Asianet Suvarna News Asianet Suvarna News

ಬೀದರ್‌ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮೇಲೆ 2 ಸಾವಿರ ಕೋಟಿ ಸಾಲ..!

ನಾರಂಜಾ ಸಕ್ಕರೆ ಕಾರ್ಖಾನೆ ಅತೀ ಹೆಚ್ಚು, ಕಿಸಾನ್‌ ಕಾರ್ಖಾನೆ ಕಮ್ಮಿ ಸಾಲ| ಬೀದರ್‌ ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ 160 ಕೋಟಿ ಬಾಕಿ| 14 ದಿನಗಳಲ್ಲಿ ಬಾಕಿ ಪಾವತಿಸದಿದ್ದಲ್ಲಿ ಶೇ. 15ರಷ್ಟು ಬಡ್ಡಿ ಸಹಿತ ವಸೂಲಿ| 

2000 Crore Loan on Sugar Factories in Bidar district grg
Author
Bengaluru, First Published Mar 24, 2021, 3:37 PM IST

ಬೀದರ್‌(ಮಾ.24): ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಸ್ಥಿತಿ ಅತ್ಯಂತ ಗಂಭೀರವಾಗಿದ್ದಷ್ಟೇ ಅಲ್ಲ, ಈಗಾಗಲೇ ಬಾಗಿಲು ಮುಚ್ಚಿರುವ ಎರಡು ಕಾರ್ಖಾನೆಗಳನ್ನು ಹೊರತುಪಡಿಸಿದರೆ ಇನ್ನುಳಿದ ನಾಲ್ಕು ಕಾರ್ಖಾನೆಗಳ ಮೇಲೆ ಸುಮಾರು 2 ಸಾವಿರ ಕೋಟಿ ರು. ಸಾಲದ ಹೊರೆಯಿದ್ದು, ರೈತರಿಗೆ ಇನ್ನೂ 160 ಕೋಟಿ ರು. ಬಾಕಿ ಪಾವತಿಸಬೇಕಿದೆ. ಈ ಕುರಿತಂತೆ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರಿಗೆ ಮಂಗಳವಾರ ಪೌರಾಡಳಿತ ಹಾಗೂ ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ ಉತ್ತರಿಸಿದ್ದಾರೆ.

2 ಸಾವಿರ ಕೋಟಿ ರು. ಸಾಲ:

ಸಕ್ಕರೆ ಕಾರ್ಖಾನೆಗಳ ಸಾಲದ ವಿಷಯಕ್ಕೆ ಬಂದಾಗ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯು 586.98 ಕೋಟಿ ರು. ಸಾಲವನ್ನು ಮೈಮೇಲೆ ಹೊದ್ದುಕೊಂಡು ಮೊದಲ ಸ್ಥಾನದಲ್ಲಿದೆ. ಕೆಲ ವರ್ಷಗಳ ಹಿಂದಷ್ಟೇ ಆರಂಭವಾದ ಬೀದರ್‌ ಕಿಸಾನ್‌ ಕಾರ್ಖಾನೆ 203.3 ಕೋಟಿ ರು. ಸಾಲದ ಮೂಲಕ ಕೊನೆ ಸ್ಥಾನದಲ್ಲಿದೆ. ಇನ್ನುಳಿದ ನಡೆಯುತ್ತಿರುವ ಕಾರ್ಖಾನೆಗಳ ಪೈಕಿ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ 351.8 ಕೋಟಿ ರು. ಹಾಗೂ ಭಾಲ್ಕೇಶ್ವರ ಶುಗರ್ಸ್‌ ಕಾರ್ಖಾನೆಯು 295.88 ಕೋಟಿ ರು. ಸಾಲ ಹೊಂದಿದೆ. ಇತ್ತೀಚೆಗೆ ಸ್ಥಗಿತಗೊಂಡಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಮೇಲೆ 274.87 ಕೋಟಿ ರು. ಸಾಲ ಸೇರಿ ಒಟ್ಟು ಸುಮಾರು 2 ಸಾವಿರ ಕೋಟಿ ರು. ಸಾಲವಿದೆ.

