Asianet Suvarna News Asianet Suvarna News

Dakshina Kannada Clash : ಉಪ್ಪಿನಂಗಡಿ ಪ್ರತಿಭಟನೆ ವೇಳೆ ಹಿಂಸೆ : 20 ಮಂದಿಗೆ ಗಾಯ

  •  ಉಪ್ಪಿನಂಗಡಿ ಪ್ರತಿಭಟನೆ ವೇಳೆ ಹಿಂಸೆ : 20 ಮಂದಿಗೆ ಗಾಯ
  • ಪೊಲೀಸರಿಂದ ಲಾಠಿಚಾರ್ಜ್, ನಿಷೇಧಾಜ್ಞೆ ಜಾರಿ
     
20 People Injured in Uppinangadi Clash  snr
Author
Bengaluru, First Published Dec 16, 2021, 8:06 AM IST

 ಉಪ್ಪಿನಂಗಡಿ(ಡಿ.16):  ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಪ್ಪಿನಂಗಡಿ ಬಳಿ ಮೀನಿನ ಅಂಗಡಿಯೊಂದಕ್ಕೆ (Fish market) ತಲವಾರು ದಾಳಿ ನಡೆಸಿ ಮೂವರನ್ನು ಕಡಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಸಂಜೆ ನಡೆದ ಪ್ರತಿಭಟನೆಯಲ್ಲಿ ಲಾಠಿ ಚಾರ್ಜ್ ನಡೆದು ಏಳು ಮಂದಿ ಪೊಲೀಸರೂ (police) ಸೇರಿದಂತೆ 20ಕ್ಕೂ ಮಿಕ್ಕಿದ ಜನರು ಗಾಯಗೊಂಡಿದ್ದಾರೆ. ಈ ವೇಳೆ 144 ಸೆಕ್ಷನ್‌ ಉಲ್ಲಂಘನೆ ಹಾಗೂ ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಆರೋಪದನ್ವಯ ಮೂರು ಪ್ರಕರಣಗಳು ದಾಖಲಾಗಿವೆ. ದಾಳಿ ಪ್ರಕರಣದ ವಿಚಾರಣೆಗಾಗಿ ಶಂಕಿತ ಮೂವರು ಪಿಎಫ್‌ಐ (PFI) ಮುಖಂಡರಾದ ಅಬ್ದುಲ್‌ ಹಮೀದ್‌ ಮೆಜೆಸ್ಟಿಕ್‌, ಝಕಾರಿಯಾ ಕೊಡಿಪ್ಪಾಡಿ, ಮುಸ್ತಾಫ ಲತೀಫಿ ಎಂಬವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಸುದ್ದಿ ತಿಳಿದು ಪೊಲೀಸ್‌ ಠಾಣೆಯ ಮುಂದೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಜಮಾಯಿಸಿ ತಮ್ಮ ನಾಯಕರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.

ಆಗ್ರಹಕ್ಕೆ ಮಣಿದ ಪೊಲೀಸರು (Police) ಅಬ್ದುಲ್‌ ಹಮೀದ್‌ ಮೆಜೆಸ್ಟಿಕ್‌ ಎಂಬವರನ್ನು ಬಿಡುಗಡೆಗೊಳಿಸಿ ಗುಂಪನ್ನು ಚದುರಿಸಲು ವಿನಂತಿಸಿದರು. ಆದರೆ ಗುಂಪು ಮತ್ತಷ್ಟು ಬಲಿಷ್ಠಗೊಂಡು ರಾತ್ರಿ ವೇಳೆ ಪೊಲೀಸ್‌ ಠಾಣೆಗೆ (police station) ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರ ವಿನಂತಿಯ ಮೇರೆಗೆ ತಾಲೂಕು ದಂಡಾಧಿಕಾರಿ 144 ಸೆಕ್ಷನ್‌ (144 Section) ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದರು.

ಈ ವೇಳೆ ಪ್ರತಿಭಟನಾಕಾರರಲ್ಲಿ ಕೆಲವರು ಪೊಲೀಸ್‌ (Police) ಜೀಪಿಗೆ ಕಲ್ಲೆಸೆದು ಹಾನಿಗೊಳಿಸಿದರೆ, ಮತ್ತೆ ಕೆಲವರು ಕರ್ತವ್ಯ ನಿರತ ಪೊಲೀಸ್‌ (Police) ಅಧಿಕಾರಿಗಳ ಮೇಲೆ ಮುಗಿಬಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿದರು.

ಈ ವೇಳೆ ಡಿವೈಎಸ್ಪಿ (DYSP) ಗಾನ ಪಿ. ಕುಮಾರ್‌, ಪಿಎಸ್‌ಐ ಪ್ರಸನ್ನ, ಮಹಿಳಾ ಪಿಎಸೈ ಓಮನಾ ಸೇರಿ 7 ಪೊಲೀಸರು ಗಾಯಗೊಂಡರು. ಪ್ರತಿಭಟನಾಕಾರರಲ್ಲಿ 16ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾಗಿ ತಿಳಿದುಬಂದಿದೆ. ದಾಂದಲೆಯಿಂದಾಗಿ ಪೊಲೀಸ್‌ ಜೀಪು (Police Jeep) ಹಾಗೂ ಪೊಲೀಸ್‌ ಕೌಂಟರಿನ ಗಾಜುಗಳು ಪುಡಿಯಾಗಿವೆ.

ಇತ್ತ ವಿಚಾರಣೆ ಸಲುವಾಗಿ ಪೊಲೀಸ್‌ ವಶದಲ್ಲಿದ್ದ ಪಿಎಫ್‌ಐ ಮುಂದಾಳುಗಳಾದ ಝಕಾರಿಯಾ ಕೊಡಿಪ್ಪಾಡಿ, ಮುಸ್ತಾಫ ಲತೀಫ್‌ ಹಾಗೂ ತಲವಾರು ದಾಳಿ ಕೃತ್ಯದ ಪ್ರಮುಖ ಆರೋಪಿ ಸಿನಾನ್‌ ಕೊಯಿಲ ಎಂಬ ಮೂವರನ್ನೂ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ (Court) ಹಾಜರು ಪಡಿಸಿದೆ. ನ್ಯಾಯಾಲಯವು ಝಕಾರಿಯಾ ಹಾಗೂ ಮುಸ್ತಾಫ ಲತೀಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರೆ, ಸಿನಾನ್‌ ಕೊಯಿಲನನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

ನಿಷೇಧಾಜ್ಞೆ ಜಾರಿ:ಅಹಿತಕರ ಘಟನೆಗೆ ಸಂಬಂಧಿಸಿ ಪುತ್ತೂರು ಉಪವಿಭಾಗವಾದ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನಾದ್ಯಂತ ಡಿ.15 ರಿಂದ ಡಿ.17ರ ಮಧ್ಯರಾತ್ರಿ ಗಂಟೆ 12ರ ತನಕ 144 ನಿಷೇಧಾಜ್ಞೆಯನ್ನು ವಿಧಿಸಿ ಪುತ್ತೂರು ಸಹಾಯಕ ಕಮೀಷನರ್‌ ಡಾ. ಯತೀಶ್‌ ಉಳ್ಳಾಲ್‌ ಆದೇಶ ಹೊರಡಿಸಿದ್ದಾರೆ.

  • ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ಮೀನಿನ ಅಂಗಡಿಯೊಂದಕ್ಕೆ ತಲವಾರು ದಾಳಿ  
  •  ಉಪ್ಪಿನಂಗಡಿ ಪ್ರತಿಭಟನೆ ವೇಳೆ ಹಿಂಸೆ : 20 ಮಂದಿಗೆ ಗಾಯ
  • ಪೊಲೀಸರಿಂದ ಲಾಠಿಚಾರ್ಜ್, ನಿಷೇಧಾಜ್ಞೆ ಜಾರಿ 
  • ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಆರೋಪದನ್ವಯ ಮೂರು ಪ್ರಕರಣ
  • ದಾಳಿ ಪ್ರಕರಣದ ವಿಚಾರಣೆಗಾಗಿ ಶಂಕಿತ ಮೂವರು ಪಿಎಫ್‌ಐ ಮುಖಂಡರ ವಶ
  • ಪೊಲೀಸ್‌ ಠಾಣೆಯ ಮುಂದೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ
  • ಪ್ರತಿಭಟನಾಕಾರರಲ್ಲಿ ಕೆಲವರು ಪೊಲೀಸ್‌ ಜೀಪಿಗೆ ಕಲ್ಲೆಸೆದು ಹಾನಿ
Follow Us:
Download App:
  • android
  • ios