Asianet Suvarna News Asianet Suvarna News

ಕೊರೋನಾ ಕಾಟ: ಮರಣ ‘ಮೃದಂಗ’ಕ್ಕೆ ಬೆದರಿದ ಧಾರವಾಡ!

ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆಯಲ್ಲಿ 5ನೇ ಸ್ಥಾನಕ್ಕಿದೆ ಜಿಲ್ಲೆ| ಪಾಸಿಟಿವ್‌ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚಳ|ಜೂ. 10ಕ್ಕೆ ಮೊದಲ ಸಾವು, ಜು. 8, 9ರಂದು ತಲಾ ಏಳು ಸಾವು|ಜುಲೈ 9ರ ವರೆಗೆ ಜಿಲ್ಲೆಯಲ್ಲಿ ಒಟ್ಟು 832 ಪಾಸಿಟಿವ್‌, 27 ಸಾವು|

27 Corona Patients died in Dharwad District Last One month
Author
Bengaluru, First Published Jul 11, 2020, 7:10 AM IST

ಬಸವರಾಜ ಹಿರೇಮಠ

ಧಾರವಾಡ(ಜು.11): ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೋವಿಡ್‌-19 ಪಾಸಿಟಿವ್‌ ಪ್ರಕರಣಗಳೊಂದಿಗೆ ಸಾವಿನ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ತಿಂಗಳ ಅಂತರದಲ್ಲಿ ಬರೋಬರಿ 27 ಜನರನ್ನು ವೈರಸ್‌ಗೆ ಬಲಿ ಪಡೆದಿದೆ.
ಜು. 8, 9ರಂದು 14 ಜನರು ಮೃತಪಟ್ಟಿದ್ದರಿಂದ ಜನತೆ ಭಯಭೀತರಾಗಿದ್ದಾರೆ. ಆರಂಭದಲ್ಲಿ ಕೋವಿಡ್‌ ನಿಯಂತ್ರಣದಲ್ಲಿದ್ದ ಜಿಲ್ಲೆಯಲ್ಲಿ ಒಂದು ತಿಂಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಮೇಲಿನ ಸ್ಥಾನವನ್ನು ಜಿಲ್ಲೆಯು ಪಡೆದುಕೊಂಡಿದ್ದು ಭವಿಷ್ಯದ ದಿನಗಳ ಬಗ್ಗೆ ಚಿಂತಿಸುವಂತಾಗಿದೆ.

ಜೂ. 10 ಮೊದಲ ಪ್ರಕರಣ:

ಧಾರವಾಡದ ಹೊಸಯಲ್ಲಾಪುರದ ವ್ಯಕ್ತಿಗೆ ಮಾ. 23ರಂದು ಮೊದಲ ಕೋವಿಡ್‌ ಪ್ರಕರಣ ದಾಖಲಾಗಿತ್ತು. ಮಾ. 24ರಿಂದ ಆದ ಲಾಕ್‌ಡೌನ್‌ ಹಾಗೂ ಎಚ್ಚರಿಕೆ ಕ್ರಮಗಳ ಫಲವಾಗಿ ಎರಡೂವರೆ ತಿಂಗಳ ವರೆಗೆ ಅಂದರೆ ಜೂ. 10ರ ವರೆಗೆ ಜಿಲ್ಲೆಯಲ್ಲಿ ಒಂದೂ ಸಾವು ಆಗಿರಲಿಲ್ಲ. ಲಾಕ್‌ಡೌನ್‌ ಸಡಿಲಿಕೆ ಬಳಿಕ ಹೊರ ರಾಜ್ಯಗಳಿಂದ ಮೂಲ ಧಾರವಾಡಿಗರು ಆಗಮಿಸಿದಾಗ ಕೊರೋನಾ ಸಂಖ್ಯೆಯೂ ಹೆಚ್ಚಿತು. ಜತೆಗೆ ಜೂ. 10ರಂದು ಮುಂಬೈನಿಂದ ಬಂದಿದ್ದ 58 ವರ್ಷದ ವ್ಯಕ್ತಿ ಕೊರೋನಾ ಹಿನ್ನೆಲೆಯಲ್ಲಿ ಬಲಿಯಾದರು.

ಹುಬ್ಬಳ್ಳಿ: ಆ್ಯಂಬುಲೆನ್ಸ್‌ಗೆ 4 ಗಂಟೆ ಕಾದ ಕೊರೋನಾ ಸೋಂಕಿತ

ಹೆಚ್ಚಳ ಯಾವಾಗ?:

ಮಾರ್ಚ್‌, ಏಪ್ರಿಲ್‌ ಹಾಗೂ ಮೇ ವರೆಗೂ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದ್ದ ಕೋವಿಡ್‌ ನಂತರದಲ್ಲಿ ಏರಿಕೆ ಕಂಡಿತು. ಅದರಲ್ಲೂ ಜೂನ್‌ ಹಾಗೂ ಜುಲೈ ತಿಂಗಳಲ್ಲಿ ಕೋವಿಡ್‌ ಪಾಸಿಟಿವ್‌ ಜತೆಗೆ ಮರಣ ಸಂಖ್ಯೆಯೂ ಏರಿಕೆಯಾಗುತ್ತಿದೆ. ಜೂನ್‌ನಲ್ಲಿ ಒಂಭತ್ತು, ಜುಲೈ ತಿಂಗಳಲ್ಲಿ ಒಂಭತ್ತು ದಿನಗಳ ಅಂತರದಲ್ಲಿ 18 ಜನ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳಿರುವ ಹುಬ್ಬಳ್ಳಿಯವರೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೃತರಾಗಿದ್ದಾರೆ. ಆನಂತರದಲ್ಲಿ ಧಾರವಾಡ, ನವಲಗುಂದ ತಾಲೂಕುಗಳು ಸ್ಥಾನ ಪಡೆದಿವೆ.

ವಯಸ್ಸಾದವರೆ ಹೆಚ್ಚು:

ಜಿಲ್ಲೆಯಲ್ಲಿ ಒಟ್ಟು ಮೃತರಾದ 27 ಸೋಂಕಿತರ ಪೈಕಿ ನವಲಗುಂದ ತಾಲೂಕು ಶಿರಕೋಳದ 34 ವರ್ಷದ ವ್ಯಕ್ತಿ ತೀವ್ರ ಉಸಿರಾಟದಿಂದ, ಸಾಸ್ವಿಹಳ್ಳಿಯ 44 ವರ್ಷದ ವ್ಯಕ್ತಿ (ಎಚ್‌ಐವಿ ರೋಗಿ) ಯೊಬ್ಬರನ್ನು ಹೊರತು ಮೃತರಾದ ಉಳಿದ 25 ಜನರು 50 ವರ್ಷ ಮೇಲಿನವರು. ಮೃತರೆಲ್ಲರೂ ಕೊರೋನಾ ವೈರಸ್‌ ಅಲ್ಲದೇ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನುವುದು ಗಮನಾರ್ಹ. ಕೊರೋನಾ ಪಾಸಿಟಿವ್‌ ಸಂಖ್ಯೆಯಲ್ಲಿ ಮಕ್ಕಳ ಪಾತ್ರವೂ ಇದೆ. ಒಂದು ದಿನದ ಹಸಿಗೂಸು ಸೇರಿದಂತೆ 14 ವರ್ಷದ 20ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿತ್ತು. ಆದರೆ, ಇವರೆಲ್ಲರೂ ಚೇತರಿಕೆ ಕಂಡಿರುವುದು ನೆಮ್ಮದಿ ತರಿಸಿದೆ. ಕೊರೋನಾ ಸೋಂಕಿತರು ವಯಸ್ಸಾಗಿದ್ದು, ಸಕ್ಕರೆ ಕಾಯಿಲೆ, ರಕ್ತದೊತ್ತಡ ಇತರ ಗಂಭೀರ ಕಾಯಿಲೆಗಳಿದ್ದವರೇ ಹೆಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನಾದರೂ ಜನರು ಸ್ವಯಂಪ್ರೇರಣೆಯಿಂದ ಮನೆಯಿಂದ ಹೊರ ಹೋಗದೆ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕಾಗಿರುವುದು ತುರ್ತು ಅಗತ್ಯವಾಗಿದೆ.

7ಮತ್ತು 5ನೇ ಸ್ಥಾನ

ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಲಿಸಿದರೆ ಅತಿ ಹೆಚ್ಚು ಕೋವಿಡ್‌ ಪಾಸಿಟಿವ್‌ ಸಂಖ್ಯೆಯಲ್ಲಿ ಧಾರವಾಡ ಜಿಲ್ಲೆಯು 7ನೇ ಸ್ಥಾನದಲ್ಲಿದ್ದರೆ ಕೊರೋನಾದಿಂದ ಅನಾರೋಗ್ಯ ಉಂಟಾಗಿ ಅತಿ ಹೆಚ್ಚು ಮೃತರಾದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಮೃತರ ಪಟ್ಟಿಯಲ್ಲಿ ಮೊದಲ ಸ್ಥಾನ ರಾಜಧಾನಿ ಬೆಂಗಳೂರು (117) ಪಡೆದರೆ 2ನೇ ಸ್ಥಾನದಲ್ಲಿ ಬೀದರ (49), 3ನೇ ಸ್ಥಾನದಲ್ಲಿ ಬಳ್ಳಾರಿ (40) 4ನೇ ಸ್ಥಾನದಲ್ಲಿ ಕಲಬುರ್ಗಿ (32) ಹಾಗೂ 5ನೇ ಸ್ಥಾನದಲ್ಲಿ ಧಾರವಾಡ (27) ಸ್ಥಾನ ಪಡೆದಿದೆ.
 

Follow Us:
Download App:
  • android
  • ios