ಮುಂಗಾರು ಪೂರ್ವ ಮಳೆ: ರಾಮನಗರ ಜಿಲ್ಲೆಯಲ್ಲಿ 2 ಡ್ಯಾಂ ಭರ್ತಿ, 2 ಡ್ಯಾಂ ಖಾಲಿ..!
ಮಾಗಡಿಯ ಮಂಚನಬೆಲೆ ಜಲಾಶಯ, ವೈ.ಜಿ.ಗುಡ್ಡ ಹಾಗೂ ಕನಕಪುರ ತಾಲೂಕಿನ ಹಾರೋಬೆಲೆ ಜಲಾಶಯಗಳು ಮೈದುಂಬುತ್ತಿವೆ. ಚನ್ನಪಟ್ಟಣದ ಕಣ್ವ ಜಲಾಶಯ ಮತ್ತು ಇಗ್ಗಲೂರಿನ ಬ್ಯಾರೇಜ್ ನೀರಿಲ್ಲದೆ ಬತ್ತಿ ಹೋಗುತ್ತಿದೆ.
ಎಂ.ಅಫ್ರೋಜ್ ಖಾನ್
ರಾಮನಗರ(ಮೇ.24): ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 2 ಜಲಾಶಯಗಳು ಮಾತ್ರ ಭರ್ತಿಯಾಗಿದ್ದರೆ, ಉಳಿದ 2 ಜಲಾಶಯಗಳು ಡೆಡ್ ಸ್ಟೋರೇಜ್ ತಲುಪಿವೆ. ಮಾಗಡಿಯ ಮಂಚನಬೆಲೆ ಜಲಾಶಯ, ವೈ.ಜಿ.ಗುಡ್ಡ ಹಾಗೂ ಕನಕಪುರ ತಾಲೂಕಿನ ಹಾರೋಬೆಲೆ ಜಲಾಶಯಗಳು ಮೈದುಂಬುತ್ತಿವೆ. ಚನ್ನಪಟ್ಟಣದ ಕಣ್ವ ಜಲಾಶಯ ಮತ್ತು ಇಗ್ಗಲೂರಿನ ಬ್ಯಾರೇಜ್ ನೀರಿಲ್ಲದೆ ಬತ್ತಿ ಹೋಗುತ್ತಿದೆ.
ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಕಟ್ಟೆಗಳ ಜೊತೆಗೆ ಮಂಚನಬೆಲೆ, ಹಾರೋಬೆಲೆ ಜಲಾಶಯಗಳು ಭರ್ತಿಯಾಗಿ ಜೀವ ಕಳೆ ಪಡೆದುಕೊಂಡಿವೆ. ಅಷ್ಟೇ ಅಲ್ಲ ಇಲ್ಲಿ ನೀರಿಲ್ಲದೆ ಬತ್ತಿ ಹೋಗಿದ್ದ ನದಿಗಳಲ್ಲೂ ನೀರು ಹರಿಯುತ್ತಿದೆ. ಇದು ರೈತಾಪಿ ವರ್ಗದಲ್ಲಿ ಹರ್ಷದ ಹೊನಲನ್ನು ತರಿಸಿದೆ. ಆದರೆ, ಕಣ್ವ ಮತ್ತು ಇಗ್ಗಲೂರಿನ ಬ್ಯಾರೇಜ್ ಡೆಡ್ ಸ್ಟೋರೇಜ್ ತಲುಪುತ್ತಿರುವುದು , ಈ ಭಾಗದ ರೈತರಲ್ಲಿ ಆತಂಕ ಹೆಚ್ಚಿಸಿದೆ.
ಚಿಕ್ಕಮಗಳೂರಿನಲ್ಲಿ ವರುಣದೇವನ ಕೃಪೆ: ಬಯಲುಸೀಮೆ, ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆ
ಈ ನಾಲ್ಕು ಜಲಾಶಯಗಳು ಜಿಲ್ಲೆಯಲ್ಲಿನ ಬರಗಾಲವನ್ನು ಸಾಕಷ್ಟು ತಡೆದಿದೆ. ಕುಡಿಯುವ ನೀರಿನೊಂದಿಗೆ ಕೃಷಿಗೂ ಸಹ ಈ ಜಲಾಶಯಗಳೇ ಆಧಾರ. ಉತ್ತಮ ಮಳೆಯಾದಲ್ಲಿ ಕಣ್ವ ಮತ್ತು ಇಗ್ಗಲೂರು ಜಲಾಶಯಗಳೂ ಮೈದುಂಬಿಕೊಳ್ಳುವ ನಿರೀಕ್ಷೆಗಳಿವೆ.
