ಔರಾದ್ ನಲ್ಲಿ 1 ಸಾವಿರ ಮೀಟರ್ ಭವ್ಯ ತಿರಂಗಾ ಯಾತ್ರೆ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ನೇತೃತ್ವದಲ್ಲಿ 1 ಸಾವಿರ ಮೀಟರ್ ಭವ್ಯ ತಿರಂಗಾ ಯಾತ್ರೆ ನಡೆಸಲಾಗಿದೆ.
ವರದಿ: ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ನ್ಯೂಸ್
ಬೀದರ್ (ಆ.10): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ನೇತೃತ್ವದಲ್ಲಿ 1 ಸಾವಿರ ಮೀಟರ್ ಭವ್ಯ ತಿರಂಗಾ ಯಾತ್ರೆ ನಡೆಸಲಾಗಿದೆ. ಬೀದರ್ ಜಿಲ್ಲೆ ಔರಾದ್ ಪಟ್ಟಣದ ಸುಕ್ಷೇತ್ರ ಅಮರೇಶ್ವರ ದೇವಸ್ಥಾನದ ಅಗ್ನಿಕುಂಡದ ಬಳಿ ತ್ರಿವರ್ಣ ಧ್ವಜ ಹಾರಿಸಿ, ಧ್ವಜಗಳನ್ನು ವಿತರಿಸುವ ಮೂಲಕ ತಿರಂಗಾ ಯಾತ್ರೆಗೆ ಪ್ರಭು ಚವ್ಹಾಣ್ ಚಾಲನೆ ನೀಡಿದರು. ಅಗ್ನಿಕುಂಡದಿಂದ ಆರಂಭವಾದ ರಾಷ್ಟ್ರಧ್ವಜದ ವಾಕ್ಥಾನ್ ಸಾರ್ವಜನಿಕ ಆಸ್ಪತ್ರೆ, ಬಸ್ ನಿಲ್ದಾಣದ ಮಾರ್ಗವಾಗಿ ಅಮರೇಶ್ವರ ಮಹಾವಿದ್ಯಾಲಯದವರೆಗೆ ಸಾಗಿ ಕೊನೆಗೊಂಡಿತು. ತಿರಂಗಾ ವಾಕ್ಥಾನ್ನಲ್ಲಿ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 5 ಸಾವಿರ ಜನತೆ ಪಾಲ್ಗೊಂಡಿದ್ದ ಯಾತ್ರೆಯಲ್ಲಿ ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರಧ್ವಜಗಳನ್ನು ಹಿಡಿದು ‘ಭಾರತ ಮಾತಾಕಿ ಜೈ’ ‘ವಂದೇ ಮಾತರಂ’ ಎನ್ನುವ ಘೋಷಣೆಗಳು ಕೂಗುವ ಮೂಲಕ ದೇಶಭಕ್ತಿಯನ್ನು ಮೆರೆದರು. ದೇಶಭಕ್ತಿ ಗೀತೆಗಳ ಮೇಲೆ ಯುವಕರು ಹೆಜ್ಜೆ ಹಾಕಿ ತಿರಂಗಾ ಯಾತ್ರೆಗೆ ಮೆರಗು ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಅಸಂಖ್ಯಾತ ತ್ಯಾಗ ಬಲಿದಾನಗಳ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಪರಕೀಯರ ಸಂಕೋಲೆಯಿಂದ ಮುಕ್ತಿಪಡೆದು ಸ್ವಾತಂತ್ರ್ಯ ಭಾರತವಾಗಿ 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಎಂಬ ಅದ್ಭುತ ಅಭಿಯಾನವನ್ನು ಕೈಗೊಂಡಿದ್ದಾರೆ. ಎಲ್ಲ ದೇಶವಾಸಿಗಳಲ್ಲಿ ದೇಶಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಆರಂಭಿಸಿರುವ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕಿದೆ ಎಂದು ಕೋರಿದರು.
