ಮಡಿಕೇರಿ(ಜು.21): ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಿದ್ದರೂ, ಸಮಾಧಾನದ ಸಂಗತಿ ಎಂದರೆ, ಜಿಲ್ಲೆಯಲ್ಲಿ ಈವರೆಗೆ ಸುಮಾರು 201 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ಇದರಿಂದ ಜನರಲ್ಲಿ ಆರಂಭದಲ್ಲಿದ್ದ ಭಯದ ವಾತಾವರಣ ನಿಧಾನಕ್ಕೆ ದೂರಾಗುತ್ತಿದೆ.

ಕೊಡಗಿನಲ್ಲಿ ಮಾ. 19ರಂದು ದುಬೈನಿಂದ ಬಂದ ವ್ಯಕ್ತಿಗೆ ಪ್ರಥಮ ಕೋವಿಡ್‌ 19 ಸೋಂಕು ಪತ್ತೆಯಾಗಿತ್ತು. ಇದರಿಂದ ಪುಟ್ಟಜಿಲ್ಲೆ ಕೊಡಗಿನಲ್ಲಿ ಆತಂಕ ಉಂಟಾಗಿತ್ತು. ಏ.7ರಂದು ಸೋಂಕಿತ ವ್ಯಕ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ, ನಂತರದ ದಿನಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಸೋಂಕು ಕಂಡುಬಂದಿರಲಿಲ್ಲ. ಹಸಿರು ವಲಯದಲ್ಲೂ ಕೊಡಗು ಜಿಲ್ಲೆ ಸ್ಥಾನ ಪಡೆದುಕೊಂಡು ದೇಶದಲ್ಲಿ ಉತ್ತಮ ಹೆಸರನ್ನು ಪಡೆದುಕೊಂಡಿತ್ತು.

79 ಕಾರ್ಮಿಕರಿಗೆ ಕೊರೋನಾ: ಮೆಟ್ರೋ, ಬಿಬಿಎಂಪಿಗೆ ಚಾಟಿ, ಹೈಕೋರ್ಟ್ ಗರಂ

ಲಾಕ್‌ಡೌನ್‌ ತೆರವುಗೊಂಡ ಬಳಿಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗತೊಡಗಿತು. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪಾಸಿಟಿವ್‌ ಪ್ರಕರಣಗಳು ಹೆಚ್ಚಾಗುತ್ತಾ ಬಂತು. ಇದೀಗ ಸದ್ಯ ಜಿಲ್ಲೆಯಲ್ಲಿ 281 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 201 ಮಂದಿ ಸೋಂಕಿತರು ಗುಣಮುಖರಾಗಿ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 75 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 5 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

75 ಮಂದಿ ಸೋಂಕಿತರು ಮಡಿಕೇರಿಯ ಕೋವಿಡ್‌ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಗುಣಲಕ್ಷಣ ಕಡಿಮೆಯಾದವರ ಗಂಟಲು ದ್ರವವನ್ನು ಕಾಲ ಕಾಲಕ್ಕೆ ಸಂಗ್ರಹಿಸಿ ನೆಗೆಟಿವ್‌ ವರದಿ ಬಂದು ಸಂಪೂರ್ಣ ಸೋಂಕಿನಿಂದ ಬಿಡುಗಡೆಯಾಗುತ್ತಿರುವವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತಿದೆ.

ಪಾಲಿಕೆ ಕೊರೋನಾ ಜಾಗೃತಿಗೆ ನಟ ರಮೇಶ್‌ ರಾಯಭಾರಿ

ಜಿಲ್ಲೆಯಲ್ಲಿ ಕೊರೋನಾ ವಾರಿಯರ್ಸ್‌ಗಳಿಗೂ ಸೋಂಕು ತಟ್ಟಿದ್ದರಿಂದ ಜನತೆಯಲ್ಲಿ ಭಯದ ವಾತಾವರಣ ಉಂಟಾಗಿತ್ತು. ಇದರಿಂದ ಖಾಸಗಿ ಆಸ್ಪತ್ರೆಗಳಿಗೆ ತೆರಳಲು ಜನರು ಹಿಂದೇಟು ಹಾಕುತ್ತಿದ್ದರು. ಇದೀಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿನಿಂದ ಗುಣಮುಖವಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನತೆ ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ.

ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ತಮ್ಮ ಮನೆಗೆ ಬಂದ ವ್ಯಕ್ತಿಯೊಬ್ಬರನ್ನು ವಿರಾಜಪೇಟೆಯ ಶಾಂತಿ ನಗರದ ನಿವಾಸಿಗಳು ಹೂಮಾಲೆ ಹಾಕಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಇದರಿಂದ ಸೋಂಕಿತರಿಗೆ ಭಯ ಬೇಡ ಧೈರ್ಯ ತುಂಬವ ಕೆಲಸ ಮಾಡಿದಂತಾಗಿದೆ.