ನದಿ ಪಾತ್ರದ ಜನರಿಗೆ ಎಚ್ಚರಿಕೆ :
ಮಂಚನಬೆಲೆ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಅರ್ಕಾವತಿ ನದಿಗೆ ನೀರು ಹರಿಸುವ ಎಚ್ಚರಿಕೆ ನೀಡಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನದಿ ಪಾತ್ರದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ನದಿಗೆ ಬಿಡಲು ತೀರ್ಮಾನಿಸಲಾಗಿದೆ. ಮಂಚನಬೆಲೆ ಜಲಾಶದಿಂದ ಅರ್ಕಾವತಿ ನದಿಯಲ್ಲಿ ಹರಿಯುವ ನೀರು ಹಾರೋಬೆಲೆ ಜಲಾಶಯ ಸೇರಲಿದ್ದು, ಅಲ್ಲಿಂದ ಕಾವೇರಿ ನದಿಗೆ ಹರಿಸಲಾಗುತ್ತದೆ. ಜಲಾಶಯದ ಕೆಳಗಿನ ನದಿ ಪಾತ್ರದ ಜನರು ತಮ್ಮ ಜಾನುವಾರುಗಳನ್ನು ನದಿ ಪಾತ್ರದಲ್ಲಿ ಬಿಡುವುದಾಗಲಿ, ನದಿ ದಾಟುವುದಾಗಲಿ ಮಾಡಬಾರದೆಂದು ಎಚ್ಚರಿಕೆ ನೀಡಿದ್ದಾರೆ.
ರಾಮನಗರ ಜಿಲ್ಲಾದ್ಯಂತ ಪೂರ್ವ ಮುಂಗಾರು ಮಳೆ ಉತ್ತಮವಾಗಿದ್ದು, ಮಾರ್ಚ್ 1ರಿಂದ ಮೇ 23ರವರೆಗೆ ವಾಡಿಕೆ 137 ಮಿ.ಮೀ. ಪೈಕಿ 134 ಮಿ.ಮೀನಷ್ಟು ಮಳೆ ಆಗಿದ್ದು, ಶೇಕಡ 2ರಷ್ಟು ಮಳೆ ಕೊರತೆ ಉಂಟಾಗಿದೆ. ರಾಮನಗರ ತಾಲೂಕಿನಲ್ಲಿ ಅತಿ ಹೆಚ್ಚಿನ ಮಳೆಯಾಗಿದ್ದು, 143 ಮಿ.ಮೀ ವಾಡಿಕೆ ಮಳೆಯಲ್ಲಿ 161 ಮಿ.ಮೀ ಮಳೆಯಾಗಿದ್ದು (ಶೇ.13ರಷ್ಟು ಅಧಿಕ), ಕನಕಪುರ ತಾಲೂಕಿನಲ್ಲಿ ಅತಿ ಕಡಿಮೆ 146.2 ಮಿ.ಮೀ ವಾಡಿಕೆ ಪೈಕಿ 120.2 ಮಿ.ಮೀ ಮಳೆ ಆಗಿ ಶೇಕಡ 18ರಷ್ಟು ಕೊರತೆಯಾಗಿದೆ. ಚನ್ನಪಟ್ಟಣ ತಾಲೂಕಿನ 144 ಮಿ.ಮೀ ಪೈಕಿ 147.8 ಮಿ.ಮೀ ಹಾಗೂ ಮಾಗಡಿ ತಾಲೂಕಿನಲ್ಲಿ 157.4 ಮಿ.ಮೀ ಪೈಕಿ 147.2 ಮಿ.ಮೀ. ಮಳೆ ಸುರಿದಿದೆ.
ಖಾಲಿಯಾಗುತ್ತಿರುವ ಜಲಾಶಯಗಳು:
1. ಕಣ್ವ ಜಲಾಶಯ :
ಚನ್ನಪಟ್ಟಣ ತಾಲೂಕಿನ ಕನ್ನಮಂಗಲದ ಬಳಿ ಇರುವ ಕಣ್ವ ಜಲಾಶಯದ ಮಟ್ಟ 32.9 ಅಡಿಗಳಿಷ್ಟಿದೆ. 15 ದಿನಗಳ ಹಿಂದೆ 22 ಅಡಿಯಷ್ಟು ನೀರಿತ್ತು. ಈಗ 20.8 ಅಡಿಗೆ ಇಳಿದಿದ್ದು, ಸದ್ಯಕ್ಕೆ 0.35 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು ನಿಂತಿದ್ದು, ಹೊರ ಹರಿವನ್ನು ಸ್ಥಗಿತಗೊಳಿಸಲಾಗಿದೆ. 14.5 ಅಡಿಗೆ ಕುಸಿದರೆ ಡೆಡ್ ಸ್ಟೋರೇಜ್ ತಲುಪಲಿದೆ.
