ಆನಂದ್ ಎಂ. ಸೌದಿ

ಯಾದಗಿರಿ(ಜೂ.01): ‘ಗ್ರೀನ್ ಝೋನ್’ ಪಟ್ಟಿಯಲ್ಲಿದ್ದ ಯಾದಗಿರಿ ಜಿಲ್ಲೆಯದ್ದು ಆಗ ಕಲ್ಲಂಗಡಿ ಹಣ್ಣಿನಂತಹ ಸ್ಥಿತಿ ಇತ್ತು. ಈಗ ಕೀವು ತುಂಬಿದ ಗಾಯದ ಮೇಲೆ ಚೆಂದದೊಂದು ಪ್ಲಾಸ್ಟರ್ ಹಚ್ಚಿ, ಗಾಯ ಮಾಯ್ದಿದೆ ಎಂದು ತೋರಿಸುವ ಪ್ರಯತ್ನ ನಡೆದಿದೆ ! ಇದು ಹೀಗೆ ಮುಂದುವರೆದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸಹಸ್ರಾರು ಸಾವಿರ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ಬಂದರೂ ಅಚ್ಚರಿ ಪಡಬೇಕಿಲ್ಲ. 

ಯಾದಗಿರಿಯಲ್ಲಿ ಕೊರೋನಾ ಸೋಂಕು ಸದ್ದಿಲ್ಲದೆ ಹಬ್ಬುತ್ತಿರುವುದು ಭಾರಿ ಆತಂಕ ಮೂಡಿಸಿದೆ. ಇಷ್ಟು ದಿನಗಳವರೆಗೆ ಕ್ವಾರಂಟೈನ್ ಕೇಂದ್ರದಲ್ಲಿದ್ದವರಿಗೆ ಪಾಸಿಟಿವ್ ಬಂದಿದೆ ಎಂಬುದಷ್ಟನ್ನೇ ಕೇಳಿದ್ದ ಯಾದಗಿರಿ ಜನತೆ ಇದೀಗ ಕಹಿ ಸತ್ಯವೊಂದನ್ನು ಅನಿವಾರ್‍ಯವಾಗಬೇಕಿ ಕೇಳಬೇಕಿದೆ. ಸರ್ಕಾರದ ಸೂಚನೆಯಂತೆ ಕ್ವಾರಂಟೈನ್ ಕೇಂದ್ರಗಳಿಂದ ಮನೆಗೆ ವಾಪಸ್ಸಾದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಆಘಾತಕಾರಿ ಬೆಳಕಿಗೆ ಬಂದಿದೆ. 

ಯಾದಗಿರಿ ಜಿಲ್ಲಾಡಳಿತದಿಂದ ಮಹಾ ಯಡವಟ್ಟು: ರಿಪೋರ್ಟ್‌ ಬರೋ ಮುನ್ನ ಕೊರೋನಾ ಶಂಕಿತರು ರಿಲೀಸ್‌..!

ಅನ್ಯರಾಜ್ಯಗಳಿಂದ ಜಿಲ್ಲೆಗೆ ವಾಪಸ್ಸಾದ 14956 ವಲಸಿಗರನ್ನು ಕ್ವಾರಂಟೈನ್ ಕೇಂದ್ರಗಳಿಂದ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಏಳು ದಿನ ಪೂರೈಸಿದರೆ ಸಾಕು, ಕೋವಿಡ್ ಟೆಸ್ಟ್ ನಡೆಸಿದಿದ್ದರೂ ಪರವಾಗಿಲ್ಲ ಬಿಟ್ಟುಬಿಡಿ ಎಂದಿದ್ದ ಸರ್ಕಾರದ ಆದೇಶ ಯಾದಗಿರಿ ಜಿಲ್ಲೆಗೆ ಶಾಪವಾಗಿ ಪರಿಣಮಿಸುವ ಸಾಧ್ಯತೆಯಿದೆ. 

