ಮಂಗಳೂರು(ಏ.24): ದ.ಕ. ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಆರಂಭವಾಗಿದ್ದು, ಇದರ ಸೋಂಕಿಗೆ ಇದೀಗ ಇಬ್ಬರು ಬಲಿಯಾಗಿದ್ದಾರೆ. ಇತ್ತೀಚೆಗೆ ಕೊರೋನಾ ಸೋಂಕಿನಿಂದ ಮೃತಪಟ್ಟಮಹಿಳೆಯ ಅತ್ತೆಯೂ ಅದೇ ಸೋಂಕಿಗೆ ಮೃತಪಟ್ಟಿದ್ದಾರೆ. ಈ ಮಧ್ಯೆ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿರುವ ಸಾವಿಗೀಡಾದವರ ಸಮೀಪದ ಮಹಿಳೆಯೊಬ್ಬರ ಆರೋಗ್ಯ ಗಂಭೀರವಾಗಿದೆ. ಅವರಿಗೆ ಐಸಿಯುನಲ್ಲಿ ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಮೃತ ಮಹಿಳೆಯ ಅತ್ತೆಯನ್ನು (70 ವರ್ಷ) ಬುಧವಾರ ಮಂಗಳೂರಿನ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ವೃದ್ಧೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತದ ಬುಲೆಟಿನ್‌ ಸ್ಪಷ್ಟಪಡಿಸಿದೆ. ಇದರೊಂದಿಗೆ ಕೊರೋನಾ ಸೋಂಕಿಗೆ ಒಂದೇ ಮನೆಯ ಅತ್ತೆ ಮತ್ತು ಸೊಸೆ ಜೀವ ತೆರುವಂತಾಗಿದೆ.

14 ಜಿಲ್ಲೇಲಿ ಲಾಕ್‌ಡೌನ್‌ ಸಡಿಲ: ಜನಸಂಚಾರ ಹಠಾತ್‌ ಹೆಚ್ಚಳ

ಮತ್ತೆ 8 ಕೇಸ್‌ ವೆನ್ಲಾಕ್‌ಗೆ: ಉಸಿರಾಟದ ತೊಂದರೆ ಇರುವ 14 ಪ್ರಕರಣಗಳ ಪೈಕಿ 8 ಮಂದಿಯನ್ನು ಗುರುವಾರ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಸಕ್ತ 39 ಮಂದಿ ನಿಗಾ ಘಟಕದಲ್ಲಿ ಇದ್ದಾರೆ. ಒಂದೇ ದಿನ 65 ಮಂದಿಯ ಸ್ಕ್ರೀನಿಂಗ್‌ ನಡೆಸಲಾಗಿದ್ದು, 50 ಮಂದಿ ದಾಖಲಾಗಿರುವ ಎನ್‌ಐಟಿಕೆ ಕೇಂದ್ರದಲ್ಲಿ ಮತ್ತೆ ಓರ್ವರನ್ನು ಕ್ವಾರಂಟೈನ್‌ ಮಾಡಲಾಗಿದೆ.

ಶುಲ್ಕ ಪಾವತಿಗೆ ಖಾಸಗಿ ಶಾಲೆಗಳಿಗೆ ಅನುಮತಿ

ಇಎಸ್‌ಐ ಆಸ್ಪತ್ರೆಯಲ್ಲಿ 10 ಕ್ವಾರಂಟೈನ್‌ ಆಗಿದ್ದಾರೆ. ಪ್ರಸ್ತುತ 95 ಮಂದಿಯ ಸ್ಯಾಂಪಲ್‌ನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. 376 ಮಂದಿಯ ಲ್ಯಾಬ್‌ ವರದಿಗೆ ಕಾಯಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಆಶಾ ಹಾಗೂ ಎಂಪಿಡಬ್ಲು ಕಾರ್ಯಕರ್ತೆಯರು 2,10,345 ಮನೆಗಳಲ್ಲಿ ಐಎಲ್‌ಐ ಸಮೀಕ್ಷೆ ನಡೆಸಿ ಉಪಯುಕ್ತ ಮಾಹಿತಿ ಕಲೆಹಾಕಿದ್ದಾರೆ ಎಂದು ಬುಲೆಟಿನ್‌ ತಿಳಿಸಿದೆ.

ಒಟ್ಟು ಸೋಂಕಿತರು-17

ಗುಣಮುಖರಾದವರು-12

ಚಿಕಿತ್ಸೆ ಪಡೆಯುತ್ತಿರುವವರು-3

ಸಾವಿನ ಸಂಖ್ಯೆ-2