2.ಇಗ್ಗಲೂರು ಬ್ಯಾರೇಜ್ :
ಇಗ್ಗಲೂರು ಬ್ಯಾರೇಜ್ ನಲ್ಲಿ ಒಟ್ಟು ಶೇಖರಣಾ ಸಾಮಥ್ರ್ಯ 5.15 ದಶಲಕ್ಷಘನ ಮೀಟರ್ ಇದ್ದು, ಉಪಯುಕ್ತ ಶೇಖರಣಾ ಸಾಮಾಥ್ರ್ಯ 3.02 ದಶಲಕ್ಷ ಘನ ಮೀಟರ್ ಇದೆ. ನಿರುಪಯುಕ್ತ ನೀರಿನ ಶೇಖರಣಾ ಸಾಮಾಥ್ರ್ಯ 2.13 ದಶ ಲಕ್ಷ ಘನ ಮೀಟರ್. ಸದ್ಯಕ್ಕೆ ಜಲಾಶಯದ ನೀರಿನ ಮಟ್ಟ 5.6 ಅಡಿಗಳಿಷ್ಟಿದ್ದು, ಈಗಾಗಲೇ ಡೆಡ್ ಸ್ಟೋರೇಜ್ ತಲುಪಿದೆ. ಒಳ ಮತ್ತು ಹೊರ ಹರಿವು ಸ್ಥಗಿತಗೊಂಡಿದೆ.
ಕರ್ನಾಟಕದ 8 ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಳೆ: ಉಡುಪಿಯಲ್ಲಿ ಸಿಡಿಲು ಬಡಿದು ಯುವಕ ಸಾವು
ಭರ್ತಿಯತ್ತ ಜಲಾಶಯಗಳು ....
1.ಹಾರೋಬೆಲೆ ಜಲಾಶಯ :
ಕನಕಪುರ ತಾಲೂಕಿನ ಹಾರೋಬೆಲೆ ಜಲಾಶಯದಲ್ಲಿ ಒಟ್ಟು 18.9 ಅಡಿ ಎತ್ತರದಷ್ಟು ನೀರು ಹಿಡಿಯಲಿದ್ದು, ಒಟ್ಟು ಸಂಗ್ರಹ ಸಾಮರ್ಥ್ಯ 1.579 ಟಿಎಂಸಿಗಳಾಗಿದೆ. ಈಗ 18.3 ಅಡಿ ಎತ್ತರದಷ್ಟು ಅಂದರೆ 1.56 ಟಿಎಂಸಿ ನೀರು ಶೇಖರಣೆ ಸಾಮರ್ಥ್ಯ ಹೊಂದಿದೆ. ಒಳ ಹರಿವು 528 ಕ್ಯುಸೆಕ್ ಇದ್ದು, ಹೊರ ಹರಿವು 74 ಕ್ಯುಸೆಕ್ ನೀರನ್ನು ನಾಲೆಗಳಿಗೆ ಹರಿಸಲಾಗುತ್ತಿದೆ. ಈಗ ಉತ್ತಮ ಮಳೆಯಾದ ಕಾರಣ ಬೇಗನೆ ಭರ್ತಿಯಾಗಿದೆ.
2.ಮಂಚನಬೆಲೆ ಜಲಾಶಯ:
ಮಾಗಡಿಯ ಮಂಚನಬೆಲೆ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಸುಮಾರು 365 ಹೆಕ್ಟೇರ್ ನಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಜಲಾಶಯ 1.037 ಟಿಎಂಸಿ ನೀರನ್ನು ಶೇಖರಿಸಿಕೊಳ್ಳಲಿದ್ದು, ಸದ್ಯಕ್ಕೆ 1.01 ಟಿಎಂಸಿನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 100 ಕ್ಯುಸೆಕ್ ಒಳ ಹರಿವಿದ್ದು, 150 ಕ್ಯುಸೆಕ್ ಹೊರ ಹರಿವಿದೆ. ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆ ಮಳೆಯಾಗುತ್ತಿರುವ ಕಾರಣ ಅಧಿಕ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಒಳ ಹರಿವು ಹೆಚ್ಚಾದಲ್ಲಿ ಅರ್ಕಾವತಿ ನದಿಗೆ ಹೆಚ್ಚುವರಿ ನೀರು ಹರಿಸಲು ಉದ್ದೇಶಿಸಲಾಗಿದೆ.