ಬೆಂಗಳೂರು :  ಬಿಬಿಎಂಪಿಯ ಕಾವೇರಿಪುರ ಮತ್ತು ಸಗಾಯಪುರ ವಾರ್ಡ್‌ಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಬುಧವಾರ (ಮೇ 29) ಬೆಳಗ್ಗೆ 7ರಿಂದ ಸಂಜೆ 6 ವರೆಗೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ.

ಬಿಬಿಎಂಪಿ ಸದಸ್ಯರ ಅಕಾಲಿಕ ಮರಣದಿಂದ ತೆರವಾಗಿದ್ದ ಸಗಾಯಿಪುರ ವಾರ್ಡ್‌ನಲ್ಲಿ ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿ ಸೇರಿದಂತೆ 11 ಮಂದಿ ಪಕ್ಷೇತರರು ಹಾಗೂ ಕಾವೇರಿಪುರ ವಾರ್ಡ್‌ನಲ್ಲಿ ಬಿಜೆಪಿ, ಜೆಡಿಎಸ್‌ ಹಾಗೂ ಇಬ್ಬರು ಪಕ್ಷೇತರರು ಚುನಾವಣೆ ಕಣದಲ್ಲಿದ್ದಾರೆ.

ಸಗಾಯಪುರ ವಾರ್ಡ್‌ ಸಾಮಾನ್ಯ ಹಾಗೂ ಕಾವೇರಿಪುರ ವಾರ್ಡ್‌ ಹಿಂದುಳಿದ ವರ್ಗ-ಎ ಮಹಿಳೆಗೆ ಮೀಸಲಾಗಿದೆ. ಕಾವೇರಿಪುರ ವಾರ್ಡ್‌ನಲ್ಲಿ 49,238, ಸಗಾಯಪುರ ವಾರ್ಡ್‌ನಲ್ಲಿ 31,928 ಮತದಾರರಿದ್ದಾರೆ. ಲೋಕಸಭಾ ಚುನಾವಣೆಗೆ ಬಳಕೆ ಮಾಡಿದ ಮತದಾರ ಪಟ್ಟಿಯನ್ನೇ ಉಪಚುನಾವಣೆಗೆ ಬಳಕೆ ಮಾಡಲಾಗುತ್ತಿದ್ದು, ಹೊಸದಾಗಿ ಮತದಾರರನ್ನು ಸೇರಿಸಿಲ್ಲ. ಮತದಾರರಿಗೆ ಎಡಗೈನ ಉಂಗುರದ ಬೆರಳಿಗೆ ಶಾಹಿ ಹಾಕಲಾಗುತ್ತದೆ.

74 ಮತಗಟ್ಟೆಗೆ 356 ಸಿಬ್ಬಂದಿ ನೇಮಕ

ಸಗಾಯಪುರ ವಾರ್ಡ್‌ನಲ್ಲಿ 31 ಮತಗಟ್ಟೆ, ಕಾವೇರಿಪುರ ವಾರ್ಡ್‌ನಲ್ಲಿ 43 ಮತಗಟ್ಟೆಸೇರಿ ಒಟ್ಟು 74 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಪ್ರತಿ ಮತಗಟ್ಟೆಗೆ ಒಬ್ಬ ಅಧೀಕ್ಷಕ ಮತಗಟ್ಟೆಅಧಿಕಾರಿ, ಮೂವರು ಮತಗಟ್ಟೆಸಿಬ್ಬಂದಿ, ಶೇ.20ರಷ್ಟುಹೆಚ್ಚುವರಿ ಸಿಬ್ಬಂದಿ ಸೇರಿ 74 ಮತಗಟ್ಟೆಗಳ ಕಾರ್ಯ ನಿರ್ವಹಣೆಗೆ 356 ಸಿಬ್ಬಂದಿ ನಿಯೋಜಿಸಲಾಗಿದೆ.

ವಿವಿ ಪ್ಯಾಟ್‌ ಬಳಕೆ ಇಲ್ಲ : ವಾರ್ಡ್‌ಗಳ ಉಪಚುನಾವಣೆಗೆ ವಿದ್ಯುನ್ಮಾನ ಮತಯಂತ್ರ(ಇವಿಎಂ) ಮಾತ್ರ ಬಳಕೆ ಮಾಡಲಾಗುತ್ತಿದೆ. ರಾಜ್ಯ ಚುನಾವಣಾ ಆಯೋಗದ ಆದೇಶದ ಮೇರೆಗೆ ವಿವಿ ಪ್ಯಾಟ್‌ ಬಳಕೆ ಕೈಬಿಡಲಾಗಿದೆ.

ಮೇ 31ಕ್ಕೆ ಮತ ಎಣಿಕೆ :  ಎರಡೂ ವಾರ್ಡ್‌ನ ಮತ ಎಣಿಕೆ ಮೇ 31ರಂದು ನಡೆಯಲಿದೆ. ಎರಡೂ ವಾರ್ಡ್‌ಗಳಿಗೂ ಪ್ರತ್ಯೇಕ ಮತ ಎಣಿಕೆ ಕೇಂದ್ರಗಳನ್ನು ನಿಗದಿ ಮಾಡಲಾಗಿದ್ದು, ಸಗಾಯಪುರ ವಾರ್ಡ್‌ನ ಮತ ಎಣಿಕೆ ಫ್ರೇಜರ್‌ಟೌನ್‌ನ ಬಿಬಿಎಂಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ, ಕಾವೇರಿಪುರ ವಾರ್ಡ್‌ನ ಮತ ಎಣಿಕೆ ವಿಜಯನಗರದ ಸರ್ವೋದಯ ನ್ಯಾಷನಲ್‌ ಪಬ್ಲಿಕ್‌ ಶಾಲೆಯಲ್ಲಿ ನಡೆಯಲಿದೆ.