ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕುಣಿಕೆಲ್ಲೂರು ಗ್ರಾಮದ ಬಳಿ ನಡೆದ ಘಟನೆ 

ಮಸ್ಕಿ(ನ.19): ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತರುತ್ತಿದ್ದ ಬೊಲೆರೊ ವಾಹನ ಪಲ್ಟಿಯಾಗಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತಾಲೂಕಿನ ಕುಣಿಕೆಲ್ಲೂರು ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಮಸ್ಕಿ ತಾಲೂಕಿನ ಕುಣಿಕೆಲ್ಲೂರು ಗ್ರಾಮದಿಂದ ಸಂತೆಕೆಲ್ಲೂರು ಗ್ರಾಮಕ್ಕೆ ಬೆಳಗ್ಗೆ ಶಾಲಾ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಬೊಲೆರೊ ವಾಹನ ಕುಣಿಕೆಲ್ಲೂರು ಗ್ರಾಮದ ಸಮೀಪದಲ್ಲಿ ಪಲ್ಟಿಯಾಗಿದೆ. ಗಾಯಗೊಂಡ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. 7 ವಿದ್ಯಾರ್ಥಿಗಳು ಗಂಬೀರ ಗಾಯಗೊಂಡಿದ್ದು ರಾಯಚೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಸುದ್ದಿ ತಿಳಿಯುತ್ತಲೇ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ಶಾಸಕ ಆರ್‌.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌, ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತ್ಯೇಕವಾಗಿ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಗಾಯಗೊಂಡ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಶಾಸಕ ಆರ್‌.ಬಸನಗೌಡ ಹಾಗೂ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಸಿಂಧನೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೊರೇಬಾಳ ಗ್ರಾಪಂ ಮಾಜಿ ಸದಸ್ಯನ ಶವ ಪತ್ತೆ

ವಿದ್ಯಾರ್ಥಿಗಳ ಅಳಲು:

ಶಾಲಾ ಸಮಯಕ್ಕೆ ಬಸ್‌ ಬಾರದ ಕಾರಣ ಕುಣಿಕೆಲ್ಲೂರು ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಬೊಲೆರೊ, ಟಾಟಾ ಏಸ್‌, ಅಟೋ ಮುಂತಾದ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ ಎಂದು ಪಾಲಕರು ಹಾಲಿ ಹಾಗೂ ಮಾಜಿ ಶಾಸಕರ ಮುಂದೆ ತಮ್ಮ ಅಳಲು ತೋಡಿಕೊಂಡರು. ಪಾಲಕರ ಮನವಿಗೆ ಸ್ಪಂದಿಸಿದ ಶಾಸಕರು ಹಾಗೂ ಮಾಜಿ ಶಾಸಕರು ಮಸ್ಕಿ ಹಾಗೂ ಲಿಂಗಸುಗೂರು ಡಿಪೋ ಮ್ಯಾನೇಜರ್‌ಗೆ ದೂರವಾಣಿ ಕರೆ ಮಾಡಿ ಮಸ್ಕಿ ಕ್ಷೇತ್ರದಲ್ಲಿ ಶಾಲೆಗಳ ಸಮಯಕ್ಕೆ ಸರಿಯಾಗಿ ಬಸ್‌ ಓಡಿಸುವಂತೆ ಸೂಚಿಸಿದರು. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.