ಧರ್ಮ ಸಂಸ್ಥಾಪನಾರ್ಥವಾಗಿ 2023ರ ಚುನಾವಣೆ: ಡಿವಿಎಸ್
: ಈ ಬಾರಿ ಧರ್ಮ ಸಂಸ್ಥಾಪನಾರ್ಥವಾಗಿ ನಡೆಯಲಿರುವ ವಿಧಾನಸಭಾ ಚುನಾವಣೆ ಎಂಬ ಅಶ್ವಮೇಧಯಾಗಕ್ಕೆ ಸುರೇಶ್‌ಗೌಡ ಎಂಬ ಕುದುರೆಯನ್ನು ಬಿಜೆಪಿಯಿಂದ ಬಿಡಲಾಗಿದ್ದು, ತಾಕತ್ತಿದ್ದರೆ ವಿರೋಧಪಕ್ಷಗಳು ಕಟ್ಟಿಹಾಕಲಿ ಎಂದು ಮಾಜಿ ಸಿಎಂ, ಬಿಜೆಪಿ ಮುಖಂಡ ಸದಾನಂದಗೌಡ ಸವಾಲು ಹಾಕಿದರು.
ತುಮಕೂರು : ಈ ಬಾರಿ ಧರ್ಮ ಸಂಸ್ಥಾಪನಾರ್ಥವಾಗಿ ನಡೆಯಲಿರುವ ವಿಧಾನಸಭಾ ಚುನಾವಣೆ ಎಂಬ ಅಶ್ವಮೇಧಯಾಗಕ್ಕೆ ಸುರೇಶ್‌ಗೌಡ ಎಂಬ ಕುದುರೆಯನ್ನು ಬಿಜೆಪಿಯಿಂದ ಬಿಡಲಾಗಿದ್ದು, ತಾಕತ್ತಿದ್ದರೆ ವಿರೋಧಪಕ್ಷಗಳು ಕಟ್ಟಿಹಾಕಲಿ ಎಂದು ಮಾಜಿ ಸಿಎಂ, ಬಿಜೆಪಿ ಮುಖಂಡ ಸದಾನಂದಗೌಡ ಸವಾಲು ಹಾಕಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊನ್ನುಡಿಕೆ ಮತ್ತು ಹೆಬ್ಬೂರು ಹೋಬಳಿಗಳ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
10 ವರ್ಷಗಳ ಕಾಲ ಕ್ಷೇತ್ರಕ್ಕೆ ಅಭಿವೃದ್ಧಿ ಹೊಳೆಯನ್ನೇ ಹರಿಸಿದ ಬಿ.ಸುರೇಶಗೌಡ, 2018ರ ಚುನಾವಣೆಯಲ್ಲಿ ಕಾರ್ಯಕರ್ತರ ಅತಿಯಾದ ಆತ್ಮವಿಶ್ವಾಸದಿಂದ ಕೂದಲೆಳೆಯ ಅಂತರದಲ್ಲಿ ಸೋಲು ಕಂಡಿದ್ದಾರೆ. ಆದರೆ ಈ ಬಾರಿ ಅದು ಸಾಧ್ಯವಿಲ್ಲ. ಶೇ.100ಕ್ಕೆ ನೂರರಷ್ಟುಗೆಲುವು ಖಚಿತ ಎಂದರು.