ಮತ್ತೆ ಮೇಷ್ಟ್ರಾದ ವೈಎಸ್‌ವಿ: ವರ್ಷ ಪೂರ್ತಿ ‘ದತ್ತ’ ಆನ್‌ಲೈನ್‌ ಗಣಿತ ಪಾಠ!

ಕೊರೋನಾ ಸೋಂಕಿನಿಂದ ಗುಣಮುಖರಾದ ಮಡಿಕೇರಿಯ ಹೆಬ್ಬೆಟ್ಟಗೇರಿಯ ನಿವಾಸಿಯೊಬ್ಬರು ಪ್ರತಿಕ್ರಿಯಿಸಿ, ನನಗೆ 48 ವರ್ಷ ಪ್ರಾಯ. ಈ ಹಿಂದೆ ನನಗೆ ಕೋವಿಡ್‌ ಪಾಸಿಟಿವ್‌ ವರದಿ ಬಂದಿತ್ತು. ಈ ಸಂದರ್ಭ ಆಸ್ಪತ್ರೆಗೆ ಕರೆದುಕೊಂಡು ಹೋದರು. ವಿಟಮಿನ್‌ ಸಿ ಮಾತ್ರೆ ಬಿಟ್ಟು ಉಳಿದ ಯಾವುದೇ ಮಾತ್ರೆ ನೀಡಿಲ್ಲ. ಸೋಂಕು ಕಡಿಮೆಯಾದ ನಂತರ ಕೋವಿಡ್‌ ಕೇರ್‌ ಕೇಂದ್ರಕ್ಕೆ ಸ್ಥಳಾಂತರಿಸಿ ಎಂಟು ದಿನಗಳ ಕಾಲ ಇರಲು ಸೂಚಿಸಿದ್ದರು. ಮತ್ತೆ ನೆಗೆಟಿವ್‌ ವರದಿ ಬಂದ ನಂತರ ನನ್ನನ್ನು ಮನೆಗೆ ಕಳುಹಿಸಿದ್ದರು. ಕೊರೋನಾ ಸೋಂಕು ಇದೆ ಎಂದ ಸಂದರ್ಭ ನನಗೆ ಯಾವುದೇ ಭಯ ಆಗಲಿಲ್ಲ. ಆತ್ಮಸ್ಥೈರ್ಯ ಇರಬೇಕು ಎನ್ನುತ್ತಾರೆ.

ಕೋವಿಡ್‌ಗೆ ಮೃತ ಕ್ರೈಸ್ತರಿಗೂ ಈಗ ಗೌರವದ ಅಂತ್ಯಸಂಸ್ಕಾರ!

ನನಗೆ ಯಾವುದೇ ಸೋಂಕು ರೋಗ ಲಕ್ಷಣಗಳು ಕಂಡುಬಂದಿರಲಿಲ್ಲ. ಆದರೆ ಗಂಟಲು ದ್ರವ ಪರೀಕ್ಷಾ ವರದಿಯಲ್ಲಿ ಕೊರೋನಾ ಸೋಂಕು ಪಾಸಿಟಿವ್‌ ದೃಢವಾಗಿತ್ತು. ಆದರೆ ಆಸ್ಪತ್ರೆಗೆ ತೆರಳಿದ ಸಂದರ್ಭ ಯಾವುದೇ ಚಿಕಿತ್ಸೆ ಇರಲಿಲ್ಲ. ಇದರಿಂದ ಭಯ ಕೂಡ ಆಗಲಿಲ್ಲ. ಆದ್ದರಿಂದ ಕೊರೋನಾ ಬಂದರೆ ಯಾರೂ ಕೂಡ ಆತಂಕ ಪಡಬೇಕಾದ ಅವಶ್ಯಕತೆಯಿಲ್ಲ ಎಂದು ಆಲೂರು ಸಿದ್ದಾಪುರದ ಕೊರೋನಾ ಸೋಂಕಿನಿಂದ ಗುಣಮುಖವಾದ ವ್ಯಕ್ತಿ ತಿಳಿಸಿದ್ದಾರೆ.ಶೀತ, ಕೆಮ್ಮು, ಜ್ವರದ ರೋಗ ಲಕ್ಷಣಗಳಿರುತ್ತವೆಯೋ ಅವರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತದೆ. ಜೊತೆಗೆ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಮತ್ತು ವಿದೇಶದಿಂದ ಆಗಮಿಸುವವರಿಗೆ ನಿಯಮದಂತೆ ಕಡ್ಡಾಯವಾಗಿ ಕೋವಿಡ್‌-19 ಪರೀಕ್ಷೆ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕು ದೃಢಪಟ್ಟವರಿಗೆ ಸರ್ಕಾರದ ನಿಯಮಾನುಸಾರ ಜಿಲ್ಲಾ ಕೋವಿಡ್‌ ಆಸ್ಪತ್ರೆ ಮತ್ತು ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹ ಪ್ರಾಧ್ಯಾಪಕ ಡಾ. ಮಹೇಶ್‌ ತಿಳಿಸಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು