ದುಬೈ-ಮಂಗಳೂರು 2ನೇ ವಿಮಾನ, 35 ಮಂದಿ ಗರ್ಭಿಣಿಯರು ಸೇರಿ 178 ಜನ ಆಗಮನ
ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅತಂತ್ರರಾಗಿದ್ದ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಕರೆತರುವ ವಂದೇ ಭಾರತ್ ಮಿಷನ್‌ನ 2ನೇ ಕಾರ್ಯಾಚರಣೆಯಲ್ಲಿ ಸೋಮವಾರ 178 ಮಂದಿ ಪ್ರಯಾಣಿಕರು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರು(ಮೇ 19): ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅತಂತ್ರರಾಗಿದ್ದ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಕರೆತರುವ ವಂದೇ ಭಾರತ್ ಮಿಷನ್‌ನ 2ನೇ ಕಾರ್ಯಾಚರಣೆಯಲ್ಲಿ ಸೋಮವಾರ 178 ಮಂದಿ ಪ್ರಯಾಣಿಕರು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದಾರೆ.
ತಾಂತ್ರಿಕ ಕಾರಣದಿಂದಾಗಿ ಸಂಜೆ ಒಂದು ತಾಸು ವಿಳಂಬವಾಗಿ, ದುಬೈನಿಂದ ಸಂಜೆ 3.30ಕ್ಕೆ ಹೊರಟ ಏರ್‌ಇಂಡಿಯಾ ಎಕ್ಸ್‌ಪ್ರೆಸ್ 384 ವಿಮಾನ ರಾತ್ರಿ 7.45ಕ್ಕೆ ತಲುಪಿತು. ಈ ವಿಮಾನದಲ್ಲಿ ಒಟ್ಟು 178 ಮಂದಿ ಪ್ರಯಾಣಿಕರಿದ್ದು, 99 ಮಂದಿ ಪುರುಷರು, 67 ಮಹಿಳೆಯರು, 11 ಮಕ್ಕಳು ಹಾಗೂ ಒಂದು ಶಿಶು ಸೇರಿದೆ. ಈ ಪೈಕಿ 33 ಮಂದಿ ಗರ್ಭಿಣಿಯರಿದ್ದಾರೆ. ದ.ಕ. ಜಿಲ್ಲೆಯ 75, ಉಡುಪಿಯ 63, ಬೆಂಗಳೂರಿನ 25, ಕೊಡಗಿನ 8 ಮತ್ತು ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಇದ್ದಾರೆ. ಇವರಲ್ಲಿ 23 ಮಂದಿ ಈ ಹಿಂದೆ ದುಬೈನಲ್ಲಿ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದು, ಅವರಿಗೆ ನೆಗೆಟಿವ್ ಬಂದಿತ್ತು.
ಸ್ಕ್ರೀನಿಂಗ್, ಟೆಸ್ಟಿಂಗ್:
ಲ್ಯಾಂಡಿಂಗ್ ಆದ ಕೂಡಲೇ ವಿಮಾನದಿಂದ ತಲಾ 20 ಮಂದಿ ಪ್ರಯಾಣಿಕರನ್ನು ನೇರವಾಗಿ ಏರೋಡ್ರಾಮ್ ಮೂಲಕ ಮೇಲ್ಭಾಗದಲ್ಲಿ ಮೊದಲು ಥರ್ಮಲ್ ಸ್ಕಾ್ಯನಿಂಗ್ ನಡೆಸಲಾಯಿತು. ಇದೇ ವೇಳೆ ವಿಮಾನ ನಿಲ್ದಾಣ ವತಿಯಿಂದ ಪ್ರಯಾಣಿಕರಿಗೆ ಹಣ್ಣು ನೀಡಲಾಯಿತು. ನಂತರ ಇಮಿಗ್ರೆಷನ್ ಕ್ಲಿಯರೆನ್ಸ್ ಪ್ರಕ್ರಿಯೆ ನಡೆಸಲಾಯಿತು. ಇತ್ತೀಚೆಗೆ ದುಬೈನಿಂದ ಪ್ರಥಮ ವಿಮಾನ ಆಗಮಿಸಿದಾಗ ಉಂಟಾದ ಗೊಂದಲಗಳನ್ನು ಈ ಬಾರಿ ಸರಿಪಡಿಸಿಕೊಂಡ ಜಿಲ್ಲಾಡಳಿತ ಸಾಕಷ್ಟುಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು.
ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ
ಈ ಬಾರಿ ಅಸ್ವಸ್ಥ ಹಾಗೂ ಅಶಕ್ತ ಪ್ರಯಾಣಿಕರ ಲಗೇಜು ಹಿಡಿದುಕೊಂಡು ಬರಲು ಪಿಪಿಇ ಕಿಟ್ ಧರಿಸಿದ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಎರಡು ಕಡೆ ಥರ್ಮಲ್ ಸ್ಕಾ್ಯನಿಂಗ್, ತಲಾ ನಾಲ್ಕು ಕಡೆಗಳಲ್ಲಿ ವಿವಿಧ ತಪಾಸಣೆ ವ್ಯವಸ್ಥೆಗೊಳಿಸಲಾಗಿತ್ತು. ಇದರಿಂದಾಗಿ ವಿಮಾನ ಲ್ಯಾಂಡ್ ಆದ ಒಂದು ಗಂಟೆಯೊಳಗೆ ಎಲ್ಲರೂ ವಿಮಾನ ನಿಲ್ದಾಣದ ಒಳಗೆ ಬರಲು ಸಾಧ್ಯವಾಯಿತು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭಾನುವಾರವೇ ವಿಮಾನ ನಿಲ್ದಾಣಕ್ಕೆ ತೆರಳಿ ಈ ಕುರಿತಂತೆ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದ್ದರು.
ರಾಜ್ಯಕ್ಕೆ 'ಮಹಾ' ಕಂಟಕ: ಮೊದಲ ಬಾರಿಗೆ ಕೊರೋನಾ ಶತಕ ಸ್ಫೋಟ!
ಇಮಿಗ್ರೆಷನ್ ಕ್ಲಿಯರೆನ್ಸ್ ಬಳಿಕ ಪ್ರಯಾಣಿಕರಿಗೆ ಆಹಾರ ಕಿಟ್ ವಿತರಿಸಲಾಯಿತು. ನಂತರ ಮೊದಲೇ ಪ್ರಯಾಣಿಕರು ಗೊತ್ತುಪಡಿಸಿದ ಕ್ವಾರಂಟೈನ್ ಕೇಂದ್ರಗಳಿಗೆ ಅವರನ್ನು ಕಳುಹಿಸಲಾಯಿತು. ದ.ಕ. ಜಿಲ್ಲೆಯ ಪ್ರಯಾಣಿಕರನ್ನು ವಿವಿಧ ಕಡೆಗಳಲ್ಲಿ ಸಿದ್ಧಪಡಿಸಿದ ಕ್ವಾರಂಟೈನ್ ಕೇಂದ್ರಗಳಿಗೆ ಬಸ್ ಮೂಲಕ ಕಳುಹಿಸಲಾಯಿತು. ಉಡುಪಿ, ಕೊಡಗು, ಉತ್ತರ ಕನ್ನಡ ಹಾಗೂ ಬೆಂಗಳೂರಿನ ಪ್ರಯಾಣಿಕರನ್ನು ಅವರ ಊರುಗಳಿಗೆ ನೇರವಾಗಿ ಬಸ್‌ಗಳ ಮೂಲಕ ಕ್ವಾರಂಟೈನ್‌ಗೆ ಕಳುಹಿಸಲಾಯಿತು.
ಇಂದು ಕೋವಿಡ್ ಪರೀಕ್ಷೆ:
ದುಬೈನಿಂದ ಎರಡನೇ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕ ಕೋವಿಡ್ ಪರೀಕ್ಷೆ ಮೇ 19ರಂದು ನಡೆಯಲಿದೆ. ಕ್ವಾರಂಟೈನ್ ಕೇಂದ್ರಗಳಿಗೆ ತೆರಳಿ ವೈದ್ಯಕೀಯ ಸಿಬ್ಬಂದಿ ಪ್ರಯಾಣಿಕರ ಗಂಟಲು ದ್ರವ ಸ್ಯಾಂಪಲ್ ಪಡೆಯಲಿದ್ದಾರೆ. ಪ್ರಥಮ ವಿಮಾನದಲ್ಲಿ ಆಗಮಿಸಿದ ದುಬೈ ಪ್ರಯಾಣಿಕರ ಪೈಕಿ 15 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.