ಯಾದಗಿರಿ(ಜೂ.01): ಅತೀ ಹೆಚ್ಚು (285) ಸೋಂಕಿತರನ್ನು ಹೊಂದಿದ ಎಂಬ ಕುಖ್ಯಾತಿಗೆ ಪಾತ್ರವಾದ ಯಾದಗಿರಿ ಜಿಲ್ಲೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಂ. 1 ಪಟ್ಟ ಪಡೆದಿರುವುದು ದುರದೃಷ್ಟಕರ. ಕಲಬುರಗಿ, ರಾಯಚೂರು, ಬೀದರ್, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಿಗಿಂತಲೂ ಇಲ್ಲಿ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಬೆಂಗಳೂರು ನಗರ (357) ನಂತರ ಎರಡನೇ ಸ್ಥಾನದಲ್ಲಿದೆ. ಗ್ರೀನ್ ಝೋನ್ ಖ್ಯಾತಿಯ ಜಿಲ್ಲೆಯಲ್ಲಿ ಕೆಂಪು ಹೆಚ್ಚಾಗತೊಡಗಿದೆ.

ಅತೀ ಹೆಚ್ಚು ವಲಸಿಗರ ವಾಪಸ್ಸಾತಿಗೆ ಸಾಕ್ಷಿಯಾದ ಯಾದಗಿರಿ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಹೆಚ್ಚಾಗಿ ಬಂದವರಲ್ಲೇ ಸೋಂಕು ಕಾಣಿಸಿಕೊಂಡಿದೆ. ಭಾನುವಾರ ಒಂದೇ ದಿನದಲ್ಲಿ 44 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಮೇ 12 ರಿಂದ ಈವರೆಗೆ (ಮೇ 31) ಜಿಲ್ಲೆಯಲ್ಲಿ 285 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. 

ಯಾದಗಿರಿಯಲ್ಲಿ ಸದ್ದಿಲ್ಲದೆ ಹಬ್ಬುತ್ತಿರುವ ಕೊರೋನಾ ಸೋಂಕು: ಆತಂಕದಲ್ಲಿ ಜನತೆ

ಕ್ವಾರಂಟೈನ್ ಕೇಂದ್ರಗಳಲ್ಲಿದ್ದ ಬಹುತೇಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ, ಭಾನುವಾರದ ಸೋಂಕಿತ ಪ್ರಕರಣಗಳಲ್ಲಿ ಕೆಲವರು ಮನೆಗೆ ವಾಪಸ್ಸಾದವರೂ ಇದ್ದಾರೆ ಅನ್ನೋ ಮಾಹಿತಿ ಭಾರಿ ಆಘಾತ ಮೂಡಿಸಿದೆ. ಸರ್ಕಾರದ ನಿಯಮಗಳಂತೆ, ಕಳೆದೆರಡು ದಿನಗಳ ಹಿಂದಷ್ಟೇ ಇವರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿಂದ ಬಿಡುಗಡೆ ಮಾಡಲಾಗಿತ್ತು. ಭಾನುವಾರದ ಸೋಂಕಿತರಲ್ಲಿ 18 ಜನರು ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಹೊಂದಿದ ಮೇಲೆ, ಎಲ್ಲ ಕಡೆಗಳಲ್ಲಿ ತಿರುಗಾಡಿದ್ದಾರೆ, ಅಂಗಡಿಗಳಲ್ಲಿ ಸಾಮಗ್ರಿಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಈ ಪೈಕಿ ಕೆಲವರ ಹುಡುಕಾಟದಲ್ಲಿರುವ ಜಿಲ್ಲಾಡಳಿತಕ್ಕೆ ಮತ್ತೇ ಅವರನ್ನು ಆಸ್ಪತ್ರೆಗೆ ಕರೆತರುವುದು ತಲೆನೋವಾಗಿ ಪರಿಣಮಿಸಿದೆ.

- ಮೇ 12 ರಂದು : 2 ಪ್ರಕರಣಗಳು
- ಮೇ 17 ರಂದು : 3 ಪ್ರಕರಣಗಳು
- ಮೇ 18 ರಂದು : 6 ಪ್ರಕರಣಗಳು ( ಕಲಬುರಗಿ ಜಿಮ್ಸ್‌ನಲ್ಲಿದ್ದ ಮಹಿಳೆಯೊಬ್ಬಳು ಸೇರಿ)            
- ಮೇ 19 ರಂದು : 1 ಪ್ರಕರಣ
- ಮೇ 20 ರಂದು : 1 ಪ್ರಕರಣ
- ಮೇ 22 ರಂದು : 2 ಪ್ರಕರಣಗಳು
- ಮೇ 23 ರಂದು : 72 ಪ್ರಕರಣಗಳು
- ಮೇ 24 ರಂದು : 24 ಪ್ರಕರಣಗಳು
- ಮೇ 25 ರಂದು : 15 ಪ್ರಕರಣಗಳು
- ಮೇ 26 ರಂದು : 14 ಪ್ರಕರಣಗಳು
- ಮೇ 27 ರಂದು : 16 ಪ್ರಕರಣಗಳು
- ಮೇ 28 ರಂದು : 7 ಪ್ರಕರಣಗಳು
- ಮೇ 29 ರಂದು : 60 ಪ್ರಕರಣಗಳು
- ಮೇ 30 ರಂದು : 18 ಪ್ರಕರಣಗಳು
- ಮೇ 31 ರಂದು : 44 ಪ್ರಕರಣಗಳು
ಮೇ 12 ರಿಂದ ಮೇ 31 ರವರೆಗೆ ಒಟ್ಟು 285 ಪ್ರಕರಣಗಳು.