ಬೆಂಗಳೂರು(ಜು.15): ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು, ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಬಳಕೆ ಹಾಗೂ ಆ್ಯಂಬುಲೆನ್ಸ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಶೀಘ್ರ ಮಾರ್ಗಸೂಚಿ ಅಳವಡಿಸಿಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್‌ ಭಾಸ್ಕರ್‌ ಸೂಚನೆ ನೀಡಿದ್ದಾರೆ.

ಮಂಗಳವಾರ ಬಿಬಿಎಂಪಿ ಕೊರೋನಾ ವಾರ್‌ ರೂಂನಲ್ಲಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ನಗರದಲ್ಲಿ ಲಾಕ್‌ಡೌನ್‌ ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಬಗ್ಗೆ ಹಾಗೂ ಕೊರೋನಾ ಆರೈಕೆ ಕೇಂದ್ರಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವ ಬಗ್ಗೆ ನಿರ್ದೇಶನ ನೀಡಿದ್ದಾರೆ.

ಆಂಟಿಜೆನ್‌ ಟೆಸ್ಟ್‌ಗೆ 200 ವಾಹನ:

ಲಾಕ್‌ಡೌನ್‌ ಸಂದರ್ಭದಲ್ಲಿ ನಿಗದಿತ ಪ್ರದೇಶಗಳಲ್ಲಿ ಆಂಟಿಜೆನ್‌ ಟೆಸ್ಟ್‌ ಮುಂದುವರಿಯಲಿದೆ. 130 ತಂಡಗಳ ಮೂಲಕ ರಾರ‍ಯಪಿಡ್‌ ಆಂಟಿಜೆನ್‌ ಟೆಸ್ಟಿಂಗ್‌ ನಡೆಯಲಿದೆ. ಅಲ್ಲದೆ, 200 ವಾಹನಗಳನ್ನು ಇದಕ್ಕೆಂದೇ ಮೀಸಲಿಡಲಾಗಿದೆ. ಸೋಂಕು ಹೆಚ್ಚು ಇರುವ ಪ್ರದೇಶಗಳಲ್ಲಿ ರಾರ‍ಯಪಿಡ್‌ ಆಂಟಿಜೆನ್‌ ಪರೀಕ್ಷೆಯನ್ನು ಆದ್ಯತೆ ಮೇಲೆ ಮಾಡಲಿದ್ದೇವೆ ಎಂದು ತಿಳಿಸಿದರು.