ಈಗಿನ ಶಾಸಕರು ಕೆಲಸ ಮಾಡಲು ಬಿಡುತ್ತಿಲ್ಲ: ತಮ್ಮ ಹತ್ತು ವರ್ಷಗಳ ಶಾಸಕ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ 2000 ಕೋಟಿಗೂ ಅಧಿಕ ಅನುದಾನವನ್ನು ತಂದು ರಸ್ತೆ, ಚರಂಡಿ, ಸಮುದಾಯ ಭವನ, ವಿದ್ಯುತ್ ಸಂಪರ್ಕ, ಪ್ರಾಥಮಿಕ ಶಾಲೆಗಳ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಈಗಿನ ಶಾಸಕರು ಕೇಂದ್ರದಿಂದ ಬಿಡುಗಡೆಯಾದ 10 ಕೋಟಿ ರು.ಗಳ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆದಾರರು ಕಮಿಷನ್ ನೀಡಿಲ್ಲ ಎಂಬ ಕಾರಣಕ್ಕೆ ಕೆಲಸ ಮಾಡಲೇ ಬಿಟ್ಟಿಲ್ಲ. ಇಂತಹ ಶಾಸಕರ ಅಗತ್ಯ ಕ್ಷೇತ್ರಕ್ಕೆ ಇದೆಯೇ ಎಂಬುದನ್ನು ಮತದಾರರು ತೀರ್ಮಾನಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಪ್ರಶ್ನಿಸಿದರು.
ಅಭಿವೃದ್ಧಿ ಮತ್ತು ಒಳ್ಳೆಯ ಆಡಳಿತ ಬಿಜೆಪಿ ಪಕ್ಷದ ಎರಡು ಪ್ರಮುಖ ಸಿದ್ದಾಂತಗಳಾಗಿದ್ದು, ದ್ವೇಷ ರಹಿತ, ಜಾತಿ, ಧರ್ಮ ರಹಿತ ಆಡಳಿತಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ, ಸರ್ವರನ್ನು ಒಳಗೊಳ್ಳುವ 2023-24ನೇ ಸಾಲಿನ ಬಜೆಟ್ ಸಾಕ್ಷಿಯಾಗಿದೆ. ರೈತರಿಗೆ 5 ಲಕ್ಷ ರು. ವರೆಗೆ ಬಡ್ಡಿರಹಿತ ಸಾಲ, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರು. ಅನುದಾನ, ವಿದ್ಯಾಸಿರಿ ಯೋಜನೆ ವಿಸ್ತರಣೆ ನಾಡಿನ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿವೆ. ನಾವು ಮಾತನಾಡುವುದನ್ನೇ ಕೆಲಸ ಮಾಡಿಕೊಂಡಿಲ್ಲ. ಇಂದು ನಮ್ಮ ಕೆಲಸಗಳು ಮಾತನಾಡುತ್ತಿವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೋಸ್ಕರ ಬಿ.ಸುರೇಶಗೌಡರನ್ನು ಮತ್ತೊಮ್ಮೆ ಶಾಸಕರನ್ನಾಗಿ ಮಾಡಿ ಎಂದು ಸಲಹೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 2008-2018ರವರೆಗೆ ಆಗಿರುವ ಅಭಿವೃದ್ಧಿಯನ್ನು ಹೊರತು ಪಡಿಸಿದರೆ, ಕಳೆದ ಐದು ವರ್ಷಗಳ ಕಾಲ ಕ್ಷೇತ್ರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಈ ಬಾರಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ವಿಜಯ ಸಂಕಲ್ಪ ಯಾತ್ರೆ, ಬೂತ್ ವಿಜಯ ಅಭಿಯಾನ ಹಾಗೂ ವಿಜಯರಥ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮತದಾರರು ಬಿ.ಸುರೇಶಗೌಡ ಕೈಹಿಡಿಯುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್, ಜಿ.ಪಂ.ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮಂಡಲ ಅಧ್ಯಕ್ಷ ಶಂಕರ್, ಜಿ.ಪಂ.ಮಾಜಿ ಸದಸ್ಯರಾದ ರಾಜೇಗೌಡ, ರಾಮುಸ್ವಾಮಿಗೌಡ, ಆಂದಾನಪ್ಪ, ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ನರಸಿಂಹಮೂರ್ತಿ, ಎಪಿಎಂಸಿ ಅಧ್ಯಕ್ಷ ಉಮೇಶಗೌಡ, ಬಿಜೆಪಿ ಮುಖಂಡ ಕುಮಾರ್, ತುಮುಲ್ ನಿರ್ದೇಶಕ ರೇಣುಕಾಪ್ರಸಾದ್, ಪ್ರಕಾಶ್, ಸಿದ್ದೇಗೌಡ, ವೈ.ಟಿ.ನಾಗರಾಜು, ಅರೆಕೆರೆ ರವಿ, ವಿಜಯಕುಮಾರ್, ಮಾಸ್ತಿಗೌಡ, ತಾರಾದೇವಿ, ಬಳ್ಳಗೆರೆ ಮುಖಂಡರಾದ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಂಚೆ ರಾಮಚಂದ್ರಯ್ಯ, ತಾ.ಪಂ ಮಾಜಿ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಹಲವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
‘ಪಂಚರ್ ಆದ ಪಂಚರತ್ನ ಯಾತ್ರೆ
ಉಸಿರೇ ಇಲ್ಲದಂತಾದ ಪ್ರಜಾಧ್ವನಿ’
ರಾಜ್ಯದಲ್ಲಿ ಅಧಿಕಾರದ ಆಸೆಗಾಗಿ ನಡೆಯುತ್ತಿರುವ ಜೆಡಿಎಸ್‌ನ ಪಂಚರತ್ನ ಯಾತ್ರೆ, ಪಂಚರ್ ಆಗಿದೆ. ಕಾಂಗ್ರೆಸ್‌ನ ಪ್ರಜಾಧ್ವನಿಗೆ ಉಸಿರೇ ಇಲ್ಲದಂತಾಗಿದೆ. ಡಿ.ಕೆ.ಶಿ, ಸಿದ್ದರಾಮಯ್ಯ ಅವರದ್ದು ಒಂದೊಂದು ದನಿಯಾದರೆ, ಮಲ್ಲಿಕಾರ್ಜುನ ಖರ್ಗೆ ಅವರದ್ದೇ ಬೇರೆ ಆಲೋಚನೆಯಾಗಿದೆ. ದೇಶ, ನಾಡಿನ ಅಭಿವೃದ್ಧಿ ಪರಿಕಲ್ಪನೆಯಲ್ಲಿ ದುಡಿಯುತ್ತಿರುವ ಏಕೈಕ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಒಂದು ಕಾಲದಲ್ಲಿ ಹೊರದೇಶಗಳಿಂದ ಬೇಡುವ ಸ್ಥಿತಿಯಲ್ಲಿದ್ದ ಭಾರತ, ಇಂದು ಬೇರೆ ರಾಷ್ಟ್ರಗಳಿಗೆ ನೀಡುವ ಸ್ಥಿತಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಎಂದು ಸದಾನಂದಗೌಡ ನುಡಿದರು.
ನನ್ನ 10 ವರ್ಷಗಳ ಆಡಳಿತದಲ್ಲಿ ಕುಡಿಯುವ ನೀರು, ಸರ್ಕಾರಿ ಶಾಲೆಗಳ ಉನ್ನತೀಕರಣ, ವಿದ್ಯುತ್ ಸ್ಥಾವರಗಳ ನಿರ್ಮಾಣ, ಹೆಬ್ಬೂರು, ಗೂಳೂರು ಏತ ನೀರಾವರಿ, ಒಂದು ಐಪಿಸೇಟ್‌ಗೆ ಒಂದು ಟಿ.ಸಿ. ಪ್ರಾಯೋಗಿಕ ಯೋಜನೆಗಳ ತಂದು ಇಡೀ ದೇಶವನ್ನು ಮಾದರಿಯಾಗಿ ಮಾಡಿದ್ದೇನೆ. ಇದಕ್ಕೆ ಸದಾನಂದಗೌಡ ಬೆಂಬಲವೂ ಇತ್ತು. ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಕ್ಷೇತ್ರಕ್ಕೆ ನೂರಾರು ಕೋಟಿ ರು.ಗಳ ಅನುದಾನ ನೀಡಿ, ಸಹಕರಿಸಿದ್ದಾರೆ.
ಬಿ.ಸುರೇಶಗೌಡ ಮಾಜಿ ಶಾಸಕ