Asianet Suvarna News Asianet Suvarna News

ಕೊಪ್ಪಳ: ಕೊರೋನಾ ಅಟ್ಟಹಾಸ, 22 ಪಾಸಿಟಿವ್‌ ಕೇಸ್‌ ಪತ್ತೆ..!

ಪೇದೆಗೆ ಸೋಂಕು, ಕೊಪ್ಪಳ ನಗರ ಠಾಣೆ ಸೀಲ್‌ಡೌನ್‌| ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯ 130ಕ್ಕೆ ಏರಿಕೆ| ಜಿಲ್ಲೆಯಲ್ಲಿ ಇದುವರೆಗೂ ಇಷ್ಟೊಂದು ಪ್ರಕರಣಗಳು ಒಂದೇ ದಿನ ಬಂದಿರಲಿಲ್ಲ| ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪಾಸಿಟಿವ್‌ ಪ್ರಕರಣ ಬಂದಿರುವುದರಿಂದ ತಬ್ಬಿಬ್ಬಾದ ಜನರು|

22 new Coronavirus Cases Found in Koppal District
Author
Bengaluru, First Published Jul 6, 2020, 7:12 AM IST

ಕೊಪ್ಪಳ(ಜು.06): ಜಿಲ್ಲೆಯಲ್ಲಿ ಭಾನುವಾರ 22 ಜನರಿಗೆ ಕೋವಿಡ್‌ ಪಾಸಿಟಿವ್‌ ಬಂದಿದೆ. ಪೊಲೀಸ್‌ ಪೇದೆಗೂ ಕೋರೊನಾ ಪತ್ತೆಯಾಗಿದ್ದು, ಕೊಪ್ಪಳ ನಗರ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯ 130ಕ್ಕೆ ಏರಿಕೆಯಾದಂತೆ ಆಗಿದೆ.

ಜಿಲ್ಲೆಯಲ್ಲಿ ಇದುವರೆಗೂ ಇಷ್ಟೊಂದು ಪ್ರಕರಣಗಳು ಒಂದೇ ದಿನ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪಾಸಿಟಿವ್‌ ಪ್ರಕರಣ ಬಂದಿರುವುದರಿಂದ ಜನರು ತಬ್ಬಿಬ್ಬಾಗಿದ್ದಾರೆ. ವಿವಿಧ ರಾಜ್ಯದಿಂದ ಕಾರ್ಮಿಕರು ಮರಳಿ ಬಂದಾಗಲೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಪತ್ತೆಯಾಗಿದ್ದು, ಅನೇಕರಿಗೆ ಟ್ರಾವೆಲ್‌ ಹಿಸ್ಟರಿಯೇ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. 23 ಪಾಟಿಟಿವ್‌ ಪ್ರಕರಣದಲ್ಲಿ ಕೊಪ್ಪಳ, ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ತಲಾ ಎರಡು ಪಾಸಿಟಿವ್‌ ಆಗಿದ್ದರೆ ಉಳಿದವು ಗಂಗಾವತಿ ತಾಲೂಕಿನಾದ್ಯಂತ ಇರುವವೇ ಆಗಿವೆ. ಇದರಿಂದ ಗಂಗಾವತಿಯಲ್ಲಿ ಸೋಂಕಿತರ ಸಂಖ್ಯೆಯು ದಿನೇ ದಿನೆ ಹೆಚ್ಚಳವಾಗುತ್ತಿದೆ.

ಗಂಗಾವತಿ: ಆರೋಗ್ಯ ಇಲಾಖೆ ನಿರ್ಲಕ್ಷ, ನಡೆದುಕೊಂಡೇ ಆಸ್ಪತ್ರೆ ಸೇರಿದ ಕೊರೋನಾ ಸೋಂಕಿತ ಮಹಿಳೆ..!

ಸೀಲ್‌ಡೌನ್‌:

ಕೊಪ್ಪಳ ನಗರ ಠಾಣೆಯ ಪೇದೆಗೆ ಕೊರೋನಾ ಪಾಸಿಟಿವ್‌ ಬಂದಿದ್ದರಿಂದ ಇಡೀ ಪೊಲೀಸ್‌ ಠಾಣೆಯನ್ನೇ ಸೀಲ್‌ಡೌನ್‌ ಮಾಡಲಾಗಿದೆ. ಈಗಾಗಲೇ ಪೊಲೀಸ್‌ ಠಾಣೆಯಲ್ಲಿನ ಸಿಬ್ಬಂದಿಯನ್ನು ತೆರವು ಮಾಡಿ, ದ್ರಾವಣ ಸಿಂಪರಣೆ ಮಾಡಲಾಗಿದೆ. ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪೇದೆಯನ್ನು ಜು. 1ರಂದು ಟೆಸ್ಟ್‌ ಗೆ ಕಳುಹಿಸಲಾಗುತ್ತದೆ. ಅಂದೇ ಆತನನ್ನು ಮನೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಆದರೆ, ವರದಿ ವಿಳಂಬವಾಗಿ ಬಂದಿದ್ದು, ಭಾನುವಾರ ಖಚಿತಪಡಿಸಲಾಗಿದೆ. ಈ ವೇಳೆಗಾಗಲೇ ಆತ ಸುಮಾರು 56 ಜನರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವುದನ್ನು ಪತ್ತೆ ಮಾಡಿ, ಕ್ವಾರಂಟೈನ್‌ ಮಾಡಲಾಗಿದೆ. ದ್ವಿತೀಯ ಸಂಪರ್ಕ ಇದ್ದವರನ್ನು ಪತ್ತೆ ಮಾಡುವ ಕಾರ್ಯ ನಡೆದಿದೆ. ಕೆಮ್ಮು, ಜ್ವರ ಮತ್ತಿತರ ಲಕ್ಷಣಗಳು ಕಾಣಸಿಕೊಂಡಿದ್ದರಿಂದ ಮುಂಜಾಗ್ರತೆ ಕ್ರಮವಾಗಿ ತಪಾಸಣೆ ಮಾಡಿಸಿದ್ದರಿಂದಲೇ ಪಾಸಿಟಿವ್‌ ಬಂದಿದೆ. ಈಗ ಪೇದೆಯನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಪೇದೆ ಕೋವಿಡ್‌ ಟೆಸ್ಟ್‌ಗೆ ಒಳಪಡಿಸುವ ಮುನ್ನ ನಾನಾ ಕಡೆ ಸುತ್ತಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ವರದಿಯನ್ನು ಸಂಗ್ರಹ ಮಾಡಲಾಗುತ್ತಿದೆ. ಕರ್ತವ್ಯ ನಿಮಿತ್ತವೇ ನಗರದ ಬಹುತೇಕ ಕಡೆ ಸುತ್ತಾಡಿರುವುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ.

ಠಾಣೆ ಸ್ಥಳಾಂತರ:

ಈಗ ಪೊಲೀಸ್‌ ಠಾಣೆಯನ್ನೇ ಬೇರೆಡೆ ಸ್ಥಳಾಂತರಿಸಲು ಪೊಲೀಸ್‌ ಇಲಾಖೆ ಚಿಂತನೆ ನಡೆಸಿದೆ. ಕೊಪ್ಪಳ ನಗರ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಪಕ್ಕದಲ್ಲಿಯೇ ಗ್ರಾಮೀಣ ಪೊಲೀಸ್‌ ಠಾಣೆಯೂ ಇದೆ. ಇಲ್ಲಿ ಕೆಲಸ ಮಾಡುವವರು ಅಲ್ಲಿಯವರೊಂದಿಗೆ, ಅಲ್ಲಿ ಕೆಲಸ ಮಾಡುವವರು ಇಲ್ಲಿಯವರೊಂದಿಗೆ ನಿತ್ಯವೂ ಸಂಪರ್ಕಕ್ಕೆ ಬರುತ್ತಾರೆ. ಜತೆಗೆ ಚಹ, ತಿಂಡಿ ಮಾಡುವ ಪರಿಪಾಠ ಇದೆ. ಹೀಗಾಗಿ, ಇದು ಭಾರೀ ಆತಂಕಕ್ಕೆ ಕಾರಣವಾಗಿದೆ. ಎರಡು ಠಾಣೆಗಳನ್ನು ಸೀಲ್‌ಡೌನ್‌ ಮಾಡಬೇಕಾಗುತ್ತದೆ ಎನ್ನುವ ಚಿಂತನೆಯನ್ನು ಪೊಲೀಸ್‌ ಇಲಾಖೆ ಮಾಡುತ್ತಿದೆ.

ಪೇದೆಗೆ ಕೊರೋನಾ ಪಾಸಿಟಿವ್‌ ಬಂದಿರುವುದರಿಂದ ಮುಂಜಾಗ್ರತೆ ಕೈಗೊಳ್ಳಲಾಗಿದೆ ಮತ್ತು ಕೊಪ್ಪಳ ನಗರ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಪೇದೆಯನ್ನು ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಕೊಪ್ಪಳ ಎಸ್ಪಿ ಸಂಗೀತಾ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios