ಶಿವಮೊಗ(ಜೂ.22): ಜಿಲ್ಲೆಯಲ್ಲಿ ಭಾನುವಾರ ಇಬ್ಬರು ವ್ಯಕ್ತಿಗಳಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರಲ್ಲಿ ಒಬ್ಬರು ಮಹಾರಾಷ್ಟ್ರದಿಂದ ಜಿಲ್ಲೆಗೆ ಹಿಂತಿರುಗಿದವರಾಗಿದ್ದರೆ, ಇನ್ನೊಬ್ಬರಿಗೆ ಸೋಂಕು ಹೇಗೆ ತಗುಲಿದೆ ಎಂಬುದನ್ನು ಪತ್ತೆಹಚ್ಚಬೇಕಿದೆ. 

ಪಿ-8817 ( 25 ವರ್ಷದ ಯುವಕ) ಮಹಾರಾಷ್ಟ್ರ ರಾಜ್ಯದಿಂದ ಜಿಲ್ಲೆಗೆ ಹಿಂತಿರುಗಿದ ಟ್ರಾವೆಲ್‌ ಹಿಸ್ಟರಿ ಇದೆ. ಈತ ಸಾಗರ ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿದ್ದಾರೆ. ಇನ್ನೋರ್ವ ಪಿ-8818 (35 ವರ್ಷದ ಯುವಕ) ಗೆ ಸೋಂಕು ಹೇಗೆ ತಗುಲಿದೆ ಎಂಬುದನ್ನು ಪತ್ತೆಹಚ್ಚಬೇಕಿದೆ. ಈತ ಶಿವಮೊಗ್ಗ ನಗರದ ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿ ಎಂದು ತಿಳಿದುಬಂದಿದೆ. ಪಿ-8818 ಗೆ ಶೀತ, ಕೆಮ್ಮು, ಜ್ವರ ಹಿನ್ನೆಲೆಯಲ್ಲಿ ಕಳೆದ 3 ದಿನದ ಹಿಂದೆ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಶನಿವಾರ ಸಂಜೆ ಆ ವ್ಯಕ್ತಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. ಪತ್ತೆಯಾದ ಇಬ್ಬರು ಸೋಂಕಿತರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ 482 ಕೊರೋನಾ ಕೇಸ್‌ ಹೈರಿಸ್ಕ್‌, ಹೆಚ್ಚಿದ ಆತಂಕ!

ವಿವೇಕಾನಂದ ಬಡಾವಣೆ ನಿವಾಸಿ ಒಬ್ಬರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಹಿನ್ನೆಲೆ ಬಡಾವಣೆಯ ಎ ಬ್ಲಾಕ್‌ ನ 6ನೇ ತಿರುವಿನ 100 ಮೀಟರ್‌ ಸುತ್ತಮುತ್ತ ಕಂಟೈನ್ಮೆಂಟ್‌ ಝೋನ್‌ ಆಗಿ ಪರಿವರ್ತನೆ ಮಾಡಲಾಗಿದೆ. ಬಡಾವಣೆಯಲ್ಲಿ ಆಟೋರಿಕ್ಷಾ ಮೂಲಕ ಮಾಹಿತಿ ನೀಡಲಾಗುತ್ತಿದ್ದು, ಬಡಾವಣೆಯಲ್ಲಿ ಪಾಲಿಕೆ ಸಿಬ್ಬಂದಿ ಸ್ಯಾನಿಟೈಜರ್‌ ಮಾಡಿದರು. ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 111 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಅದರಲ್ಲಿ 85 ಮಂದಿ ಗುಣಮುಖರಾಗಿ ಹಿಂತಿರುಗಿದ್ದಾರೆ. 25 ಮಂದಿಗೆ ಚಿಕಿತ್ಸೆ ಮುಂದುವರೆದಿದೆ. ಒಬ್ಬ ಸೋಂಕಿತರು ಮೃತಪಟ್ಟಿದ್ದಾರೆ.