*   ಹೆಲ್ಮೆಟ್‌ ಧರಿಸದ್ದರಿಂದ ತಲೆಗೆ ತೀವ್ರ ಪೆಟ್ಟು*  ಸಿ.ಕೆ.ಪಾರ್ಕ್ ಬಳಿ ಘಟನೆ*  ಶ್ರೀನಿವಾಸನಗರ ನಿವಾಸಿ ಶ್ರೀಕಾಂತ್‌ ಮೃತ ಸವಾರ 

ಬೆಂಗಳೂರು(ಮೇ.29): ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುವಾಗ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾಫ್ಟ್‌ವೇರ್‌ ಎಂಜಿನಿಯರ್‌ ಮೃತಪಟ್ಟಿರುವ ಘಟನೆ ಬನಶಂಕರಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀನಿವಾಸನಗರ ನಿವಾಸಿ ಶ್ರೀಕಾಂತ್‌ (23) ಮೃತ ಸವಾರ. ಕಾಮಾಕ್ಯ ಥಿಯೇಟರ್‌ ಸಮೀಪದ ಸಿ.ಕೆ.ಪಾರ್ಕ್ ಬಳಿ ಶುಕ್ರವಾರ ತಡರಾತ್ರಿ 12.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluruನಲ್ಲಿ 16 ವರ್ಷದ ಬಾಲಕಿಯನ್ನು ಬಲಿ ಪಡೆದ ಶಾಲಾ ಬಸ್!

ಸಾಫ್ಟ್‌ವೇರ್‌ ಎಂಜಿನಿಯರ್‌ ಶ್ರೀಕಾಂತ್‌ ಶುಕ್ರವಾರ ರಾತ್ರಿ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ ಬಳಿ ಸ್ನೇಹಿತರ ಜತೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮುಗಿಸಿಕೊಂಡು ಸ್ನೇಹಿತರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಈ ವೇಳೆ ಶ್ರೀಕಾಂತ್‌ ಟಿವಿಎಸ್‌ ವಿಕ್ರಾಂತ್‌ ಬೈಕ್‌ನಲ್ಲಿ ಶ್ರೀನಿವಾಸ ನಗರದ ಮನೆಗೆ ತೆರಳುವಾಗ ಮಾರ್ಗ ಮಧ್ಯೆ ಸಿ.ಕೆ.ಪಾರ್ಕ್ ಬಳಿ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ. ಹೆಲ್ಮೆಟ್‌ ಧರಿಸದ ಪರಿಣಾಮ ಶ್ರೀಕಾಂತ್‌ ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿವೆ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಸ್ನೇಹಿತರು ಸ್ಥಳೀಯರ ನೆರವಿನಿಂದ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಶ್ರೀಕಾಂತ್‌ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬನಶಂಕರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.