‘ಸಂತ್ರಸ್ತರಿಗೆ 230 ಕೋಟಿ ಪರಿಹಾರ ಬಿಡುಗಡೆ’
ರಾಜ್ಯ ಬಿಜೆಪಿ ಸರ್ಕಾರವು ನೆರೆ ಸಂತ್ರಸ್ತರಿಗಾಗಿ 230 ಕೋಟಿ ಪರಿಹಾರ ಧನವನ್ನು ಬಿಡುಗಡೆ ಮಾಡಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಮಹಾಲಿಂಗಪುರ[ಅ.4]: ರಾಜ್ಯ ಬಿಜೆಪಿ ಸರ್ಕಾರವು ನೆರೆ ಸಂತ್ರಸ್ತರಿಗಾಗಿ 230 ಕೋಟಿ ಪರಿಹಾರ ಧನವನ್ನು ಬಿಡುಗಡೆ ಮಾಡಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಅವರ ಮಾತೋಶ್ರೀ ನಿಲಯದಲ್ಲಿ ಮಹಾಲಿಂಗಪುರ ಬಿಜೆಪಿ ಘಟಕ ಮತ್ತು ಸೈದಾಪೂರ ಜಿಪಂ ವ್ಯಾಪ್ತಿಯ ಗ್ರಾಮಗಳಿಂದ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಾಗಕೋಟೆ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 198 ಗ್ರಾಮಗಳ 46 ಸಾವಿರ ಕುಟುಂಬಗಳು ನೆರೆ ಪ್ರವಾಹಕ್ಕೆ ಸಿಕ್ಕು ತೊಂದರೆಯಾಗಿವೆ. ಈಗಾಗಲೇ ಪ್ರತಿ ಕುಟುಂಬಕ್ಕೆ ತಾತ್ಕಾಲಿಕ 10 ಸಾವಿರ ಪರಿಹಾರ ಧನ ವಿತರಿಸಲಾಗಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 7383 ಮನೆಗಳು ಹಾನಿಯಾಗಿವೆ. ಅವುಗಳ ಸರ್ವೆ ಕಾರ್ಯ ಮುಗಿದಿದ್ದು, ಅವುಗಳ ಹಾನಿ ಪ್ರಮಾಣವನ್ನು ಆಧರಿಸಿ 50 ಸಾವಿರ, 1 ಲಕ್ಷ ಮತ್ತು ಸಂಪೂರ್ಣ ಮನೆ ಹಾಳಾಗಿದ್ದಕ್ಕೆ 5 ಲಕ್ಷದಂತೆ ಪರಿಹಾರ ಧನ ಚೆಕ್‌ಗಳನ್ನು ಇನ್ನೆರಡು ದಿನಗಳಲ್ಲಿ ವಿತರಿಸಲು ಪ್ರಾರಂಭಿಸಲಾಗುತ್ತದೆ ಎಂದರು.
ಮಹಾಲಿಂಗಪುರ ತವರು ಮನೆ:
ಮೊದಲು ಮುಧೋಳ, ಸದ್ಯ ತೇರದಾಳ ಮತಕ್ಷೇತ್ರದಲ್ಲಿರುವ ಮಹಾಲಿಂಗಪುರವು ನನಗೆ ತವರು ಮನೆ ಇದ್ದಂತೆ, ಇಲ್ಲಿನ ಜನರ ಪ್ರೀತಿ, ವಿಶ್ವಾಸ, ಅಭಿಮಾನ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ನಿಮ್ಮೆಲ್ಲರ ಆಸೆಯಂತೆ ಅವಕಾಶ ಬಂದಾಗ ತೇರದಾಳ ಶಾಸಕ ಸಿದ್ದು ಸವದಿ ಅವರು ಒಂದು ಸೂಕ್ತ ಸ್ಥಾನದಲ್ಲಿ ಇರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ಬಿಜೆಪಿ ಸರ್ಕಾರದಿಂದ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ ಸಾಧ್ಯ. ಗೋವಿಂದ ಕಾರಜೋಳ ಅವರು ಉಪ ಮುಖ್ಯಮಂತ್ರಿಯಾಗಿದ್ದು ಸಂತೋಷದ ಸಂಗತಿ. ಅವರ ಅವಧಿಯಲ್ಲಿ ನಮ್ಮ ಜಿಲ್ಲೆಯು ಇನ್ನಷ್ಟು ಅಭಿವೃದ್ಧಿಯಾಗಲಿ. ಮುಂಬರುವ ದಿನಗಳಲ್ಲಿ ಕಾರಜೋಳ ಅವರು ನಾವು ಕೂಡಿಕೊಂಡು ಮಹಾಲಿಂಗಪುರ ತಾಲೂಕು ಕೇಂದ್ರವಾಗಿಸಲು ಮತ್ತು ರಬಕವಿ-ಬನಹಟ್ಟಿ, ತೇರದಾಳ, ಮಹಾಲಿಂಗಪುರ ಪಟ್ಟಣಗಳಿಗೆ ರಿಂಗ್ ರಸ್ತೆಗಳನ್ನು ಮಾಡಲು ಪ್ರಯತ್ನಿಸುತ್ತೇವೆ ಎಂದರು.
ಮಹಾಲಿಂಗಪುರ ಬಿಜೆಪಿ ಘಟಕ ಮತ್ತು ಸೈದಾಪೂರ ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಬಿಜೆಪಿ ಮುಖಂಡರು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಸನ್ಮಾನಿಸಿ-ಗೌರವಿಸಿದರು.
ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮಾತನಾಡಿದರು. ಮಲ್ಲಯ್ಯಾ ಹಿಟ್ಟಿನಮಠ ಅವರು ಅಧ್ಯಕ್ಷತೆವಹಿಸಿದ್ದರು. ತೇರದಾಳ ಮತಕ್ಷೇತ್ರ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ, ಕಾರ್ಯದರ್ಶಿ ಆನಂದ ಕಂಪು, ವಿಜಯಪುರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಅವಟಿ, ರನ್ನ ಶುಗರ್ಸ ಉಪಾಧ್ಯಕ್ಷ ಅಶೋಕಗೌಡ ಪಾಟೀಲ, ಮುಧೋಳ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಆರ್. ಮಾಚಪ್ಪನವರ, ಭಾಜಪ ಮುಖಂಡ ಮಹಾಲಿಂಗಪ್ಪ ಕೋಳಿಗುಡ್ಡ ಅತಿಥಿಗಳಾಗಿ ಭಾಗವಹಿಸಿದ್ದರು. ಪುರಸಭೆ ಮತ್ತು ವಿವಿಧ ಗ್ರಾಪಂಗಳ ಸದಸ್ಯರು, ಬಿಜೆಪಿ ಮುಖಂಡರು ಇದ್ದರು. ಬಸವರಾಜ ಹಿಟ್ಟಿನಮಠ ಸ್ವಾಗತಿಸಿದರು. ಜಿ.ಎಸ್.ಗೊಂಬಿ ನಿರೂಪಿಸಿ-ವಂದಿಸಿದರು.