ಬೆಂಗಳೂರು (ಮಾ.20) : ನಗರದ 198 ವಾರ್ಡ್‌ಗಳಲ್ಲಿ ಕೊರೋನಾ ವೈರಸ್‌ ಹರಡದಂತೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿಗಾ ವಹಿಸಲು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ‘ಕೊರೋನಾ ವಾರ್‌ ರೂಂ’ ಸಿದ್ಧಪಡಿಸಲಾಗಿದ್ದು, ವಾರ್‌ ರೂಂನಲ್ಲಿ ದಿನದ 24 ಗಂಟೆಯೂ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿದ ಒಂದು ಅಪ್ಲಿಕೇಷನ್‌ ಬಳಸಿಕೊಂಡು ನಗರದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು, ಸೋಂಕು ದೃಢಪಟ್ಟಪ್ರದೇಶ ನಕ್ಷೆ ಸಿದ್ಧಪಡಿಸುವುದು, ಬಿಬಿಎಂಪಿ ಕೈಕೊಂಡ ಕ್ರಮಗಳು ವಲಯ ಮಟ್ಟದಲ್ಲಿ ಜಾರಿಯಾಗಿವೆಯೇ ಎಂಬುದನ್ನು ವಾರ್‌ ರೂಂ ನಿಂದ ನಿಗಾ ವಹಿಸಲಾಗುವುದು ಎಂದರು.

ಕೊರೋನಾ ಅಟ್ಟಹಾಸ: ತಿರುಪತಿ, ಪುರಿ ದೇಗುಲ ಬಂದ್‌!...

ಜತೆಗೆ ದತ್ತಾಂಶ ಸಂಗ್ರಹಣೆ, ಸೋಂಕು ದೃಢಪಟ್ಟಪ್ರದೇಶದಲ್ಲಿ ಎಷ್ಟುಕುಟುಂಬಗಳಿವೆ, ಎಷ್ಟುಮಂದಿ ವಾಸವಾಗಿದ್ದಾರೆ ಎಂಬ ಮಾಹಿತಿ ಪಟ್ಟಿಸಿದ್ಧಪಡಿಸುವುದು ಸೇರಿದಂತೆ ಇತರೆ ಕಾರ್ಯ ನಡೆಯಲಿದೆ. ಒಟ್ಟು 15 ಮಂದಿ ತಲಾ ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.

ಕೊರೋನಾ ವಾರ್‌ ರೂಮ್‌ನ ಮೇಲ್ವಿಚಾರಣೆ ಜವಾಬ್ದಾರಿಯನ್ನು ಬೆಂಗಳೂರು ಸ್ಮಾರ್ಟ್‌ಸಿಟಿ ಲಿ.ನ ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ವಹಿಸಲಿದ್ದಾರೆ. ತಂಡದ ಒಳನಿರ್ವಹಣೆಗೆ ಡಾ. ವೆಂಕಟೇಶ್‌, ಬಫರ್‌ಜೋನ್‌ ಭಾಗದಲ್ಲಿ ಬಿಬಿಎಂಪಿ ಜಂಟಿ ಆಯುಕ್ತ ಹಣಕಾಸು ವೆಂಕಟೇಶ್‌ ಕಾರ್ಯನಿರ್ವಹಿಸಲಿದ್ದಾರೆ. ಇವರ ಸಹಾಯಕರಾಗಿ ಡಾ. ಮಧುಸೂದನ್‌ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಶುಕ್ರವಾರದಿಂದ ಈ ಕೊರೋನಾ ವಾರ್‌ ರೂಂ ಕಾರ್ಯ ಆರಂಭಿಸಲಿದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೆಪ್ಸಿಬಾರಾಣಿ ಕೊರ್ಲಪಾಟಿ ಮಾಹಿತಿ ನೀಡಿದರು.