ರಂಗೇರಿದ ಬೈ ಎಲೆಕ್ಷನ್: ಸಿದ್ದರಾಮಯ್ಯನವರನ್ನ ಭೇಟಿಯಾದ ಅಭ್ಯರ್ಥಿ

160 ಕೋಟಿ ರು. ಪಾವತಿ ಬಾಕಿ:

ಜಿಲ್ಲೆಯ ಈ ನಾಲ್ಕು ಕಾರ್ಖಾನೆಗಳು ಕಾರ್ಖಾನೆಗಳು 2020-21ನೇ ಹಂಗಾಮಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯು 38.09 ಕೋಟಿ, ಬೀದರ್‌ ಕಿಸಾನ್‌ ಶಕ್ಕರ್‌ ಕಾರ್ಖಾನಾ 34.36 ಕೋಟಿ, ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ 39.82ಕೋಟಿ ಹಾಗೂ ಭಾಲ್ಕೇಶ್ವರ ಶುಗರ್ಸ್‌ ಕಾರ್ಖಾನೆಯು 47.64 ಕೋಟಿ ರು. ಸಾಲವನ್ನು ಬಾಕಿಯೊಂದಿಗೆ ಜಿಲ್ಲೆಯ ನಾಲ್ಕು ಕಾರ್ಖಾನೆಗಳಿಂದ ರೈತರಿಗೆ ಇನ್ನೂ ಸುಮಾರು 160 ಕೋಟಿ ರು. ಪಾವತಿಯಾಗಬೇಕಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ಕಬ್ಬು ಸರಬರಾಜು ಮಾಡಿದ 14 ದಿನಗಳಲ್ಲಿ ಬಿಲ್ಲು ಪಾವತಿಸದಿದ್ದಲ್ಲಿ ಶೇ.15ರ ಬಡ್ಡಿಯೊಂದಿಗೆ ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲು ಏಕೆ ಕ್ರಮ ಕೈಗೊಳ್ಳಬಾರದು ಎಂದು ಫೆ.2ರಂದು ನೋಟಿಸ್‌ ಜಾರಿಗೊಳಿಸಿಲಾಗಿದೆ ಎಂದು ತಿಳಿಸಿದ ಸಚಿವರು, ಪ್ರಸ್ತುತ ಹಂಗಾಮು ಚಾಲ್ತಿಯಲ್ಲಿರುವುದರಿಂದ ಕಾರ್ಖಾನೆಗಳು ಕಬ್ಬಿನ ಬಿಲ್ಲು ಪಾವತಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ಆದರೆ ಹಂಗಾಮು ಯಾವ ಕಾರ್ಖಾನೆಯಲ್ಲಿ ಇನ್ನೂ ನಡೆಯುತ್ತಿದೆ ಎಂಬುವದು ಅಚ್ಚರಿ ಪ್ರಶ್ನೆಯಾಗಿದೆ.

ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಮನಬಂದಂತೆ ವರ್ತಿಸುತ್ತಿವೆ. ರೈತರ ಬಾಕಿ ಪಾವತಿಸುವಲ್ಲಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ನಿರ್ಧರಿಸಿ ಸೂಚಿಸಿದಂತೆ ದರ ನೀಡಲು ಹಿಂದೇಟು ಹಾಕುತ್ತಿವೆ. ಸಕ್ಕರೆ ಉತ್ಪಾದನೆ ಕಮ್ಮಿ ಇಲ್ಲ, ಮಾರಾಟವೂ ನಿಂತಿಲ್ಲ. ಹೀಗಿದ್ದಾಗ ಬಾಕಿ ಇಡೋದು ಏಕೆ. ಕೂಡಲೇ ರೈತರ ಬಾಕಿ ಪಾವತಿಸಬೇಕು. ಇಲ್ಲವಾದಲ್ಲಿ ಬಡ್ಡಿ ಸಹಿತ ವಾಪಸ್‌ ಕೊಡಬೇಕು ಎಂದು ಬೀದರ್‌ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಹೇಳಿದ್ದಾರೆ.
 

Follow Us:
Download App:
  • android
  • ios