ಗದಗ ಜಿಲ್ಲೆಯಾದ್ಯಂತ ಮತ್ತೆ ಆವರಿಸುತ್ತಿದೆ ಕೊರೋನಾ ಭೀತಿ| ಗುಜರಾತ್‌ನಿಂದ 16, ಮಹಾರಾಷ್ಟ್ರದಿಂದ 37, ತಮಿಳುನಾಡಿನಿಂದ 3, ಕೇರಳದಿಂದ 28, ಊಟಿಯಿಂದ 6 ಗೋವಾದಿಂದ 1728 ಜನ ಆಗಮನ| ದೇಶದಲ್ಲಿ ವರದಿಯಾಗಿರುವ ಕೊರೋನಾ ಪ್ರಕರಣಗಳಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದಲೇ ಶೇ.50 ಕ್ಕೂ ಹೆಚ್ಚು ಪ್ರಕರಣ ವರದಿ|

ಶಿವಕುಮಾರ ಕುಷ್ಟಗಿ

ಗದಗ(ಮೇ.13): ಕೊರೋನಾ ಲಾಕ್‌ಡೌನ್‌ನಿಂದ ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಜನರು ಮರಳಿ ಆಯಾ ಜಿಲ್ಲೆಗೆ ಆಗಮಿಸುತ್ತಿದ್ದು, ಅವರು ಆಗಮಿಸಿದಲ್ಲೆಲ್ಲಾ ಕೊರೋನಾ ಅಬ್ಬರಿಸುತ್ತಿದ್ದು, ಗದಗ ಜಿಲ್ಲೆಗೆ ಒಟ್ಟು 1818 ಜನರು ವಾಪಸ್ಸಾಗಿದ್ದು, ಸದ್ಯಕ್ಕೆ ಕೊರೋನಾ ಮುಕ್ತವಾಗಿದ್ದ ಗದಗ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಮೂವರಿಗೆ ಕರೋನಾ ವಕ್ಕರಿಸುವ ಮೂಲಕ ಜನರ ಆತಂಕ ಹೆಚ್ಚುವಂತೆ ಮಾಡಿದೆ.

ಜಿಲ್ಲೆಯಲ್ಲಿ ಇದುವರೆಗೂ 5 ಪ್ರಕರಣಗಳ ದೃಢಪಟ್ಟಿದ್ದು, ಅವುಗಳಲ್ಲಿ ಓರ್ವ ಮೃತಪಟ್ಟಿದ್ದು, ಇನ್ನುಳಿದ 4 ಜನ ಗುಣಮುಖವಾಗಿ ಮರಳಿ ಮನೆಗೆ ತೆರಳಿದ್ದು ಸದ್ಯಕ್ಕೆ ಗದಗ ಜಿಲ್ಲೆ ಕೊರೋನಾ ಮುಕ್ತವಾಗಿದೆ. ಆದರೆ ಕಳೆದ ನಾಲ್ಕೈದು ದಿನಗಳಿಂದ ಅನ್ಯ ರಾಜ್ಯಗಳಿಂದ ಬರುತ್ತಿರುವವರಿಂದ ಜಿಲ್ಲೆಯ ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಲಾಕ್‌ಡೌನ್‌ ಎಫೆಕ್ಟ್‌: ಅನ್ನದಾತರ ನೆರವಿಗೆ ಧಾವಿಸಿದ ರೈತರು!

1818 ಜನರ ಆಗಮನ:

ಜಿಲ್ಲೆಗೆ ಬುಧವಾರ ಬೆಳಗಿನವರೆಗೂ 1818 ಜನರು ವಾಪಸ್ಸಾಗಿದ್ದು, ಅವರಲ್ಲಿ ಗುಜರಾತ್‌ನಿಂದ 16, ಮಹಾರಾಷ್ಟ್ರದಿಂದ 37, ತಮಿಳುನಾಡಿನಿಂದ 3, ಕೇರಳದಿಂದ 28, ಊಟಿಯಿಂದ 6 ಗೋವಾದಿಂದ 1728 ಜನರು ಆಗಮಿಸಿದ್ದಾರೆ. ಬಹಳಷ್ಟುಸಂಖ್ಯೆಯಲ್ಲಿ ಗೋವಾದಿಂದ ಆಗಮಿಸಿರುವ ಜನರ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯವಾಗಿರುವವರನ್ನೆಲ್ಲಾ ಹೋಂ ಕಾರಂಟೈನ್‌ ಮಾಡಲಾಗಿದೆ.

