* ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ* ಮಡಿಕೇರಿಯಿಂದ ಬೆಂಗಳೂರಿಗೆ ಬಂದಿದ್ದ ಬಸ್* ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ

ಬೆಂಗಳೂರು(ಮೇ.09): ಮಡಿಕೇರಿಯಿಂದ ಬೆಂಗಳೂರಿಗೆ ಬಂದಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದ ಪ್ರಕರಣ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಕೆಂಗೇರಿಯ ಭಾರತ್ ಪೆಟ್ರೋಲಿಯಂ ಬಳಿಯ ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿ 45 ಜನ ಪ್ರಯಾಣ ಮಾಡುತ್ತಿದ್ದರು. ಘಟನೆಯಲ್ಲಿ 29 ಜನ ಪ್ರಯಾಣಿಕರಿಗೆ ಗಾಯಗಳಾಗಿವೆ. 25 ಜನರಿಗೆ ಸಣ್ಣಪುಟ್ಟ ಗಾಯಗಳಾದ್ರೆ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಆರಂಭಿಸಿ, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 
 ಗುಂಡಿ ಇಲ್ಲ, ಹಂಪ್‌ ಬಳಿ ಬಸ್‌ ನಿಲ್ಲಿಸಿದಾಗ ಘಟನೆ

ಇನ್ನು ಈ ಘಟನೆ ಬೆನ್ನಲ್ಲೇ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿ ವಿಚಾರ ಮತ್ತೆ ಸದ್ದು ಮಾಡಲಾರಂಭಿಸಿದ್ದು, ಈ ಘಟನೆಗೂ ರಸ್ತೆ ಗುಂಡಿಯೇ ಕಾರಣ ಎನ್ನಲಘಾಇದೆ. ಹೀಗಿರುವಾಗ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಬಗ್ಗೆ ಹೇಳಿಕೆ ನೀಡಿದ್ದು, ನಮ್ಮ ವರದಿ ಪ್ರಕಾರ ಅದು ಹಂಪ್ ಬಳಿ ನಿಲ್ಲಿಸುವಾಗ ಆಗಿರೋದು, ಗುಂಡಿ ಇಲ್ಲ ಅಂತ ಗೊತ್ತಾಗಿದೆ. ಬಸ್ ಡಿಕ್ಕಿ ಹೊಡೆದಿದೆ ಎಂಬ ಕಾರಣ ನೋಡಬೇಕಿದೆ. ಅಲ್ಲದೇ ಚಾಲಕರ ಬಳಿ ಪೂರ್ಣ ಮಾಹಿತಿ ಪಡೆದು ತನಿಖೆ ಆಗಬೇಕಾಗಿದೆ. ಪಾಲಿಕೆ ಕಾರಣ ಎಂದು ಹೇಳಲು ಆಗಲ್ಲ ಎಂದಿದ್ದಾರೆ.

ಇದೇ ವೇಳೆ ಎಚ್‌ಎಸ್‌ಆರ್ ಲೇಔಟ್ ನಲ್ಲಿ‌ ಕ್ರೀಡಾಂಗಣ ಬಿದ್ದ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು, ಮಳೆ ಗಾಳಿಯಿಂದಾಗಿ ಕ್ರೀಡಾಂಗಣ ಚಾವಣಿ ಬಿದ್ದಿದೆ. ಗುತ್ತಿಗೆದಾರರೇ ಚಾವಣಿಯನ್ನು ಮರು ನಿರ್ಮಾಣ ಮಾಡಬೇಕಿದೆ. ಗುತ್ತಿಗೆದಾರ ಯಾರು ಎಂದು ಗೊತ್ತಿಲ್ಲ, ಆದರೆ ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತದೆ ಹಾಗೂ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 

ಗುಂಡಿ ಮುಚ್ಚುವ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು ಗುಂಡಿಗಳ ಕುರಿತ ಇಂದು ಮಧ್ಯಾಹ್ನ 3 ಗಂಟೆಗೆ ಅನ್ ಲೈನ್ ಸಭೆ ನಿಗದಿಯಾಗಿದೆ. ಎಲ್ಲ ಮುಖ್ಯ ಇಂಜಿನಿಯರ್ ಗಳಿಗೂ ಮರು ಸರ್ವೆ ಮಾಡಲು ಸೂಚನೆ ನೀಡಲಾಗುತ್ತದೆ. ನಂತರ ಗುಂಡಿ ಮುಚ್ಚುವ ಸಂಬಂಧ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಅಪಾಯದಂಚಿನ ಕಟ್ಟಡಗಳ ತೆರವು ಮಾಡಲು ಸರ್ವೆ ಮಾರ್ಕಿಂಗ್ ಮಾಡಲಾಗಿದೆ. ಪ್ರತಿ ಶನಿವಾರ ತೆರವು ಕಾರ್ಯ ನಡೆಯುತ್ತಿದೆ. ಬಹಳ ಹಳೆಯ ಕಟ್ಟಡ ಇರುವುದರಿಂದ ಮಾಹಿತಿ ಕೊಡಲಾಗಿದೆ. ಕೆಲವೊಂದು ಲೋ ಲೆವೆಲ್ ಕಟ್ಟಡ ಇದೆ. ಮತ್ತಷ್ಟು ದೊಡ್ಡ ಎತ್ತರದ ಕಟ್ಟಡಗಳು ಇದೆ. ಇದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತದೆ ಎಂದಿದ್ದಾರೆ.