* ಅದಿರು ರಫ್ತಿಗೆ ನಿಷೇಧವಿದ್ದರೂ ಅಕ್ರಮವಾಗಿ ಸಾಗಣೆ* ಆಂಧ್ರಪ್ರದೇಶದ ಕೃಷ್ಣಾಪಟ್ಟಣಂ ಪೋರ್ಟ್‌ಗೆ ಅಕ್ರಮವಾಗಿ ಅದಿರು ಸಾಗಾಟ*  ಬಳ್ಳಾರಿ ಇಸ್ಪಾತ್‌ ಕಂಪನಿ ಹೆಸರಲ್ಲಿ 20 ಲಾರಿ ಲೋಡ್‌ ಅದಿರು ಸಾಗಣೆ 

ಬಳ್ಳಾರಿ(ಜೂ.21): ಜಿಲ್ಲೆಯಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ 20 ಲಾರಿಗಳನ್ನು ಸ್ಥಳೀಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಕ್‌ಡಸ್ಟ್‌ ಸಾಗಾಟದ ಹೆಸರಲ್ಲಿ ಅದಿರು ಸಾಗಾಟ ದಂಧೆ ನಡೆಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಕೃಷ್ಣಾಪಟ್ಟಣಂ ಪೋರ್ಟ್‌ಗೆ ಈ ಅದಿರನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ನಿತ್ಯ ನೂರಕ್ಕೂ ಹೆಚ್ಚು ಲಾರಿಗಳಲ್ಲಿ ರಾಕ್‌ಡಸ್ಟ್‌ ಹೆಸರಲ್ಲಿ ಕೋಟ್ಯಂತರ ರು. ಮೌಲ್ಯದ ಉತ್ಕೃಷ್ಟ ಕಬ್ಬಿಣದ ಅದಿರು ಸಾಗಾಟವಾಗುತ್ತಿತ್ತು. ಬಳ್ಳಾರಿ ಇಸ್ಪಾತ್‌ ಕಂಪನಿ ಹೆಸರಲ್ಲಿ 20 ಲಾರಿಗಳನ್ನು ಲೋಡ್‌ ಮಾಡಿ ಕಳಿಸಲಾಗಿದೆ. 20 ಲಾರಿಗಳ ಡ್ರೈವರ್‌ ಮತ್ತು ಲೋಡ್‌ ಮಾಡಿದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅದಾವತ್‌ ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಬಳ್ಳಾರಿ: ಲಾಕ್‌ಡೌನ್‌ ಇದ್ರೂ ಸಚಿವ ಈಶ್ವರಪ್ಪ ದೇಗುಲ ಪೂಜೆ

ರಾಜ್ಯದಿಂದ ಅದಿರು ರಫ್ತು ಮಾಡುವುದನ್ನು 2010ರಿಂದ ನಿಷೇಧಿಸಲಾಗಿದ್ದು, ಬಳ್ಳಾರಿ ಜಿಲ್ಲೆಯಿಂದ ಅಕ್ರಮವಾಗಿ ಅದಿರು ಸಾಗಣೆ ಸದ್ದಿಲ್ಲದೆ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ. ಅಕ್ರಮ ಅದಿರು ಸಾಗಣೆಗೂ ಬಳ್ಳಾರಿಗೆ ಬಿಡದ ನಂಟು ಎಂಬಂತಾಗಿದ್ದು, ಈ ದಂಧೆಯ ಹಿಂದೆ ಅನೇಕ ಪ್ರಭಾವಿಗಳ ಕೈವಾಡವಿದೆ ಎಂದು ಹೇಳಲಾಗುತ್ತಿದೆ.