ಬೆಂಗಳೂರು[ಮಾ.20]: ಸಾರ್ವಜನಿಕರ ಅನುಕೂಲಕ್ಕಾಗಿ ವಿಧಾನಸೌಧ, ವಿಕಾಸ ಸೌಧ, ಹೈಕೋರ್ಟ್‌ ಆವರಣ ಸೇರಿದಂತೆ 27 ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಗುರುವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ ಸದಸ್ಯ ಯು.ಬಿ.ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸೌಧ, ವಿಕಾಸಸೌಧ, ಕಬ್ಬನ್‌ಪಾರ್ಕ್, ಬಹುಮಹಡಿ ಕಟ್ಟಡ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ನಿತ್ಯ ಸಾವಿರಾರು ಸಾರ್ವಜನಿಕರು ಬರುತ್ತಾರೆ. ಈ ಸ್ಥಳಗಳಲ್ಲಿ ಬಳಕೆಗೆ ಸಾರ್ವಜನಿಕ ಶೌಚಾಲಯಗಳು ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ನಿಗಾದಲ್ಲಿ ಇರುವವರಿಗೆ ಮನೆ ಖಾಲಿ ಮಾಡಲು ಒತ್ತಡ!

ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಸದಸ್ಯ ಎಚ್‌.ಎಂ.ರೇವಣ್ಣ, ಹಲವು ಕಡೆ ಹಳೆ ಬಸ್‌ಗಳನ್ನು ಮೊಬೈಲ್‌ ಟಾಯ್ಲೆಟ್‌ಗಳಾಗಿ ಪರಿವರ್ತಿಸಿ ಬಳಕೆ ಮಾಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಹೀಗಾಗಿ ನಮ್ಮಲ್ಲಿಯೂ ಈ ಮಾದರಿ ಅನುಸರಿಸಬಹುದು ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಈಗಾಗಲೇ ಹಳೆ ಬಸ್‌ಗಳನ್ನು ಮೊಬೈಲ್‌ ಟಾಯ್ಲೆಟ್‌ಗಳಾಗಿ ಪರಿವರ್ತಿಸುವ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.