Asianet Suvarna News Asianet Suvarna News

ಸಿದ್ದರಾಮೋತ್ಸವ ಎಫೆಕ್ಟ್‌: ಪುಣೆ- ಬೆಂಗಳೂರು ಹೆದ್ದಾರಿಯಲ್ಲಿ 20 ಕಿ.ಮೀ. ಟ್ರಾಫಿಕ್‌ ಜಾಮ್‌

ಬೈಕ್‌ನಲ್ಲಿ ಸಮಾವೇಶ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್‌ ನಾಯಕರು

20 km Traffic Jam Due to Siddaramotsava in Davanagere grg
Author
Bengaluru, First Published Aug 4, 2022, 2:30 AM IST

ದಾವಣಗೆರೆ(ಆ.04):  ಸಿದ್ದರಾಮಯ್ಯ ಅವರ ಜನ್ಮದಿನ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದಾವಣಗೆರೆಯ ಶಾಮನೂರು ಪ್ಯಾಲೇಸ್‌ ಮೈದಾನದತ್ತ ದಾಂಗುಡಿಯಿಟ್ಟ ಲಕ್ಷಾಂತರ ವಾಹನಗಳಿಂದಾಗಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡೂ ದಿಕ್ಕಿಗೂ 15-20 ಕಿ.ಮೀ. ಉದ್ದದಷ್ಟು ತೀವ್ರ ಸಂಚಾರ ದಟ್ಟಣೆ ಉಂಟಾಯಿತು. ಬೆಳಗ್ಗೆಯಿಂದಲೇ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡಿ ಕಿ.ಮೀ.ಗಟ್ಟಲೇ ನಡೆದುಕೊಂಡೇ ಕಾರ್ಯಕ್ರಮದ ವೇದಿಕೆ ತಲುಪಿದರು. ವಿಚಿತ್ರವೆಂದರೆ ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ರಮೇಶ್‌ ಕುಮಾರ್‌, ಎಸ್‌.ಎಸ್‌. ಮಲ್ಲಿಕಾರ್ಜುನ, ಶಾಸಕ ಬೈರತಿ ಸುರೇಶ್‌ ಸೇರಿದಂತೆ ಹಲವರಿಗೆ ಕಾರ್ಯಕ್ರಮ ಸ್ಥಳ ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳನ್ನು ಆಗಮಿಸಿದರು.

ಹತ್ತಾರು ಕಿ.ಮೀ. ಸಂಚಾರದಟ್ಟಣೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವವರೂ ಮಾತ್ರವಲ್ಲದೆ ಸಾರ್ವಜನಿಕರೂ ಪರದಾಡಬೇಕಾಯಿತು. ತುಂಬಾ ದೂರದಲ್ಲೇ ಸಂಚಾರದಟ್ಟಣೆಗೆ ಸಿಲುಕಿದ ಸಾವಿರಾರು ಮಂದಿ ವೇದಿಕೆ ಬಳಿಗೆ ತಲುಪಲೂ ಸಾಧ್ಯವಾಗದೆ ನಿರಾಶೆಗೊಂಡರು.

ಸಿದ್ದರಾಮೋತ್ಸವ: ರಾಹುಲ್‌ ಸೇರಿ ಘಟಾನುಘಟಿಗಳು ಭಾಗಿ, ಸಿದ್ದು ಸಿಎಂ ಅಭ್ಯರ್ಥಿ ಅಂತ ಬಿಂಬಿತವಾಗ್ತಾರಾ?

ಹೆದ್ದಾರಿಯಲ್ಲಿ ಕಣ್ಣಾಯಿಸಿದಷ್ಟೂಬಸ್ಸು, ಕಾರು, ಕ್ರೂಸರ್‌ಗಳದ್ದೇ ಹವಾ. ಕ್ರೂಸರ್‌ಗಳು, ಬಸ್ಸುಗಳ ಮೇಲೆ ಕುಣಿತು ಆಗಮಿಸಿದ ಕಾರ್ಯಕರ್ತರು ಮಳೆಯ ನಡುವೆಯೂ ಎದೆಗುಂದದೆ ಕಾರ್ಯಕ್ರಮದ ಬಳಿಗೆ ಆಗಮಿಸಿದರು.

ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿದ್ದರೂ ಸಂಚಾರ ದಟ್ಟಣೆ ನಿಯಂತ್ರಿಸಲು ಆಗದೆ ಪೊಲೀಸರೇ ಹೈರಾಣಾದರು. ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್‌ ಖಾನ್‌ ಅವರಿಗೆ ಕಾರ್ಯಕ್ರಮಕ್ಕೆ ಆಗಮಿಸಲು ಜಾಗವಿಲ್ಲದ ಕಾರಣ ಧ್ವನಿವರ್ಧಕದ ಮೂಲಕ ಅನೌನ್ಸ್‌ ಮಾಡಿ ರಾಜ್ಯಸಭೆ ಮಾಜಿ ಉಪಸಭಾಪತಿಗಳಿಗೆ ದಾರಿ ಮಾಡಿಕೊಡುವಂತೆ ಮಾಡಿ ಕರೆ ತರಬೇಕಾಯಿತು.
 

Follow Us:
Download App:
  • android
  • ios