ಬೆಳಗಾವಿ: ಚರ್ಮಗಂಟಿನ ರೋಗಕ್ಕೆ 176 ಜಾನುವಾರು ಬಲಿ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಜಾನುವಾರಗಳಲ್ಲಿ ಸಾಂಕ್ರಾಮಿಕ ಚರ್ಮಗಂಟಿನ ರೋಗಕ್ಕೆ ತಾಲೂಕಿನ ಇದುವರೆಗೂ 176 ಜಾನುವಾರುಗಳು ಸಾವನ್ನಪ್ಪಿದ್ದು, ಇದು ರೈತಾಪಿ ವರ್ಗದ ಆತಂಕಕ್ಕೆ ಕಾರಣವಾಗಿದೆ.
ಆನಂದ ಭಮ್ಮನ್ನವರ
ಸಂಕೇಶ್ವರ(ಡಿ.24): ಬೆಳಗಾವಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಬಿಟ್ಟೂಬಿಡದೇ ಕಾಡುತ್ತಿದೆ. ಕಳೆದ 6 ತಿಂಗಳಿಂದ ಜಿಲ್ಲೆಯಲ್ಲಿ ಅದರಲ್ಲೂ ಗಡಿ ಭಾಗ ಹುಕ್ಕೇರಿ ತಾಲೂಕಿನ ಜಾನುವಾರಗಳಲ್ಲಿ ಸಾಂಕ್ರಾಮಿಕ ಚರ್ಮಗಂಟಿನ ರೋಗಕ್ಕೆ ತಾಲೂಕಿನ ಇದುವರೆಗೂ 176 ಜಾನುವಾರುಗಳು ಸಾವನ್ನಪ್ಪಿದ್ದು, ಇದು ರೈತಾಪಿ ವರ್ಗದ ಆತಂಕಕ್ಕೆ ಕಾರಣವಾಗಿದೆ. ಹುಕ್ಕೇರಿ ತಾಲೂಕಿನಲ್ಲಿ ಚರ್ಮಗಂಟು ರೋಗದ ಉಲ್ಬಣದಿಂದ ಪ್ರಸಿದ್ಧ ದನಗಳ ಸಂತೆ ನಡೆಯುತ್ತಿದ್ದ ಸಂಕೇಶ್ವರ ದನಗಳ ಮಾರುಕಟ್ಟೆಬಂದ್ ಮಾಡಲಾಗಿದೆ. ಕಳೆದ 6 ತಿಂಗಳಿಂದ ವಕ್ಕರಿಸಿರುವ ಈ ಚರ್ಮ ಗಂಟು ವ್ಯಾಧಿಗೆ ತಾಲೂಕಿನ ಅದರಲ್ಲೂ ವಿಶೇಷವಾಗಿ ಎತ್ತುಗಳಲ್ಲಿ ಈ ರೋಗ ಕಂಡು ಬರುತ್ತಿದ್ದು, ಇದು ಕೃಷಿ ಚಟುವಟಿಕೆ ಮೇಲೆ ಹೊಡೆತ ಬೀಳುತ್ತಿದೆ.
ಇನ್ನು ಹೊಸ ವರ್ಷದ ಆರಂಭದಲಿ ಹುಕ್ಕೇರಿ ತಾಲೂಕಿನಲ್ಲಿ ಸಾಲು ಸಾಲು ಜಾತ್ರೆಗಳು ಆರಂಭವಾಗುತ್ತಿದ್ದು, ಪರಿಣಾಮ ಜಾತ್ರೆಯಲ್ಲಿ ದನಗಳ ಕೂಡುವುದರಿಂದ ಚರ್ಮ ಗಂಟು ರೋಗು ಇನ್ನಷ್ಟುಉಲ್ಬಣಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಸಾಂಕ್ರಾಮಿಕ ರೋಗವಾಗಿರುವುದರಿಂದ ಇದನ್ನು ತಡೆಗಟ್ಟಲು ದನಗಳು ಸೇರದಂತೆ ಕ್ರಮ ಜರುಗಿಸುವಂತೆ ಪಶು ವೈದ್ಯರು ಸಲಹೆ ನೀಡಿದ್ದಾರೆ.
ಚರ್ಮಗಂಟಿಗೆ ಒಂದೇ ತಿಂಗಳಲ್ಲಿ 10,305 ರಾಸುಗಳ ಸಾವು: ಸಿದ್ದು
ಬಿಡಾಡಿ ದನಗಳಿಗೆ ಅಂಟಿದ ಚರ್ಮಗಂಟು:
ಚರ್ಮಗಂಟು ರೋಗದ ಬಗ್ಗೆ ಎಚ್ಚರವಹಿಸಿರುವ ಪಶು ಪಾಲಕರು ತಮ್ಮ ತಮ್ಮ ಮನೆಗಳಲ್ಲಿನ ರಾಸುಗಳಿಗೆ ಚಿಕಿತ್ಸೆ ಕಾಳಜಿ ತೋರಿದ್ದಾರೆ. ಆದರೆ, ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಬಿಡಾಡಿ ದನಗಳಲ್ಲಿ ಚರ್ಮಗಂಟು ರೋಗ ಅಂಟಿರುವುದು ಕಂಡು ಬಂದಿದೆ. ಈ ಬಗ್ಗೆ ಪಶು ಸಂಗೋಪನೆ ಇಲಾಖೆ ಕ್ರಮ ಜರುಗಿಸುವಂತೆಯು ಸ್ಥಳಿಯರು ಆಗ್ರಹಿಸಿದ್ದಾರೆ .
