ಕೋಲಾರ [ಜ.14]:  ದಕ್ಷಿಣ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಶಂಕಿತ ಉಗ್ರರಿಗಾಗಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆ ಈಗ ಕೋಲಾರಕ್ಕೂ ವಿಸ್ತರಣೆಯಾಗಿದೆ. ಐಸಿಸ್‌ ಜತೆ ನಂಟು ಹೊಂದಿದ್ದರೆನ್ನಲಾದ ಶಂಕಿತ ಉಗ್ರರ ಜತೆಗೆ ನಂಟು ಹೊಂದಿದ್ದ ಆರೋಪದ ಮೇರೆಗೆ ಕೋಲಾರದ ಇಬ್ಬರನ್ನು ಚೆನ್ನೈನ ಕ್ಯೂ ಬ್ರಾಂಚ್‌ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಇಬ್ಬರು ಶಂಕಿತ ಉಗ್ರರ ಜತೆಗೆ ವಿದೇಶಕ್ಕೆ ಪಲಾಯನ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಬಂಧಿತರನ್ನು ನಗರದ ಪ್ರಶಾಂತ್‌ ನಗರದ ಮೊಹಮದ್‌ ಜಹೀದ್‌ (24), ಬೀಡಿ ಕಾಲೊನಿ ನಿವಾಸಿ ಇಮ್ರಾನ್‌ ಖಾನ್‌ (42) ಎಂದು ಗುರುತಿಸಲಾಗಿದೆ. ಇವರಲ್ಲಿ ಜಹೀದ್‌ ಎಂಜಿನಿಯರಿಂಗ್‌ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಮನೆಯಲ್ಲೇ ಇದ್ದು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಎಂದು ಹೇಳಲಾಗಿದ್ದು, ಇಮ್ರಾನ್‌ ಖಾನ್‌ ಬೆಂಗಳೂರಲ್ಲಿ ವ್ಯಾಪಾರ-ವ್ಯವಹಾರ ಮಾಡಿಕೊಂಡಿದ್ದ ಎಂಬ ಮಾಹಿತಿ ಇದೆ. ಇವರಿಬ್ಬರೂ ಕೋಲಾರದವರಾಗಿದ್ದರೂ ಹೆಚ್ಚಾಗಿ ಬೆಂಗಳೂರಿನಲ್ಲೇ ಇರುತ್ತಿದ್ದರು.

ಸದ್ಯ ಪೊಲೀಸರಿಂದ ತಪ್ಪಿಸಿಕೊಂಡಿರುವ ದಕ್ಷಿಣ ಭಾರತದ ಐಸಿಸ್‌ ಜಿಹಾದಿ ಗ್ಯಾಂಗ್‌ನ ಕಮಾಂಡರ್‌, ಕರ್ನಾಟಕದಲ್ಲಿ ಐಸಿಸ್‌ ಸಂಘಟನೆಯಲ್ಲಿ ತೊಡಗಿದ್ದಾನೆ ಎನ್ನಲಾಗಿರುವ ಶಂಕಿತ ಉಗ್ರ ಮೆಹಬೂಬ್‌ ಪಾಷಾ ಕೋಲಾರದಲ್ಲಿ ಐದು ದಿನಗಳ ಕಾಲ ಉಳಿದುಕೊಂಡಿದ್ದ. ಜಹೀದ್‌ ಹಾಗೂ ಇಮ್ರಾನ್‌ ಈತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಇಂಟರ್ನೆಟ್‌ ಮತ್ತು ಕೆಲ ನಿರ್ದಿಷ್ಟಆ್ಯಪ್‌ಗಳ ಮೂಲಕ ಮೆಹಬೂಬ್‌ ಕೇಳಿದ್ದ ಕೆಲ ತಾಂತ್ರಿಕ ಸಹಕಾರವನ್ನು ಇವರು ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ.

ಶೀಲ ಶಂಕಿಸಿದ ಪ್ರಿಯತಮ: ಸುಳ್ಳೆಂದು ಪ್ರೂವ್ ಮಾಡಲು ಹೋದ ಪ್ರಿಯತಮೆ....

ವಿದೇಶಕ್ಕೆ ತೆರಳುವ ಪ್ಲ್ಯಾನ್‌?: ಜಹೀದ್‌ ಮತ್ತು ಇಮ್ರಾನ್‌ ಸೇರಿದಂತೆ ಒಟ್ಟು 12 ಮಂದಿಯ ತಂಡವೊಂದು ವಿದೇಶಕ್ಕೆ ಹಾರಲು ಸಿದ್ಥತೆ ನಡೆಸಿತ್ತು. ಈ ಸಂಬಂಧ ಬೆಂಗಳೂರಿನಲ್ಲಿದ್ದುಕೊಂಡು ನಕಲಿ ದಾಖಲೆಗಳನ್ನೂ ಸೃಷ್ಟಿಸಿಕೊಂಡಿತ್ತು. ಅಷ್ಟರಲ್ಲೇ, ತಮಿಳುನಾಡಿನಲ್ಲಿ ಕೆಲ ಸಮಯದ ಹಿಂದೆ ನಡೆದಿದ್ದ ಹಿಂದೂ ಮುಖಂಡನ ಹತ್ಯೆ ಮತ್ತು ಎಸ್ಸೈವೊಬ್ಬರ ಹತ್ಯೆಯ ಜಾಡುಹಿಡಿದು ಹೊರಟಿದ್ದ ಚೆನ್ನೈನ ಕ್ಯೂಬ್ರ್ಯಾಂಚ್‌ ಪೊಲೀಸರು ಬೆಂಗಳೂರು ಸಿಸಿಬಿ ಪೊಲೀಸರ ನೆರವಿನೊಂದಿಗೆ ಈ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೋಲಾರ ಮೂಲದ ಇಬ್ಬರು ಯುವಕರನ್ನು ಶಂಕಿತ ಉಗ್ರರ ಜತೆಗಿನ ನಂಟಿನ ಆಧಾರದ ಮೇಲೆ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಸ್ಥಳೀಯ ಪೊಲೀಸರಿಗೂ ಇರಲಿಲ್ಲ. ಶಂಕಿತ ಉಗ್ರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರವೇ ಈ ಸುದ್ದಿ ಬೆಳಕಿಗೆ ಬಂದಿದೆ.