ಗುಜರಾತ್‌, ಮಹಾರಾಷ್ಟ್ರ ಆತಂಕಕ್ಕೆ ಕಾರಣ:

ದೇಶದಲ್ಲಿ ವರದಿಯಾಗಿರುವ ಕೊರೋನಾ ಪ್ರಕರಣಗಳಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದಲೇ ಶೇ.50 ಕ್ಕೂ ಹೆಚ್ಚು ಪ್ರಕರಣ ವರದಿಯಾಗಿವೆ. ಈ ಎರಡೂ ರಾಜ್ಯಗಳಿಂದ ಗದಗ ಜಿಲ್ಲೆಗೆ 53 ಜನ ಆಗಮಿಸಿದ್ದು ಅವರೆಲ್ಲರ ಗಂಟಲು ದ್ರವ ಹಾಗೂ ರಕ್ತದ ಮಾದರಿ ತಪಾಸಣೆಗೆ ರವಾನಿಸಿದ್ದು ಬುಧವಾರ ಸಂಜೆಯ ವೇಳೆಗೆ ವರದಿ ಕೈಸೇರಲಿದ್ದು ಇದರತ್ತ ಎಲ್ಲರ ಚಿತ್ತ ನೆಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ.

ಬಾಗಲಕೋಟೆ ನಂಟು:

ಬಾಗಲಕೋಟೆ ಜಿಲ್ಲೆಯ ಡಾಣಕಶಿರೂರು ಗ್ರಾಮದ ಗರ್ಭಿಣಿ ಮಹಿಳೆಗೆ ಸೋಂಕು ತಗಲಿದ್ದು, ರೋಣ ತಾಲೂಕಿನ ಕೃಷ್ಣಾಪುರ ಗ್ರಾಮ ಅವರ ತವರು ಮನೆ. ಈ ಮಹಿಳೆಯಿಂದ ಸೋಂಕು ತಗಲಿಸಿಕೊಂಡ 5 ಜನ ರೋಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿರುವ ಟ್ರಾವೆಲ್‌ ಹಿಸ್ಟರಿ ಹಿನ್ನೆಲೆಯಲ್ಲಿ ಆ ಭಾಗದಲ್ಲಿನ ಜನರ ಪರೀಕ್ಷೆಗಳನ್ನು ಜಿಲ್ಲಾಡಳಿತ ನಿರಂತರವಾಗಿ ನಡೆಸುತ್ತಿದ್ದು, ಯಾವಾಗ ಪಾಸಿಟಿವ್‌ ಪ್ರಕರಣ ವರದಿಯಾದರೂ ಆಶ್ಚರ್ಯ ಪಡುವಂತಿಲ್ಲ.
ಜಿಲ್ಲೆಯಲ್ಲಿ ವರದಿಯಾದ 5 ಪ್ರಕರಣಗಳು ಗದಗ ನಗರದಿಂದಲೇ ಬಂದಿರುವ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್‌ ಪ್ರದೇಶದಲ್ಲಿನ ನಿವಾಸಿಗಳ ರಾರ‍ಯಪಿಡ್‌ ಟೆಸ್ಟ್‌ಗೆ ಮುಂದಾಗಿರುವ ಜಿಲ್ಲಾಡಳಿತ ನಿತ್ಯವೂ ನೂರಾರು ಜನರ ತಪಾಸಣೆ ಮಾಡುತ್ತಿದೆ. ಆದರೆ ಇದುವರೆಗೂ ಯಾವುದೇ ಪಾಸಿಟಿವ್‌ ಪ್ರಕರಣಗಳು ವರದಿಯಾಗದೇ ಇರುವುದು ಮಾತ್ರ ಸದ್ಯಕ್ಕೆ ನೆಮ್ಮದಿ ತರುವ ವಿಚಾರವಾಗಿದೆ.