ಆರೋಗ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೆದ್ ಆಖ್ತರ್ ಅವರ ಆದೇಶ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಲೂ ಕಾರಣವಾಗಬಹುದು. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಸ್ಟಾಂಡರ್ಡ್‌ ಆಪರೇಟಿಂಗ್ ಪ್ರೊಸೀಜರ್‌ಗಳನ್ನೇ (ಎಸ್.ಓ.ಪಿ) ಫಾಲೋ ಮಾಡಲು ಹೇಳಿದ, ಸರ್ಕಾರದ ಆಯಕಟ್ಟಿನ ಜಾಗೆಗಳಲ್ಲಿ ಕುಳಿತ ಅಧಿಕಾರಿಗಳ ಇಂತಹುದ್ದೊಂದ ಆದೇಶ ಜಿಲ್ಲೆಯಲ್ಲಿನ ವ್ಯವಸ್ಥೆಯನ್ನೇ ಬುಡಮೇಲು ಮಾಡಿದಂತಾಗಿದೆ.
ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಾಗತೊಡಗಿದ್ದರೂ, ವಾಸ್ತವತೆಯ ಅರಿವಿಲ್ಲದಂತೆ ಅಥವಾ ಅರಿವಿದ್ದೂ ಸರ್ಕಾರದ ಶಹಾಬ್ಬಾಸ್‌ಗಿರಿ ಪಡೆಯುವದಕ್ಕಾಗೇನೋ ಎನ್ನುವಂತೆ ಮೌನವಾಗಿರುವ ಜಿಲ್ಲಾಡಳಿತ ಎಚ್ಚರಗೊಳ್ಳಬೇಕಾಗಿದೆ. ಸರ್ಕಾರದ ನಿಯಮಗಳು ಯಾದಗಿರಿ ಜಿಲ್ಲೆಗೆ ಮುಂದಿನ ದಿನಗಳಲ್ಲಿ ಭಾರಿ ಆತಂಕ ಮೂಡಿಸಬಹುದು ಎಂಬ ಲೆಕ್ಕಾಚಾರಗಳನ್ನು ಸರ್ಕಾರದ ಮೇಲ್ಮಟ್ಟದಲ್ಲಿ ಮುಂದಿಡಬೇಕಾಗಿದೆ. ಇಲ್ಲಿನ ವಸ್ತುಸ್ಥಿತಿಯ ಬಗ್ಗೆ ನಿಷ್ಠುರವಾದ ಮುಂದಡಿ ಇಡಬೇಕಾಗಿದೆ. ನಿಯಮಗಳನ್ನು ಅನುಸರಿಬೇಕು ನಿಜ. ಹಾಗಂತ, ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಲು ಕೈ ಹಾಕುವ ಬದಲು ಪರ್ಯಾಯ ಮಾರ್ಗಗಳತ್ತಲೂ ಯೋಚಿಸಬೇಕಾದ ಜಿಲ್ಲಾಡಳಿತ, ಪ್ರಾಕ್ಟಿಕಲ್ ಲೈಫಿಗೆ ಮರಳಬೇಕಿದೆ ಎಂಬ ಮಾತುಗಳು ನಾಗರಿಕ ವಲಯದಲ್ಲಿ ಕೇಳಿ ಬರುತ್ತಿವೆ.

“ಯಾದಗಿರಿ ಮೇ ಸಬ್ ಠೀಕ್ ಹೈ" ಎನ್ನುತ್ತ ಅಪರೂಪಕ್ಕೊಮ್ಮೆ ಬರುವ ಅತಿಥಿಯಂತೆ ಬಂದು ಹೇಳಿ ಹೋಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಈಗ ಇತ್ತ ಕಾಲಿಡಬೇಕಾಗಿದೆ. ಕೀವು ತುಂಬಿದ ಗಾಯಕ್ಕೆ ಮೇಲಿನಿಂದ ಚೆಂದದೊಂದು ಪ್ಲಾಸ್ಟ್ ಸುತ್ತಿ, ಸುಗಂಧ ಲೇಪನ ಮಾಡಿದಂತಿರುವ ಯಾದಗಿರಿ ಜಿಲ್ಲೆಯ ಸದ್ಯದ ಪರಿಸ್ಥಿತಿಗೆ ಸರ್ಕಾರದ ಅರೆಬೆಂದ ಆದೇಶಗಳೇ ಕಾರಣವಾಗಲಿದೆ ಎಂಬ ಮಾತುಗಳು ಇಲ್ಲೀಗ ಪ್ರತಿಧ್ವನಿಸುತ್ತಿವೆ.