದರೆ, ಕಳೆದ ಒಂದು ತಿಂಗಳ ಅವಧಿಯಲ್ಲಿ 50 ಜನ ಮೃತಪಟ್ಟಿದ್ದಾರೆ. ಬುಧವಾರದವರೆಗೆ ಜಿಲ್ಲೆಯಲ್ಲಿ 246 ಜನ ಮೃತಪಟ್ಟಿದ್ದಾರೆ. ನಿತ್ಯ ಐದಾರು ಜನರು ಕೊರೋನಾ ಸೋಂಕಿಗೆ ಮೃತಪಡುತ್ತಿದ್ದಾರೆ. ಇದು ಗಾಬರಿ ಹುಟ್ಟಿಸುತ್ತಿದ್ದು, ಸುರಕ್ಷತಾ ಕ್ರಮ ಅನುಸರಿಸುವುದು ಅಗತ್ಯವೆನಿಸಿದೆ.

"

ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಜನರ ಓಡಾಟ ನಿಯಂತ್ರಣಕ್ಕೆ ಬಂದಿಲ್ಲ. ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದು ಸೇರಿದಂತೆ ನಿಯಮ ಪಾಲಿಸದ್ದರಿಂದ ಕೊರೋನಾ ಪಾಸಿಟಿವ್‌ ಸಂಖ್ಯೆ ಏರುತ್ತಲೇ ಇದೆ. ಕಳೆದ ಒಂದು ವಾರದಿಂದ ನಿತ್ಯ 200ರಿಂದ 300 ಕೇಸ್‌ ದೃಢಪಡುತ್ತಿದೆ.

ಕೊರೋನಾ ತಂದಿಟ್ಟ ಸಂಕಷ್ಟ: ಕೂಲಿ ಕಾರ್ಮಿಕರಾದ ಅತಿಥಿ ಉಪನ್ಯಾಸಕರು..!

ಕೆಲವೇ ದಿನಗಳಲ್ಲಿ 50 ಸಾವು:

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ದೃಢಪಡುತ್ತಿರುವ ಕೊರೋನಾ ಪಾಸಿಟಿವ್‌ ಪ್ರಕರಣಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಸದ್ಯ ವಿಪರೀತಕ್ಕೆ ತಲುಪಿಲ್ಲ ಎನ್ನಬಹುದು. ಆದರೆ, ಇತರ ಜಿಲ್ಲೆಗೆ ಹೋಲಿಸಿದರೆ ಮರಣ ಪ್ರಮಾಣ ಜಿಲ್ಲೆಯಲ್ಲಿ ಹೆಚ್ಚಿದೆ. ನಿತ್ಯವೂ ಐದಾರು ಜನರು ಕೊರೋನಾಕ್ಕೆ ಬಲಿಯಾಗುತ್ತಿದ್ದಾರೆ. ಕೇವಲ ಒಂದು ತಿಂಗಳ ಅವಧಿಯಲ್ಲಿ 50 ಜನರನ್ನು ಕೊರೋನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಅದರಲ್ಲೂ ಕಳೆದ ಎಂಟು ದಿನಗಳಿಂದ ಮರಣ ಪ್ರಮಾಣ ಒಂದೇ ರೀತಿಯಲ್ಲಿ ಏರುಗತಿಯಲ್ಲಿ ಸಾಗಿದೆ. ಸದ್ಯ ಜಿಲ್ಲೆಯಲ್ಲಿ 1500 ಸಕ್ರಿಯ ಕೇಸ್‌ಗಳಿವೆ. ರಾಣಿಬೆನ್ನೂರು, ಶಿಗ್ಗಾಂವಿ ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್‌ ಕೇಸ್‌ ವರದಿಯಾಗುತ್ತಿದೆ. ಗ್ರಾಮೀಣ ಭಾಗಕ್ಕೂ ಸೋಂಕು ವ್ಯಾಪಿಸುತ್ತಿದ್ದು, ಆತಂಕ ಹುಟ್ಟಿಸಿದೆ.

ವ್ಯಾಕ್ಸಿನ್‌ ಕೊರತೆ:

