ಕೋಲಾರ [ಡಿ.26]:  ಕ್ರಿಕೆಟ್‌ ಟೂರ್ನಿಮೆಂಟ್‌ ವೇಳೆ ಚಂಡು ಹಿಡಿಯಲು ಹೋಗಿ ಇಬ್ಬರು ಆಟಗಾರರು ಪರಸ್ಪರ ಡಿಕ್ಕಿ ಹೊಡೆದುಕೊಂಡು ಪ್ರಜ್ಞೆ ಕಳೆದುಕೊಂಡ ಘಟನೆ ನಡೆದಿದೆ.

ಭಾನು ಹಾಗೂ ಶ್ರೀನಿವಾಸ್‌ ಗಾಯಾಳುಗಳು. ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿಯಲ್ಲಿ ಆಯೋಜಿಸಿದ್ದ ಧೋನಿ ಕಪ್‌ ಕ್ರಿಕೆಟ್‌ ಟೆನ್ನಿಸ್‌ ಬಾಲ್‌ ಟೂರ್ನಿಮೆಂಟ್‌ ವೇಳೆ ಘಟನೆ ಸಂಭವಿಸಿದೆ. ಆಟಗಾರರು ಆರೋಗ್ಯವಾಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಭಾನುವಾರ ರೈಸಿಂಗ್‌ ಸ್ಟಾರ್ಸ್‌ ಹಾಗೂ ಎಸ್‌ಎಎಸ್‌ ಕ್ರಿಕೆಟರ್ಸ್‌ ತಂಡಗಳ ನಡುವೆ ಪಂದ್ಯ ನಡೆಯಿತು. ರೈಸಿಂಗ್‌ ಸ್ಟಾರ್ಸ್‌ ತಂಡ ಬ್ಯಾಟಿಂಗ್‌ನ ಆರನೇ ಓವರ್‌ನಲ್ಲಿ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ ಹೊಡೆದ ಚೆಂಡು ಹಿಡಿಯಲು ಭಾನು ಹಾಗೂ ಶ್ರೀನಿವಾಸ್‌ ಓಡಿ ಬಂದಿದ್ದು, ಸಂವಹನದ ಕೊರತೆಯಿಂದ ಒಬ್ಬರಿಗೊಬ್ಬರು ಡಿಕ್ಕಿಹೊಡೆದುಕೊಂಡಿದ್ದಾರೆ.

ಡಿಕ್ಕಿ ಹೊಡೆದುಕೊಂಡ ಇಬ್ಬರೂ ಪ್ರಜ್ಞೆ ಕಳೆದುಕೊಂಡಿದ್ದಾರೆ. ಕೂಡಲೇ ಇಬ್ಬರು ಆಟಗಾರರನ್ನೂ ಶ್ರೀನಿವಾಸಪುರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಇಬ್ಬರೂ ಆಟಗಾರರು ಮತ್ತೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ.

ಹಿರಿಯ ವೈದ್ಯಾಧಿಕಾರಿ ಮೇಲೆ ಆಸಿಡ್ ಹಾಕ್ತಾರಂತೆ, ಕೆಡಿಪಿ ಸಭೆಯಲ್ಲಿ ಕಣ್ಣೀರು...

ವೈರಲ್‌ ಆದ ವಿಡಿಯೋ:  ಇದೇ ಮೊದಲ ಬಾರಿಗೆ ಕ್ರಿಕೆಟ್‌ ಟೂರ್ನಿಮೆಂಟ್‌ ಅನ್ನು ನೇರ ಪ್ರಸಾರ ಮಾಡಲು ಆಯೋಜಕರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಅದರಂತೆ ನೇರ ಪ್ರಸಾರ ವೇಳೆ ಇಬ್ಬರು ಆಟಗಾರರು ಕ್ಯಾಚ್‌ ಹಿಡಿಯಲು ಬಂದು ಡಿಕ್ಕಿ ಹೊಡೆದುಕೊಂಡು ಪ್ರಜ್ಞೆ ತಪ್ಪುವುದು ರೆಕಾರ್ಡ್‌ ಆಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.