ರಾಜ್ಯದ ಸುಮಾರು 25 ವಿವಿಧ ಜಾತಿಗಳ ಮೀಸಲಾತಿಗೆ ಸಂಬಂಧಿಸಿದ ವರದಿಗಳನ್ನು ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ.

ಉಡುಪಿ (ಡಿ.3) : ರಾಜ್ಯದ ಸುಮಾರು 25 ವಿವಿಧ ಜಾತಿಗಳ ಮೀಸಲಾತಿಗೆ ಸಂಬಂಧಿಸಿದ ವರದಿಗಳನ್ನು ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೆ 17 ಜಾತಿಗಳ ಬಗ್ಗೆ ವರದಿಗಳನ್ನು ರಚಿಸಿ ಮುದ್ರಿಸಲಾಗಿದೆ. ಇನ್ನೂ 8 ಜಾತಿಗಳ ವರದಿಗಳು ಸಿದ್ಧವಾಗಿವೆ. ವಿಶೇಷವೆಂದರೆ ಜಾತಿಯೇ ಇಲ್ಲದ ಅನಾಥ ಮಕ್ಕಳಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಶಿಫಾರಸು ಮಾಡುವ ವರದಿ ಕೂಡ ಇದರಲ್ಲಿದೆ ಎಂದರು.

ಉಡುಪಿ ಜಿಲ್ಲೆಯಾಗಿ 25 ವರ್ಷ: ಮೊದಲ ಉಸ್ತುವಾರಿ ಸಚಿವ ಜಯಪ್ರಕಾಶ್ ಹೆಗ್ಡೆ ಜೊತೆ ಸಂವಾದ

ಉತ್ತರಕನ್ನಡ ಜಿಲ್ಲೆಯ ಕುಡುಬಿ ಜಾತಿಯವರು ತಮ್ಮನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವಂತೆ ಮನವಿ ಮಾಡಿದ್ದಾರೆ. ಆದರೆ ಎಸ್ಸಿ-ಎಸ್ಟಿಮೀಸಲಾತಿಗೆ ಸೇರಿಸುವುದು ಹಿಂದುಳಿದ ವರ್ಗದ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಅದಕ್ಕೆ ಎಸ್ಸಿಎಸ್ಟಿಆಯೋಗದ ಶಿಫಾರಸು ಬೇಕಾಗುತ್ತದೆ. ಆದರೆ, ಅಧಿಸೂಚಿತ ಬುಡಕಟ್ಟು ಎಂದು ಗುರುತಿಸುವ ಅಧಿಕಾರ ತಮ್ಮ ಆಯೋಗಕ್ಕೆ ಇದ್ದು, ಅದರಂತೆ ಕುಡುಬಿ ಜಾತಿಯವರನ್ನು ಅಧಿಸೂಚಿತ ಬುಡಕಟ್ಟುಗೆ ಸೇರಿಸಲು ತಾವು ಸರ್ಕಾರಕ್ಕೆ ವರದಿ ಸಲ್ಲಿಸುತ್ತಿರುವುದಾಗಿ ಹೇಳಿದರು.

ಪಂಚಮಸಾಲಿ ಮೀಸಲಿನ ಬಗ್ಗೆ ನೀಡಿರುವ ಗಡುವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾಂವಿಧಾನಿಕ ಸಂಸ್ಥೆಯಾಗಿರುವ ಆಯೋಗಕ್ಕೆ ಗಡುವು ನೀಡುವುದಕ್ಕಾಗುವುದಿಲ್ಲ. ಅವರ ಈ ರೀತಿ ಆಯೋಗಕ್ಕೆ ಕೇಳುವುದೂ ಸರಿಯಲ್ಲ, ತಾವು ನೀಡುವುದಕ್ಕೂ ಆಗುವುದಿಲ್ಲ ಎಂದರು.

ಈಗಾಗಲೇ ಆಯೋಗದ ಅಧ್ಯಕ್ಷನಾಗಿ ರಾಜ್ಯದ 16 ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೇನೆ. ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಜಾತಿ ಪ್ರಮಾಣ ಪತ್ರಗಳದ್ದೇ ದೊಡ್ಡ ಸಮಸ್ಯೆ, ಇದನ್ನು ಆಯಾ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಬಗೆಹರಿಸಿದ್ದೇನೆ ಎಂದರು.

ಉಡುಪಿ : ಜೆಡಿಎಸ್ ಅಭ್ಯರ್ಥಿಯಾಗ್ತಾರ ಬಿಜೆಪಿ ನಾಯಕ ಜಯಪ್ರಕಾಶ್ ಹೆಗ್ಡೆ?

ಪಕ್ಷ ಬಯಸಿದರೆ ಮತ್ತೆ ಸ್ಪರ್ಧೆ:

ಪಕ್ಷ ಬಯಸಿದರೆ ತಾವು ರಾಜ್ಯ ಹಿಂದು ವರ್ಗಗಳ ಆಯೋಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಿದ್ಧ ಎಂದು ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ. ಕೆಲ ಅಭಿಮಾನಿಗಳು ಮತ್ತೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ 2023ರ ನವೆಂಬರ್‌ ವರೆಗೆ ತಮ್ಮ ಅಧಿಕಾರಾವಧಿ ಇದೆ. ಈ ಹುದ್ದೆಯಲ್ಲಿ ಸಾಕಷ್ಟುಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಸಾಧ್ಯವಾಗಿದೆ. ಆಯೋಗದ ಹೊರತಾಗಿಯೂ ತಮ್ಮ ಕೆಲಸಗಳಿಗೆ ಜನರು ಈಗಲೂ ತಮ್ಮ ಬಳಿಗೆ ಬರುತ್ತಾರೆ. ಚುನಾಯಿತ ಪ್ರತಿನಿಧಿಯಾದರೆ ನೇರವಾಗಿ ಜನರ ಕೆಲಸ ಮಾಡಿಕೊಡುವುದಕ್ಕೆ ಸಾಧ್ಯವಾಗುತ್ತದೆ ಎಂದರು. ಬೇರೆ ಪಕ್ಷಗಳಿಂದಲೂ ಆಹ್ವಾನ ಇದೆ. ಆದರೆ ಇನ್ನು ಬೇರೆ ಪಕ್ಷ ಸೇರುವ ಇಚ್ಛೆ ಇಲ್ಲ. ಹಿಂದೆ ಪಕ್ಷೇತರನಾಗಿಯೂ ಸ್ಪರ್ಧಿಸಿ ಗೆದ್ದಿದ್ದೇನೆ, ಆದರೆ ಈಗ ಪಕ್ಷೇತರನಾಗಿ ಸ್ಪರ್ಧಿಸುವ ಕಾಲ ಮುಗಿದಿದೆ. ಚುನಾವಣೆ ಬಹಳ ದುಬಾರಿಯಾಗಿದೆ ಎಂದರು.