‘ಹರ್ ಘರ್ ತಿರಂಗಾ’ ಮೋದಿ ನಾಟಕ: ಸಿದ್ದರಾಮಯ್ಯ
ಎಲ್ಲ ಮನೆಗಳ ಮೇಲೂ ತ್ರಿವರ್ಣ ಧ್ವಜ ಹಾರಾಡಬೇಕೆಂಬುದು ನನ್ನ ಸಂಕಲ್ಪವಾಗಿದೆ. ಅದರಂತೆ ಎಲ್ಲ ಮನೆಗಳ ಮೇಲೆ ಆಗಸ್ಟ್ 13ರಿಂದ 15ರವರೆಗೆ ತ್ರಿವರ್ಣ ಧ್ವಜಗಳನ್ನು ಹಾರಿಸುವ ಮೂಲಕ ದೇಶಭಕ್ತಿಯನ್ನು ಮೆರೆಯಬೇಕು ಎಂದು ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತ್ರಿವರ್ಣ ಧ್ವಜ ದೇಶಾಭಿಮಾನದ ಮತ್ತು ತ್ಯಾಗ ಬಲಿದಾನಗಳ ಸಂಕೇತವಾಗಿದೆ. ರಾಷ್ಟ್ರಧ್ವಜವನ್ನು ಗೌರವದಿಂದ ಕಾಣಬೇಕು. ಸರ್ಕಾರದ ನಿರ್ದೇಶನದಂತೆ ಗೌರವ ಪೂರ್ವಕವಾಗಿ ರಾಷ್ಟ್ರಧ್ವಜಕ್ಕೆ ಅವಮಾನವಾಗದ ರೀತಿಯಲ್ಲಿ ಧ್ವಜಗಳನ್ನು ಹಾರಿಸಬೇಕು ಎಂದು ಸಚಿವರು ವಿನಂತಿಸಿದರು.
Davanagere ಬಿಜೆಪಿಯಿಂದ ಬೃಹತ್ ತಿರಂಗಾ ಯಾತ್ರೆ
ನನ್ನ ವಿರುದ್ಧದ ಹೇಳಿಕೆ ಹಾಸ್ಯಾಸ್ಪದ ಎಂದ ಸಚಿವ ಚವ್ಹಾಣ್: ಕೆಲವರು ನನ್ನ ವಿರುದ್ಧ ನೀಡಿರುವ ಹೇಳಿಕೆ ಅತ್ಯಂತ ಹಾಸ್ಯಾಸ್ಪದವಾಗಿದೆ. ವಿಷಯಗಳನ್ನು ತಿಳಿದುಕೊಳ್ಳದೆ ಪಶು ಸಂಗೋಪನೆ ಇಲಾಖೆಯ ನೇಮಕಾತಿಯಲ್ಲಿ ನನ್ನ ಹಸ್ತಕ್ಷೇಪವಿದೆ ಎಂದು ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿ ಆರೋಪಿ ಸ್ಥಾನದಲ್ಲಿರುವವರು ನನ್ನ ಆಪ್ತ ಸಹಾಯಕ ಎಂಬುದು ಶುದ್ಧ ಸುಳ್ಳು. ಆ ವ್ಯಕ್ತಿಯನ್ನು ಅಧಿಕೃತವಾಗಿ ನಾನು ಯಾವುದೇ ಹುದ್ದೆಗೆ ನೇಮಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಇಲಾಖೆಯ ಹೆಸರನ್ನು ಕೆಡಿಸಲು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳ ಮೂಲಕ ಪ್ರಕರಣ ದಾಖಲಿಸಿ, ದುಷ್ಕ್ರತ್ಯದಲ್ಲಿ ತೊಡಗಿರುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಕ್ರಮ ವಹಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಅದರಂತೆ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.
ಇನ್ನು ಇಲಾಖೆಗೆ ಸಂಬಂಧಿಸಿದ ಮಾಹಿತಿ ಮತ್ತು ಜಾನುವಾರು ಆರೋಗ್ಯಕ್ಕೆ ಸಂಬಂಧಿಸಿದಂತೆ ಏನಾದರೂ ಮಾಹಿತಿ ಮತ್ತು ಸೇವೆ ಬೇಕಿದ್ದರೆ ಸಹಾಯವಾಣಿ ಕೇಂದ್ರ 1962 ಅಥವಾ 82771-00200 ಗೆ ಸಂಪರ್ಕಿಸಬೇಕು. ಕಿಡಿಗೇಡಿಗಳ ಮೋಸದಾಟಕ್ಕೆ ಬಲಿಯಾಗಬಾರದು ಎಂದರು.