2023ರ ಚುನಾವಣೆಯೇ ನನ್ನ ಕೊನೆ ಚುನಾವಣೆ : ಕೃಷ್ಣಪ್ಪ
ತುರುವೇಕೆರೆ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಕನಸಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ತುರುವೇಕೆರೆ(ಡಿ.11): ತುರುವೇಕೆರೆ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಕನಸಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ತಾಲೂಕಿನ ಆಯರಹಳ್ಳಿಯಲ್ಲಿ ನಡೆದ ಪುನೀತ್ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾಲೂಕನ್ನು ಜಿಲ್ಲೆಯನ್ನಾಗಿಸುವ ಕನಸು ಕಳೆ ಹತ್ತಾರು ವರ್ಷಗಳಿಂದ ಇದೆ. ಈ ಬಾರಿ ಅದನ್ನು ಪೂರೈಸುವ ಸಲುವಾಗಿ ತಮ್ಮನ್ನು ಮುಂಬರುವ 2023ರ ಚುನಾವಣೆಯಲ್ಲಿ (Election) ಗೆಲ್ಲಿಸಬೇಕೆಂದು ಜನರಲ್ಲಿ ಕೃಷ್ಣಪ್ಪ ಮನವಿ ಮಾಡಿಕೊಂಡರು.
ತಾವು ಶಾಸಕರಾಗಿದ್ದ (MLA) ವೇಳೆ ಮಾಡಿರುವ ಹಲವಾರು ಶಾಶ್ವತ ಅಭಿವೃದ್ಧಿ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲಿದೆ. ರೈತರ ಹಿತ ಕಾಪಾಡುವ ಏಕೈಕ ಪಕ್ಷವಾಗಿರುವ ಜೆಡಿಎಸ್ ಮುಂಬರುವ ದಿನಗಳಲ್ಲಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಮುಂಬರುವ ಸರ್ಕಾರದಲ್ಲಿ ತಾವು ಮಂತ್ರಿಯಾಗಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ಮೂಲಕ ತಮ್ಮ ಇಚ್ಛೆಯನ್ನೂ ಪೂರೈಸಿಕೊಳ್ಳುವುದಾಗಿ ಕೃಷ್ಣಪ್ಪ ಹೇಳಿದರು.
ಮುಂಬರುವ 2023ರ ಚುನಾವಣೆಯೇ ತಮ್ಮ ಕೊನೆ ಚುನಾವಣೆ. ಹಾಲಿ ಶಾಸಕ ಮಸಲಾ ಜಯರಾಮ್‌ರವರ ಸಾಧನೆ ಶೂನ್ಯವಾಗಿದೆ. ಯಾವುದೇ ಶಾಶ್ವತ ಕಾಮಗಾರಿಗಳು ಆಗಿಲ್ಲ. ತಮ್ಮ ಕಾಲದಲ್ಲಿ ಮಂಜೂರಾಗಿದ್ದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ತಮ್ಮನ್ನು ಸೋಲಿಸಿ ಮಸಾಲಾ ಜಯರಾಮ್‌ರನ್ನು ಗೆಲ್ಲಿಸಿದ್ದಕ್ಕೆ ಈಗ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮರೆಯುವಂತಿಲ್ಲ. ಹಾಲಿ ಶಾಸಕರು ಮಾಡಿಸಿರುವ ರಸ್ತೆ ಕಾಮಗಾರಿಗಳು ಸೇರಿದಂತೆ ಇತರೆ ಕಾಮಗಾರಿಗಳು ಮಾಡಿದ ಕೆಲವೇ ದಿನಗಳಲ್ಲಿ ಹಾಳಾಗುತ್ತಿವೆ. ಇದರಿಂದಾಗಿ ಜನರಲ್ಲಿ ಶಾಸಕರ ಕಾರ್ಯವೈಖರಿ ಬಗ್ಗೆ ಅಸಮಾಧಾನವಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಿ.ಪಿ.ರಾಜು ಮಾತನಾಡಿ, ತಾಲೂಕಿನ ಗಡಿ ಭಾಗಗಳ ಅಭಿವೃದ್ಧಿಯನ್ನು ಎಲ್ಲಾ ರಾಜಕೀಯ ಜನಪ್ರತಿನಿಧಿಗಳು ಮರೆತಿದ್ದಾರೆ. ಗಡಿಭಾಗದ ಗ್ರಾಮಗಳಿಗೆ ಸೂಕ್ತ ರಸ್ತೆ, ಚರಂಡಿ, ವಿದ್ಯುತ್ ಇಲ್ಲದಿರುವುದು ವಿಷಾದನೀಯ. ಆಯರಹಳ್ಳಿಗೆ ಸೂಕ್ತ ಬಸ್ ತಂಗುದಾಣವನ್ನು ನಿರ್ಮಿಸುವುದು ಅತ್ಯಗತ್ಯವಾಗಿದೆ. ಕನ್ನಡ ಭಾಷಾಭಿಮಾನವನ್ನು ಕೇವಲ ನವೆಂಬರ್ ತಿಂಗಳಿಗೆ ಸೀಮಿತಗೊಳಿಸದೇ ವರ್ಷಪೂರ್ತಿ ಆಚರಿಸಬೇಕೆಂದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರನ್ನು ಯುವ ಜೆಡಿಎಸ್ ಘಟಕದ ಪದಾದಿಕಾರಿಗಳು ಬೃಹತ್ ಹಾರ ಹಾಕುವ ಮೂಲಕ ಗೌರವಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಯುವ ಜೆಡಿಎಸ್‌ನ ಅಧ್ಯಕ್ಷ ಬಾಣಸಂದ್ರ ರಮೇಶ್, ವಿಎಸ್‌ಎಸ್‌ಎನ್‌ನ ನಿರ್ದೇಶಕರಾದ ನಟರಾಜು, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕುಶಾಲ್ ಕುಮಾರ್, ಬಸವರಾಜು, ಹೊನ್ನಮ್ಮ ದಂಡೇಗೌಡ, ಡೊಂಕಿಹಳ್ಳಿಯ ಕೆಂಪರಾಜು, ರಾಮಲಿಂಗಣ್ಣ, ಶಂಕರಲಿಂಗಣ್ಣ, ಜುಂಜೇಗೌಡ ಹಾಗೂ ಯುವ ಮುಖಂಡ ಹೇಮಂತ್ ಕುಮಾರ್ ಸೇರಿದಂತೆ ಇತರರು ಇದ್ದರು.
ಭವಿಷ್ಯ ಸುಳ್ಳಾಗಲಿದೆ
ಟಿ.ನರಸೀಪುರ (ಡಿ. 04): ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಅವರು ತಂದೆಗೆ ಲಕ್ಕಿ ಕ್ಷೇತ್ರ ಇಲ್ಲಿ ನಿಂತು ಗೆದ್ದರೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿರುವುದು ಸುಳ್ಳಾಗಲಿದೆ ಎಂದು ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ತೋಟದಪ್ಪ ಬಸವರಾಜು ಪ್ರತಿಕ್ರಿಯಿಸಿದ್ದಾರೆ.
2018ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲ್ಲ ಅವರಪ್ಪನಾಣೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಲ್ಲ ಎಂದು ಸಿದ್ದರಾಮಯ್ಯನವರು ಭವಿಷ್ಯ ನುಡಿದಿದ್ದರು, ಆದರೆ ಕ್ರಮವಾಗಿ ಕುಮಾರಸ್ವಾಮಿಯವರು ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದರು ಎಂದು ಅವರು ತಿಳಿಸಿದ್ದಾರೆ.
ಸಿದ್ದರಾಮಯ್ಯನವರಿಗೆ (Siddaramaiah) ಬಾದಾಮಿ ಕೋಲಾರ (Kolar) ವರುಣ ಎಲ್ಲಿ ನಿಂತರೂ ಗೆಲ್ಲುವ ಆತ್ಮವಿಶ್ವಾಸವಿಲ್ಲ, ಆದ್ದರಿಂದಲೇ ಅವರು ಕ್ಷೇತ್ರವನ್ನು ಘೋಷಣೆ ಮಾಡಿಲ್ಲ. ವರುಣದಲ್ಲಿ 2008ರಲ್ಲಿ ಗೆದ್ದು ಪ್ರತಿಪಕ್ಷದ ನಾಯಕರಾದರು 2013ರಲ್ಲಿ ಗೆದ್ದು ಮುಖ್ಯಮಂತ್ರಿಯಾದರು, ಕ್ಷೇತ್ರದ ಜನರು ಇವರನ್ನು ಬಾದಾಮಿ ಚಾಮುಂಡೇಶ್ವರಿಗೆ ಹೋಗಿ ಎಂದು ಹೇಳಿರಲಿಲ್ಲ, ಉನ್ನತ ಸ್ಥಾನವನ್ನು ಕೊಟ್ಟಕ್ಷೇತ್ರದ ಜನರಿಗೆ ದ್ರೋಹ ಮಾಡಿ ಬೆನ್ನಿಗೆ ಬೆನ್ನಿಗೆ ಚೂರಿ ಹಾಕಿ ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತು ಬಾದಾಮಿಯಲ್ಲಿ ಉಸಿರುಗಟ್ಟಿಗೆದ್ದರು, 2023ರಲ್ಲಿ ಯತೀಂದ್ರ ರವರು ಸ್ಪರ್ಧಿಸಿದರೆ ಮಧ್ಯಾಹ್ನಕ್ಕೆ ಮುಂಚೆಯೇ ಮನೆ ಸೇರುತ್ತಾರೆ ಎಂದಿದ್ದಾರೆ.