ಇದ್ದದ್ದು 26, ಚಲಾವಣೆಯಾಗಿದ್ದು 27 ಮತ: ಹೇಗಂತೀರಾ..?
ಫೆ. 10ಕ್ಕೆ ಮುಂದೂಡಿದ ಹಲುವಾಗಲು ಗ್ರಾಪಂ ಚುನಾವಣೆ| ಒಟ್ಟು 26 ಸದಸ್ಯರು ಬಲ ಹೊಂದಿದ ಪಂಚಾಯ್ತಿ| ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮ ಪಂಚಾಯ್ತಿ| ಬ್ಯಾಲೇಟ್ ಪೇಪರ್ ಕೊಡುವಾಗ 26ರ ಬದಲಾಗಿ 27 ನೀಡಲಾಗಿದೆ|
ಹರಪನಹಳ್ಳಿ(ಫೆ.06): ಇರುವ ಮತಗಳಿಗಿಂತ ಒಂದು ಮತ ಹೆಚ್ಚು ಚಲಾವಣೆಯಾದ ಹಿನ್ನೆಲೆ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಫೆ. 10ಕ್ಕೆ ಮುಂದೂಡಿದ ಘಟನೆ ತಾಲೂಕಿನ ಹಲುವಾಗಲು ಗ್ರಾಮ ಪಂಚಾಯ್ತಿಯಲ್ಲಿ ಶುಕ್ರವಾರ ಜರುಗಿದೆ.
ಪಂಚಾಯ್ತಿ ಒಟ್ಟು 26 ಸದಸ್ಯರು ಬಲ ಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ ಕೋಳಿಕಾಲರ ರುದ್ರಪ್ಪ ಹಾಗೂ ಎಂ. ದ್ಯಾಮಪ್ಪ ಕಣಕ್ಕಿಳಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಹೇಮಕೂಸುಂಬಿ ಹಾಗೂ ಸರಿತಾ ಭೋವಿ ಸ್ಪರ್ಧಿಸಿದ್ದರು. ಅಧ್ಯಕ್ಷ ಸ್ಥಾನದ
ಚುನಾವಣೆಗೆ ಬಿಳಿ ಬಣ್ಣದ ಮತ ಪತ್ರ ನೀಡಲಾಗಿತ್ತು. ಚುನಾವಣೆ ಬಳಿಕ ಮತ ಎಣಿಕೆ ವೇಳೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕೋಳಿಕಾಲರ ರುದ್ರಪ್ಪಗೆ 16 ಹಾಗೂ ದ್ಯಾಮಪ್ಪಗೆ 11 ಮತ ಚಲಾವಣೆಯಾಗಿವೆ. ಅಂದರೆ 27 ಚಲಾವಣೆಯಾಗಿದ್ದು 1 ಮತ ಹೆಚ್ಚಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಇದರಿಂದ ಅಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಲಿಲ್ಲ. ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ ಹಾಗೂ ತಹಸೀಲ್ದಾರ್ ಎಲ್.ಎಂ. ನಂದೀಶ ಹಲುವಾಗಲು ಪಂಚಾಯ್ತಿಗೆ ತೆರಳಿ ಸದಸ್ಯರ ಜತೆ ಚರ್ಚಿಸಿ ಫೆ. 10ರಂದು ಬೆಳಗ್ಗೆ 11 ಗಂಟೆಗೆ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಿಗದಿ ಮಾಡಿ ಸಮಸ್ಯೆ ಇತ್ಯರ್ಥ ಪಡಿಸಿದ್ದಾರೆ.
ಗೋ ಮಾಂಸ ನಿಷೇಧ: ಚಿಕನ್ ತಿನ್ನಲು ಪ್ರಾಣಿಗಳೂ ಸಹ ಹಿಂದೇಟು..!
ಇತ್ತ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೇಮಕೂಸಂಬಿ ಹಾಗೂ ಸರಿತಾ ಬೋವಿ ಅವರಿಬ್ಬರಿಗೂ ತಲಾ 13 ಮತ ಚಲಾವಣೆಯಾಗಿವೆ. ಇಲ್ಲಿ ಲಾಟರಿ ಎತ್ತಿದಾಗ ಉಪಾಧ್ಯಕ್ಷರಾಗಿ ಹೇಮಕೂಸಂಬಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಲಾಗಿದೆ.
ಅಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭದಲ್ಲಿ ಬ್ಯಾಲೇಟ್ ಪೇಪರ್ ಕೊಡುವಾಗ 26ರ ಬದಲಾಗಿ 27 ನೀಡಲಾಗಿದೆ. ಅಂದರೆ 1 ಬ್ಯಾಲೇಟ್ ಪೇಪರ್ ಒಂದಕ್ಕೊಂದು ಅಂಟಿಕೊಂಡು ಹೋಗಿದೆ. ಒಬ್ಬ ಸದಸ್ಯರು ಸಿಕ್ಕ ಎರಡು ಬ್ಯಾಲೇಟ್ ಪೇಪರ್ ಮೂಲಕ ಮತ ಚಲಾಯಿಸಿದ್ದರಿಂದ ಈ ಸಮಸ್ಯೆಯಾಗಿದೆ ಎಂದು ಎಇಇ ಚುನಾವಣಾಧಿಕಾರಿ ಸಿದ್ದರಾಜು ತಿಳಿಸಿದ್ದಾರೆ.