ಗ್ರಾಮೀಣ ಪ್ರದೇಶಗಳಲ್ಲಿಲ್ಲ ಜಾಗೃತಿ:
ರಾಜ್ಯಾದ್ಯಂತ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಈ ಸಾಂಕ್ರಾಮಿಕ ರೋಗದ ಬಗ್ಗೆ ಹುಕ್ಕೇರಿ ತಾಲೂಕಿನ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿನ ಜಾನುವಾರು ಪಾಲನೆ ಮಾಡುವರಲ್ಲಿ ಇನ್ನು ಕೂಡ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸದ ಪರಿಣಾಮ ಇಂದು ತಾಲೂಕಿನ 176 ಜಾನುವಾರು ಸಾವನ್ನಪ್ಪಿದ್ದು, ಅಧಿಕಾರಿಗಳು ಹಳ್ಳಿಗಳಲ್ಲಿ ತಮ್ಮ ಇಲಾಖೆ ಅಧಿಕಾರಿಗಳೊಂದಿಗೆ ಮುಂಜಾಗ್ರತಾ ಕ್ರಮ ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಗಡಿ ಭಾಗ ಹುಕ್ಕೇರಿ ತಾಲೂಕಿನ ಜಾನುಗಳಲ್ಲಿ ಚರ್ಮ ಗಂಟಿನ ಬಗ್ಗೆ ಇನಷ್ಟುಜಾಗೃತಿ ಅವಶ್ಯಕತೆಯಿದ್ದು, ದನಗಳ ಬಳಿ ಸ್ವಚ್ಛತಾ ಸೇರಿದಂತೆ ಹೆಚ್ಚಿನ ಕ್ರಮದ ಬಗ್ಗೆಯು ಜನರಲ್ಲಿ ಅರಿವು ಮೂಡಿಸಬೇಕಿದೆ.
ವಿಜಯಪುರದಲ್ಲಿ ಹೆಮ್ಮಾರಿ ಗಂಟುರೋಗದ ಆರ್ಭಟ, 151ಜಾನುವಾರುಗಳು ಬಲಿ!
176 ದನಗಳ ಪೈಕಿ ಕೇವಲ 2 ದನಗಳಿಗೆ ಮಾತ್ರ ಪರಿಹಾರ
ಹುಕ್ಕೇರಿ ತಾಲೂಕಿನ ಒಟ್ಟು 1,26,604 ಜಾನುವಾರುಗಳ ಪೈಕಿ ಈಗಾಗಲೇ 1,604 ದನಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ. ಇದರಲ್ಲಿ ಲಸಿಕೆಯಿಂದ 484 ಜಾನುವಾರು ರೋಗದಿಂದ ಗುಣಮುಖವಾಗಿವೆ. ಇಲ್ಲಿಯವರೆಗೆ ರೋಗದಿಂದ ಸತ್ತಿರುವ 176 ದನಗಳ ಪೈಕಿ ಕೇವಲ 2 ದನಗಳಿಗೆ ಮಾತ್ರ ಸರ್ಕಾರದ ಪರಿಹಾರ ದೊರಕಿದೆ.
ತಾಲೂಕಿನ 1,26,604 ದನಗಳ ಪೈಕಿ ಬಹುತೇಕ ದನಗಳಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ನೀಡಲಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಮ್ಮಲಿ ಲಸಿಕೆ ಲಭ್ಯವಿದೆ. ನಮ್ಮ ಇಲಾಖೆ ಸಿಬ್ಬಂದಿ ಕೂಡ ಗ್ರಾಮಗಳಲ್ಲಿ ಲಸಿಕೆ ನೀಡುವ ಕಾಯಕದಲ್ಲಿದ್ದಾರೆ. ಆದಷ್ಟುಚರ್ಮ ಗಂಟು ರೋಗ ಕಂಡು ಬಂದ ದನಗಳನ್ನ ಹೊರಗಡೆ ಬಿಡದೆ ಮನೆಯಲ್ಲಿ ಇರಿಸಬೇಕು. ಸಾಂಕ್ರಾಮಿಕ ರೋಗವಾಗಿರುವುದರಿಂದ ದನಗಳನ್ನ ಕೊಟ್ಟಿಗೆಯಲ್ಲಿ ಸ್ವಚ್ಛಗಿಡಬೇಕು ಹಾಗೂ ಅಂತರದಿಂದ ಇರಿಸಬೇಕು ಅಂತ ಹುಕ್ಕೇರಿ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶ ಕದಂ ತಿಳಿಸಿದ್ದಾರೆ.