ಸುಳ್ಯ [ಆ.24]:  ಇಲ್ಲಿನ ಶಾಸಕ ಎಸ್.ಅಂಗಾರ ಅವರಿಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನ ಮತ್ತು ಆಕ್ರೋಶಗೊಂಡಿರುವ ಸುಳ್ಯ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಮುಂದುವರಿಯುತ್ತಿವೆ. ಮಂತ್ರಿಸ್ಥಾನ ನಿರಾಕರಣೆ ಹಿನ್ನೆಲೆಯಲ್ಲಿ ತುರ್ತು ಸಭೆ ಸೇರಿದ ಮುಖಂಡರು ಹಾಗೂ ಜನಪ್ರತಿನಿಧಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ತಟಸ್ಥ ಧೋರಣೆ ಅನುಸರಿಸುವ ಮೂಲಕ ಪಕ್ಷದ ಜಿಲ್ಲೆ ಹಾಗೂ ರಾಜ್ಯ ಘಟಕದೊಂದಿಗೆ ಅಸಹಕಾರ ಧೋರಣೆಯ ಆಂದೋಲನ ಆರಂಭಿಸಿದ್ದರು.

ಅದರಂತೆ ಮೂರು ದಿನವೂ ಸುಮಾರು 175ರಷ್ಟು ಮಂದಿ ತಮ್ಮ ಜವಾಬ್ದಾರಿಯುತ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಆದರೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಿಗೆ ಈ ರಾಜೀನಾಮೆ ಪತ್ರಗಳು ಸಲ್ಲಿಕೆಯಾಗಿವೆ. 

ರಾಜೀಯಾಗುವ ಪ್ರಶ್ನೆಯೇ ಇಲ್ಲ: ಜಿಲ್ಲಾ ಮತ್ತು ರಾಜ್ಯ  ಘಟಕದ ಯಾವುದೇ ಸೂಚನೆಗಳನ್ನು ಪಾಲಿಸದೆ ಮಂಡಲ ಸಮಿತಿಯ 275 ಬೂತುಗಳಲ್ಲಿ ಅಸಹಕಾರ ಚಳುವಳಿ ಆರಂಭಿಸಲಾಗಿದೆ. ತಟಸ್ಥ ಧೋರಣೆ ಮೂಲಕ ತಮಗಾದ ನೋವನ್ನು ಜಿಲ್ಲಾ ಮತ್ತು ರಾಜ್ಯ ಘಟಕದ ಮುಂದಿರಿಸುವ ಪ್ರಯತ್ನ ಮತ್ತಷ್ಟು ಬಿಗಿಯಾಗಿದ್ದು ನ್ಯಾಯ ದೊರೆಯುವ ತನಕ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ನಾಯಕರಿಗೆ ಸಂದೇಶ ರವಾನಿಸಲಾಗಿದೆ. ಒಂದೆರಡು ದಿನಗಳ ಬಳಿಕ ಸಹಜ ಸ್ಥಿತಿಗೆ ಬರಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಜಿಲ್ಲೆ ಹಾಗೂ ರಾಜ್ಯ ನಾಯಕರಿಗೆ ಸುಳ್ಯದಲ್ಲಿ ಪಕ್ಷದ ಕಾರ್ಯಕರ್ತರ ಆಕ್ರೋಶದ ಬಿಸಿ ತಟ್ಟಿದೆ.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಖಂಡರ ಸಂಪರ್ಕಿಸಿದ ನಿಯೋಜಿತ ರಾಜ್ಯಾಧ್ಯಕ್ಷ ಪಕ್ಷದ ನಿಯೋಜಿತ ರಾಜ್ಯಾಧ್ಯಕ್ಷ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿವಾಸಿ ನಳಿನ್ ಕುಮಾರ್ ಕಟೀಲ್ ಅವರು ಮಂಡಲ ಸಮಿತಿ ಮುಖಂಡರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆ ವೇಳೆ ಇಲ್ಲಿನ ಮುಖಂಡರು ನಾವು ಯಾವುದೇ ಕಾರಣಕ್ಕೂ ಯಾರನ್ನೂ ಭೇಟಿಯಾಗುವುದಿಲ್ಲ, ಖುದ್ದು ನೀವೇ ಸ್ಥಳಕ್ಕೆ ಬಂದು ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಕ್ಯಾಬಿನೆಟ್ ದರ್ಜೆಯಸ್ಥಾನಮಾನ ಹೊರತುಪಡಿಸಿ ಬೇರೆ ಯಾವ ಸ್ಥಾನ ಕೊಟ್ಟರೂ ಒಪ್ಪುವುದಿಲ್ಲ ಎಂಬ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಮಧ್ಯೆ ಬೆಂಗಳೂರಿನಲ್ಲಿದ್ದ ಶಾಸಕ ಎಸ್.ಅಂಗಾರ ಬುಧವಾರ ಬೆಳಗ್ಗೆ ಮನೆಗೆ ಆಗಮಿಸಿದ್ದು, ಆ ಬಳಿಕ ಯಾವುದೇ ಕಾರ್ಯಕ್ರಮ ಹಾಗೂ ಚಟುವಟಿಕೆಗಳಿಗೆ ಹಾಜರಾಗದೆ ತನ್ನ ಅಸಮಾಧಾನವನ್ನು ಕೂಡಾ ಜಾರಿಯಲ್ಲಿಟ್ಟಿದ್ದಾರೆ. ಶುಕ್ರವಾರ ಸುಳ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೈಸೂರಿನ ಶಾಸಕ ರಾಮದಾಸ್ ಅವರನ್ನು ಭೇಟಿಯಾಗಲು ಬಂದ ಹೊರತಾಗಿ ಅಂಗಾರರು ಬೇರೆಲ್ಲಿಗೂ ತೆರಳಿಲ್ಲ. ಸಂಘ ಪರಿವಾರದ ಮುಖಂಡರು, ಬಿಜೆಪಿ ಮುಖಂಡರು ನಾನಾ ಸ್ತರದ ಜನಪ್ರತಿನಿಧಿಗಳು ಅಂಗಾರರ ಮನೆಗೆ ಭೇಟಿ ನೀಡಿ ಅವರ ಅಸಮಾಧಾನ ಮತ್ತು ನೋವಿಗೆ ಸಾಂತ್ವಾನ ಹೇಳಿದ್ದಾರಲ್ಲದೆ ಬೆಂಬಲ ವ್ಯಕ್ತಪಡಿಸಿ ಬರುತ್ತಿದ್ದಾರೆ.