ಹಿಡಕಲ್ ಡ್ಯಾಂನಿಂದ ಕಾಲುವೆಗಳಿಗೆ 5 ದಿನ 2.17 ಟಿಎಂಸಿ ನೀರು: ಬಾಲಚಂದ್ರ ಜಾರಕಿಹೊಳಿ
ಮೂಡಲಗಿ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ, ರಾಯಬಾಗ ತಾಲೂಕುಗಳ ಬಹುಗ್ರಾಮ ಕುಡಿಯುವ ನೀರು ಸರಬುರಾಜು ಯೋಜನೆಗಳಿಗೆ ಅನುಕೂಲವಾಗಲು ಕೇವಲ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಜಲಾಶಯದಿಂದ ನೀರನ್ನು ಬಿಡಲಾಗುತ್ತಿದೆ ಎಂದ ಬಾಲಚಂದ್ರ ಜಾರಕಿಹೊಳಿ.
ಗೋಕಾಕ(ಮೇ.26): ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಮತ್ತು ಸಿಬಿಸಿ ಕಾಲುವೆಗಳಿಗೆ ಜನ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೇ.26 ರಿಂದ 5 ದಿನಗಳವರೆಗೆ ಒಟ್ಟು 2.17 ಟಿಎಂಸಿ ನೀರನ್ನು ಹರಿಸಲಾಗುತ್ತಿದೆ ಎಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮೂಡಲಗಿ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ, ರಾಯಬಾಗ ತಾಲೂಕುಗಳ ಬಹುಗ್ರಾಮ ಕುಡಿಯುವ ನೀರು ಸರಬುರಾಜು ಯೋಜನೆಗಳಿಗೆ ಅನುಕೂಲವಾಗಲು ಕೇವಲ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಜಲಾಶಯದಿಂದ ನೀರನ್ನು ಬಿಡಲಾಗುತ್ತಿದೆ ಎಂದರು.
ಗ್ಯಾರಂಟಿಗೆಲ್ಲ ಆನ್‌ಲೈನ್ ಬಿಪಿಎಲ್ ತಣ್ಣೀರು..!
ಬೇಸಿಗೆಯ ಸಮಯದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಘಟಪ್ರಭಾ ಬಲದಂಡೆ ಕಾಲುವೆಗೆ 2000 ಕ್ಯುಸೆಕ್, ಘಟಪ್ರಭಾ ಎಡದಂಡೆ ಕಾಲುವೆಗೆ 2400 ಕ್ಯುಸೆಕ್ ಮತ್ತು ಚಿಕ್ಕೋಡಿ ಉಪಕಾಲುವೆಗೆ 500 ಕ್ಯುಸೆಕ್‌ನಂತೆ ಮೇ. 26 ರಂದು ಸಂಜೆ 6 ಗಂಟೆಯಿಂದ ಮುಂದಿನ 5 ದಿನಗಳವರೆಗೆ ನೀರನ್ನು ಹರಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಹಿಡಕಲ್ ಜಲಾಶಯದಿಂದ ನೀರನ್ನು ಹರಿಸುವಂತೆ ಇತ್ತೀಚೆಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರಿಂದ ಜನ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಸಲುವಾಗಿ ಪ್ರಾದೇಶಿಕ ಆಯುಕ್ತರು ಈ ಬಗ್ಗೆ ಕ್ರಮ ಕೈಗೊಂಡಿದ್ದು, ಕುಡಿಯುವ ನೀರಿಗಾಗಿ ಮಾತ್ರ ಬಳಕೆ ಮಾಡುವಂತೆ ರೈತರಲ್ಲಿ ವಿನಂತಿಸಿದರು.