ಬೆಂಗಳೂರು(ಜ.08): ಮಿಂಚಿನ ನೋಂದಣಿ ಅಭಿಯಾನದ ಮೊದಲ ದಿನವಾದ ಸೋಮವಾರ (ಜ.6) ನಗರದ 2,218 ಮಂದಿ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ. 

ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜ.6ರಿಂದ 8ರ ವರೆಗೆ 3 ದಿನ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜ.6ರ ಮೊದಲ ದಿನದ ಅಭಿಯಾನದಲ್ಲಿ 2,218 ಮಂದಿ ಮತದಾರರು ತಮ್ಮ ಹೆಸರನ್ನು ಮತದಾರ ಪಟ್ಟಿಗೆ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿಶೇಷವಾಗಿ ಯುವ ಮತದಾರರು ಮತದಾರ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಳ್ಳುವುದಕ್ಕಾಗಿ 3 ದಿನದ ಮಿಂಚಿನ ನೋಂದಣಿ ಹಮ್ಮಿಕೊಳ್ಳಲಾಗಿದೆ. 2020ರ ಜನವರಿ 1ಕ್ಕೆ 18 ವರ್ಷ ತುಂಬುವ ಯುವ ಮತದಾರರು ಹೆಸರನ್ನು ಮತದಾರಪಟ್ಟಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಬೆಂಗಳೂರು ಜಿಲ್ಲೆಯ ವ್ಯಾಪ್ತಿಯ 8,514 ಮತಗಟ್ಟೆ, 198 ವಾರ್ಡ್‌ ಕಚೇರಿ, ಬೆಂಗಳೂರು ಒನ್‌ ಹಾಗೂ ಕರ್ನಾಟಕ ಒನ್‌ ಕಚೇರಿಗಳಲ್ಲಿ ವೋಟ​ರ್‍ಸ್ ಹೆಲ್ಪ್‌ ಲೈನ್‌ ಆ್ಯಪ್‌ ಹಾಗೂ ಎನ್‌ವಿಎಸ್‌ಪಿ ವೆಬ್‌ಸೈಟ್‌ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಮಿಂಚಿನ ನೋಂದಣಿ ಕುರಿತು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಹೊಸದಾಗಿ ಮತದಾರ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಳ್ಳುವ ಯುವಕರು ಜನನ ಪ್ರಮಾಣ ಪತ್ರ, ಭಾವಚಿತ್ರ ಹಾಗೂ ವಿಳಾಸದ ದಾಖಲಾತಿ ನೀಡಬೇಕು. ಈಗಾಗಲೇ ಹೆಸರು ಸೇರ್ಪಡೆಗೊಂಡಿರುವ ಮತದಾರರು ತಿದ್ದುಪಡಿ ಹಾಗೂ ವರ್ಗಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ದಾಖಲಾತಿ ಸಲ್ಲಿಸಬೇಕು ಎಂದು ತಿಳಿಸಿದರು.

ಕರಡು ಮತದಾರ ಪಟ್ಟಿ ಪ್ರಕಟ

ಕಳೆದ ಡಿ.16 ರಂದು ಚುನಾವಣಾ ಆಯೋಗ ಕರಡು ಮತದಾರ ಪಟ್ಟಿಪ್ರಕಟಿಸಿದೆ. ಆ ಪ್ರಕಾರ ನಗರದಲ್ಲಿ ಒಟ್ಟು 91,38,647 ಮತದಾರರಿದ್ದಾರೆ. ಆ ಪೈಕಿ 47,61,677 ಪುರುಷ, 43,76,970 ಮಹಿಳೆ ಮತದಾರರು ಇದ್ದಾರೆ ಎಂದು ತಿಳಿದು ಬಂದಿದೆ. ಕರಡು ಮತದಾರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ಹಾಗೂ ಹೆಸರು, ವಿಳಾಸ, ಜನ್ಮದಿನಾಂಕ ಹಾಗೂ ಇತರೆ ಮಾಹಿತಿಯಲ್ಲಿ ಲೋಪದೋಷ ಸರಿಪಡಿಸಿಕೊಳ್ಳುವುದಕ್ಕೆ ಜ.15ರ ವರೆಗೆ ಕಾಲಾವಕಾಶ ನೀಡಲಾಗಿದೆ. ಕರಡು ಮತದಾರ ಪಟ್ಟಿಪರಿಶೀಲನೆ ಮಾಡಿಕೊಂಡು ಸರಿಪಡಿಸಿ ಕೊಳ್ಳಬಹುದಾಗಿದೆ ಎಂದು ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದರು.

ಮಿಂಚಿನ ನೋಂದಣಿಯಡಿ ಜ.6 ಅರ್ಜಿ ವಿವರ

ನಗರ ಜಿಲ್ಲೆ 18ರ ವಯೋಮಿತಿ 19 ವಯೋಮಿತಿ 20 ಹಾಗೂ ಅದಕ್ಕಿಂತ ಹೆಚ್ಚಿನ ವಯೋಮಿತಿವರು ಒಟ್ಟು

ಬೆಂಗಳೂರು ಕೇಂದ್ರ 204 122 185 511
ಬೆಂಗಳೂರು ಉತ್ತರ 96 116 455 667
ಬೆಂಗಳೂರು ದಕ್ಷಿಣ 157 96 455 708
ಬೆಂಗಳೂರು ನಗರ 18 127 187 232
ಒಟ್ಟು 475 461 1,282 2,218

2020ರ ಕರಡು ಮತದಾರ ಪಟ್ಟಿ ವಿವರ

ಜಿಲ್ಲೆ ಪುರುಷ ಮಹಿಳೆ ಒಟ್ಟು

ಬೆಂಗಳೂರು ಕೇಂದ್ರ 8,89,278 8,38,989 17,28,267
ಬೆಂಗಳೂರು ಉತ್ತರ 10,91,995 10,29,386 21,21,381
ಬೆಂಗಳೂರು ದಕ್ಷಿಣ 10,45,125 9,58,843 20,03,968
ಬೆಂಗಳೂರು ನಗರ 17,35,279 15,49,752 32,85,031
ಒಟ್ಟು 47,61,677 43,76,970 91,38,647