ಜನವರಿ ತಿಂಗಳಲ್ಲೇ ಕೊರೋನಾ ವ್ಯಾಕ್ಸಿನ್‌ ಅಭಿಯಾನ ಆರಂಭಗೊಂಡರೂ ಹೆಚ್ಚು ಜನರು ಆಸಕ್ತಿ ತೋರಿರಲಿಲ್ಲ. ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿರುವುದರಿಂದ ಜನ ಆತಂಕಗೊಂಡಿದ್ದು, ಲಸಿಕೆ ಪಡೆಯಲು ಮುಗಿಬೀಳುತ್ತಿದ್ದಾರೆ. ಆದರೆ, ಸದ್ಯ ವ್ಯಾಕ್ಸಿನ್‌ ಕೊರತೆ ಎದುರಾಗಿದೆ. ಆರಂಭದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮತ್ತು ಕೊರೋನಾ ವಾರಿಯರ್ಸ್‌ಗೆ ಮಾತ್ರ ವ್ಯಾಕ್ಸಿನ್‌ಗೆ ಅವಕಾಶ ನೀಡಲಾಗಿತ್ತು. ಬಳಿಕ 45ರಿಂದ 60 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಯಿತು. ಈಗ 18ರಿಂದ 45 ವರ್ಷದೊಳಗಿನವರಿಗೂ ಲಸಿಕೆಗೆ ಅವಕಾಶವಿದ್ದರೂ ಇನ್ನೂ ಜಿಲ್ಲೆಯಲ್ಲಿ ಈ ವಯೋಮಿತಿಯಲ್ಲಿರುವವರಿಗೆ ಲಸಿಕೆ ಕೊಡುತ್ತಿಲ್ಲ.

ಸದ್ಯ ಮೊದಲ ಡೋಸ್‌ ಹಾಕಿಸಿಕೊಳ್ಳುವವರಿಗೆ ಲಸಿಕೆ ಲಭ್ಯವಿಲ್ಲದಂತಾಗಿದೆ. ಜಿಲ್ಲೆಯಲ್ಲಿ ಗುರುವಾರ 5000 ಡೋಸ್‌ ಲಸಿಕೆ ಲಭ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅದು ಕೇವಲ ಎರಡನೇ ಡೋಸ್‌ ಪಡೆಯುವವರಿಗೆ ಮೀಸಲಿಡಲಾಗಿದೆ. ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಎರಡೂ ಲಸಿಕೆಗಳನ್ನು ಮೊದಲ ಡೋಸ್‌ ನೀಡಲಾಗಿದೆ. ಕೋವ್ಯಾಕ್ಸಿನ್‌ ಲಸಿಕೆಯನ್ನು ಮೊದಲ ಡೋಸ್‌ ಆಗಿ ತೆಗೆದುಕೊಂಡವರಿಗೆ ಒಂದೂವರೆ ತಿಂಗಳು ಕಳೆದರೂ ಎರಡನೇ ಡೋಸ್‌ ಹಾಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಗೆ ಕೋವ್ಯಾಕ್ಸಿನ್‌ ಲಸಿಕೆ ಪೂರೈಕೆಯಾಗದೇ ಅನೇಕ ದಿನಗಳೇ ಕಳೆದಿವೆ. ಕೇವಲ ಕೋವಿಶೀಲ್ಡ್‌ ಲಸಿಕೆ ಮಾತ್ರ ಪೂರೈಕೆಯಾಗುತ್ತಿದ್ದು, ಅದು 2ನೇ ಡೋಸ್‌ನವರಿಗೆ ಮಾತ್ರ ಸಾಲುತ್ತಿದೆ. ಇದರಿಂದ ಹೊಸದಾಗಿ ಲಸಿಕೆ ಹಾಕಿಸಿಕೊಳ್ಳುವವರಿಗೆ ನಿರಾಸೆ ಉಂಟುಮಾಡಿದೆ. ಲಸಿಕಾ ಕೇಂದ್ರಕ್ಕೆ ಹೋಗಿ ಅನೇಕರು ವಿಚಾರಿಸಿ ವಾಪಸ್‌ ಬರುತ್ತಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 1.52 ಲಕ್ಷ ಜನ ಕೋವಿಶೀಲ್ಡ್‌ ಹಾಗೂ 15170 ಜನ ಕೋವ್ಯಾಕ್ಸಿನ್‌ ಲಸಿಕೆ ಪಡೆದುಕೊಂಡಿದ್ದಾರೆ. ಕೋವಿಶೀಲ್ಡ್‌ ಲಸಿಕೆ ಲಭ್ಯವಿದ್ದು, ಎಲ್ಲ ಕೇಂದ್ರಗಳಲ್ಲಿ ಲಸಿಕೆ ನೀಡುವಿಕೆ ಪ್ರಗತಿಯಲ್ಲಿದೆ. ಎರಡನೇ ಡೋಸ್‌ಗೆ ಆದ್ಯತೆ ನೀಡಲಾಗುತ್ತಿರುವುದರಿಂದ ಸ್ವಲ್ಪ ವ್ಯತ್ಯಯವಾಗುತ್ತಿದೆ. ಜಿಲ್ಲೆಗೆ ಹೆಚ್ಚಿನ ಲಸಿಕೆ ಪೂರೈಕೆಯಾಗಲಿದೆ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಜಯಾನಂದ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona