ಬೆಂಗಳೂರು(ಏ.24): ಲಾಕ್‌ಡೌನ್‌ ಸಡಿಲಗೊಳ್ಳುವುದನ್ನೇ ಕಾಯುತ್ತಿದ್ದಂತೆ ಬೆಂಗಳೂರಿಗರು ರಸ್ತೆಗಳಿಗೆ ದಾಂಗುಡಿಯಿಟ್ಟಿದ್ದು, ಗುರುವಾರ ಏಕ್‌ದಂ ಸುಮಾರು 2 ಲಕ್ಷ ವಾಹನಗಳು ರಸ್ತೆಗೆ ಇಳಿದಿದ್ದವು.

ಕಳೆದ ಒಂದು ತಿಂಗಳಿನಿಂದ ಅಗತ್ಯ ಮತ್ತು ತುರ್ತು ಸೇವೆಗೆ ಮಾತ್ರ ಅವಕಾಶವಿದ್ದುದ್ದರಿಂದ ಸಾವಿರ ಸಂಖ್ಯೆಗಳಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಆದರೆ ಗುರುವಾರದಿಂದ ಐಟಿ-ಬಿಟಿ ಉದ್ಯಮ, ಸರಕು-ಸಾಗಣೆ, ಎಪಿಎಂಸಿಗೆ ತೆರಳುವ ವಾಹನಗಳು, ಡೇಟಾ ಮತ್ತು ಕಾಲ್‌ಸೆಂಟರ್‌, ಕೊರಿಯರ್‌ ಸೇವೆ, ಎಲೆಕ್ಟ್ರಿಷಿಯನ್‌, ಪ್ಲಂಬರ್‌ಗಳು, ಮೋಟಾರ್‌ ಮೆಕ್ಯಾನಿಕ್‌ಗಳ ಕೆಲಸಕ್ಕೆ ಅವಕಾಶ ಮಾಡಿಕೊಟ್ಟಹಿನ್ನೆಲೆಯಲ್ಲಿ ಸುಮಾರು ಎರಡು ಲಕ್ಷ ವಾಹನಗಳು ರಸ್ತೆಗಳಿದ್ದಿದ್ದವು. ಬಿಸಿಲಿನ ಬೇಗೆಯ ಮಧ್ಯ ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಸಾಕಷ್ಟುಬೆವರು ಹರಿಸಿದರು.

ಜಂಕ್ಷನ್‌, ಸಿಗ್ನಲ್‌ನಲ್ಲಿ ಜಾಮ್‌:

ಒಳ ರಸ್ತೆಗಳನ್ನು ಬಂದ್‌ ಮಾಡಿರುವ ಕಾರಣ ಮುಖ್ಯರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು. ಇದರಿಂದ ಜಂಕ್ಷನ್‌, ಸಿಗ್ನಲ್‌ಗಳಲ್ಲಿ ವಾಹನ ದಟ್ಟಣೆ ಹೆಚ್ಚು ಕಂಡು ಬಂದಿತ್ತು. ಪಾಸ್‌ ಇಲ್ಲವೇ ಗುರುತಿನ ಚೀಟಿ ತಪಾಸಣೆ ಮಾಡಿ ವಾಹನ ಮುಂದೆ ಹೋಗಲು ಬಿಡುತ್ತಿದ್ದರಿಂದ ವಾಹನಗಳು ನಿಧಾನ ಗತಿಯಲ್ಲಿ ಸಂಚರಿಸಿದವು. ತೀರಾ ದಟ್ಟಣೆ ಇರುವ ರಸ್ತೆಗಳಲ್ಲಿ ಮಾತ್ರ ಎರಡು ಮಾರ್ಗದಲ್ಲಿ ಸಂಚಾರಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದರು ಎಂದು ಹಿರಿಯ ಸಂಚಾರ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಲಾಕ್‌ಡೌನ್‌ ಅದಾಗಿನಿಂದ ನಿತ್ಯ ಸರಾಸರಿ ಅಂದಾಜು 20 ಸಾವಿರ ವಾಹನಗಳ ಓಡಾಟ ಇತ್ತು. ವಿವಿಧ ಇಲಾಖೆ ಸರ್ಕಾರದ ಒಟ್ಟು ಅಂದಾಜು 10 ಸಾವಿರ ವಾಹನಗಳು ಸಂಚಾರ ಮಾಡುತ್ತಿದ್ದವು. ಗುರುವಾರ ಕಾರು, ಬೈಕ್‌ ಸೇರಿದಂತೆ ವಿವಿಧ ರೀತಿಯ ಸುಮಾರು ಎರಡು ಲಕ್ಷ ವಾಹನಗಳು ರಸ್ತೆಗೆ ಇಳಿದಿವೆ ಎಂದು ತಿಳಿದು ಬಂದಿದೆ.

ಎಲ್ಲೆಲ್ಲಿ ವಾಹನ ದಟ್ಟಣೆ:

ಸಾಫ್ಟ್‌ವೇರ್‌ ಕಂಪನಿಗಳು ಹೆಚ್ಚಿರುವ ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ, ಮಡಿವಾಳ, ಮಾರತ್ತಹಳ್ಳಿ, ಬೆಳ್ಳಂದೂರು, ವರ್ತೂರು, ಕೋರಮಂಗಲ, ಬಳ್ಳಾರಿ ರಸ್ತೆ ಸೇರಿದಂತೆ ನಗರದ ಹೊರ ವಲಯ ರಸ್ತೆಗಳಲ್ಲಿ ಭಾರೀ ವಾಹನಗಳು ಸಂಚಾರ ಮಾಡಿದ್ದು ಕಂಡು ಬಂತು.

ಹಾಗೆಯೇ ಓಕಳಿಪುರಂ, ಮಲ್ಲೇಶ್ವರಂ, ಅರಮನೆ ರಸ್ತೆಯ ಕಾವೇರಿ ಜಂಕ್ಷನ್‌, ಮೈಸೂರು ರಸ್ತೆಯ ನಾಯಂಡಹಳ್ಳಿ, ಪುರಭವನದ, ಕೆ.ಆರ್‌.ಮಾರುಕಟ್ಟೆ, ಯಶವಂತಪುರ ಈ ಭಾಗಗಳಲ್ಲಿ ಗೂಡ್ಸ್‌ ವಾಹನಗಳು, ಸರಕು ಸಾಗಣೆ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡಿದವು. ಕಾವೇರಿ ಜಂಕ್ಷನ್‌ನಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್‌ ವಾಹನಗಳು ಸಾಲುಗಟ್ಟಿನಿಂತಿದ್ದವು. ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಪರಿಣಾಮ ಕೆಲವರು ಪೊಲೀಸರನ್ನು ಶಪಿಸುತ್ತಾ ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು.

40000 ಪಾಸ್‌ ಜಪ್ತಿ

ಲಾಕ್‌ಡೌನ್‌ ಆದ ಒಂದು ತಿಂಗಳಿನಿಂದ ಗುರುವಾರದವರೆಗೆ ಅಗತ್ಯ ವಸ್ತುಗಳ ಸಾಗಾಟ, ಸರಕು ಸಾಗಣೆ ವಾಹನ, ಆಹಾರ ಸರಬರಾಜು ಮಾಡುವ ವಾಹನ ಸೇರಿದಂತೆ ನಗರದಲ್ಲಿ ಎರಡೂವರೆ ಲಕ್ಷ ಪಾಸ್‌ ವಿತರಣೆ ಮಾಡಲಾಗಿದೆ. ಈ ಪೈಕಿ ಪಾಸ್‌ ದುರುಪಯೋಗ ಮಾಡಿಸಿಕೊಂಡಿದ್ದ ಪ್ರಕರಣದಲ್ಲಿ 40 ಸಾವಿರ ಪಾಸ್‌ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ತಿಳಿಸಿದ್ದಾರೆ.

ಕೊರೋನಾ ಆತಂಕ: ಎಂತಹ ಸಂದಿಗ್ಧ ಪರಿಸ್ಥಿತಿ ಎದುರಿಸಲು ಸಜ್ಜಾಗಿ, ಡಿಸಿಎಂ

ನಗರದ ಎಲ್ಲೆಡೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡುತ್ತಿದ್ದ ಕಾರಣ ಹಾಗೂ ಪ್ರಮುಖ ರಸ್ತೆಗಳ ಸುತ್ತಮುತ್ತಲಿನ ರಸ್ತೆಗಳ ಬಂದ್‌ ಆಗಿರುವ ಕಾರಣ ವಾಹನ ದಟ್ಟಣೆ ಉಂಟಾಗಿತ್ತು. ತಪಾಸಣೆ ಬಳಿಕ ವಾಹನ ದಟ್ಟಣೆ ನಿಯಂತ್ರಣಕ್ಕೆ ಬಂದಿದ್ದು, ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್‌ ತಿಳಿಸಿದ್ದಾರೆ.

40ಕ್ಕೂ ಹೆಚ್ಚು ಮಂದಿ ಸಂಚಾರ; ಪೊಲೀಸರಿಂದ ಎಚ್ಚರಿಕೆ!

ಐಟಿ-ಬಿಟಿಯ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಕೆಲವು ಕಂಪನಿ ಬಸ್‌ಗಳಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅಧಿಕ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದರು. ಈ ಬಸ್‌ಗಳ ಪರಿಶೀಲನೆ ವೇಳೆ ಪೊಲೀಸರು ಎಚ್ಚರಿಕೆ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವರಿಕೆ ಮಾಡಿ ಕಳುಹಿಸಲಾಯಿತು. ಇಬ್ಬರು ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಿದ್ದರೆ, ಅಂತಹವರನ್ನು ಇಳಿಸಿ ಕೊರೋನಾ ಸೋಂಕಿನ ಬಗ್ಗೆ ಅರಿವು ಮೂಡಿಸಿ ಕಳುಹಿಸಲಾಯಿತು ಎಂದು ಸಂಚಾರ ಪೊಲೀಸರು ತಿಳಿಸಿದರು.

ಕಾರ್ಮಿಕರಲ್ಲೂ ಪಾಸ್‌ ಕೇಳಿದ ಪೊಲೀಸರು

ಇನ್ನು ಕಾರ್ಪೆಂಟರ್‌, ಮೆಕ್ಯಾನಿಕ್‌, ಕಟ್ಟಡ ಕಾರ್ಮಿಕರು ದೂರದ ಸ್ಥಳದಲ್ಲಿ ಕೆಲಸ ಮಾಡಲು ಹೊರಟಾಗ ಪೊಲೀಸರು ಅವರನ್ನು ತಡೆದು ಪಾಸ್‌ ಕೇಳುತ್ತಿದ್ದರು. ಇದರಿಂದ ಕಿರಿ-ಕಿರಿ ಅನುಭವಿಸಿದ ಕೂಲಿ ಕಾರ್ಮಿಕರು ಸರ್ಕಾರ ಹಾಗೂ ಪೊಲೀಸರನ್ನು ಶಪಿಸುತ್ತಾ ವಾಪಸ್‌ ಹೋದರು.

ತಬ್ಲೀಘಿಗಳಿಗೆ ರಕ್ಷಣೆ ನೀಡಿದ ಆರೋಪ: ಶಾಸಕ ಜಮೀರ್‌ ವಿರುದ್ಧ ದೂರು

ಸರ್ಕಾರದ ನಿಯಮದ ಬಗ್ಗೆ ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ್ದು ಕೂಡ ಕಂಡು ಬಂತು. ಸರ್ಕಾರ ನಮಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಪೊಲೀಸರು ಪಾಸ್‌ ತೋರಿಸಿ ಎಂದರೆ ಹೇಗೆ? ಸರಿಯಾದ ನಿಯಮ ರೂಪಿಸಿ ಪೊಲೀಸರಿಗೆ ಮನವರಿಕೆ ಮಾಡಿ ಕೊಡಬೇಕು. ಒಂದು ತಿಂಗಳು ಕೆಲಸ ಇಲ್ಲದೆ, ಜೀವನ ನಿರ್ವಹಣೆ ಕಷ್ಟವಾಗಿತ್ತು. ಇದೀಗ ಅವಕಾಶ ಮಾಡಿಕೊಟ್ಟರೂ ಪ್ರಯೋಜನ ಇಲ್ಲ. ಕೂಡಲೇ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ದಾಸರಹಳ್ಳಿ ನಿವಾಸಿ ಕಟ್ಟಡ ಕಾರ್ಮಿಕ ಅರುಣ್‌ ‘ಕನ್ನಡಪ್ರಭ’ದ ಬಳಿ ಅಳಲು ತೋಡಿಕೊಂಡರು.