Asianet Suvarna News Asianet Suvarna News

ಕೊರೋನಾರ್ಭಟ: 12 ನಿಮಿಷಕ್ಕೊಬ್ಬ ಕೊರೋನಾ ಸೋಂಕಿತ ಸಾವು..!

ಸೋಂಕಿತರ ಸಾವಿನಲ್ಲೂ ದಾಖಲೆ ಬರೆದ ಬೆಂಗಳೂರು| ಶುಕ್ರವಾರ ಬೆಂಗಳೂರಿನಲ್ಲಿ ಬರೋಬ್ಬರಿ 124 ಮಂದಿ ಬಲಿ| ಪ್ರತಿ ನಿಮಿಷಕ್ಕೆ 12 ಮಂದಿಗೆ ಸೋಂಕು ದೃಢ| 

16662 New Corona Cases at Bengaluru on April 24th grg
Author
Bengaluru, First Published Apr 24, 2021, 7:11 AM IST

ಬೆಂಗಳೂರು(ಏ.24): ನಗರದಲ್ಲಿ ಕೋವಿಡ್‌ ಸೋಂಕಿತರ ಸಾವಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಶುಕ್ರವಾರ 124 ಮಂದಿ ಈ ಹೆಮ್ಮಾರಿಗೆ ಬಲಿಯಾಗುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. ಇದೇ ವೇಳೆ 16,662 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಗುರುವಾರ ಪತ್ತೆಯಾಗಿದ್ದ 15,244 ಸೋಂಕಿತ ಪ್ರಕರಣಗಳು ಮತ್ತು ಏ.19ರಂದು ವರದಿಯಾಗಿದ್ದ 97 ಸೋಂಕಿತರ ಸಾವು ಇದುವರೆಗಿನ ದಾಖಲೆಯಾಗಿತ್ತು. ಶುಕ್ರವಾರ ಎರಡು ದಾಖಲೆಗಳು ಮೂಲೆಗುಂಪಾಗಿದ್ದು ಮೃತರ ಸಂಖ್ಯೆ ಮತ್ತು ಹೊಸ ಸೋಂಕಿತ ಪ್ರಕರಣಗಳು ಹಿಂದಿನ ಎಲ್ಲ ದಾಖಲೆಯನ್ನು ಅಳಿಸಿ ಹಾಕಿವೆ.

ಶುಕ್ರವಾರ ಬರೋಬ್ಬರಿ 16,662 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗುವ ಮೂಲಕ ನಗರದಲ್ಲಿ ಪ್ರತಿ ನಿಮಿಷಕ್ಕೆ 12 ಜನ ಸೋಂಕು ದೃಢಪಟ್ಟಿದ್ದರೆ, 12 ನಿಮಿಷಕ್ಕೊಂದು ಸಾವಿನಂತೆ ದಿನಕ್ಕೆ 124 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ; ಅಗತ್ಯ,ತುರ್ತು ಸೇವೆ ಮಾತ್ರ ಲಭ್ಯ!

ನಗರದಲ್ಲಿ ಹೊಸದಾಗಿ 16,662 ಮಂದಿಯಲ್ಲಿ ಸೋಂಕು ಪತ್ತೆಯಾಗುವ ಮೂಲಕ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,48,624ಕ್ಕೆ ಏರಿಕೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 6,15,581ಕ್ಕೆ ಹೆಚ್ಚಳವಾಗಿದೆ. ಅಂತೆಯೇ 4,727 ಮಂದಿ ಬಿಡುಗಡೆಯಾಗಿದ್ದು 4,60,382 ಮಂದಿ ಈವರೆಗೂ ಸೋಂಕಿನಿಂದ ಗುಣಮುಖರಾದಂತಾಗಿದೆ. ಗುರುವಾರ 124 ಮಂದಿ ಕೊರೋನಾ ಸೋಂಕಿತರು ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 5574ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರವೊಂದರಲ್ಲೇ 264 ಮಂದಿ ಸೋಂಕಿತರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

30 ವರ್ಷ ಮೇಲ್ಪಟ್ಟವರ ಸಾವು

ನಗರದಲ್ಲಿ 124 ಮಂದಿ ಸೋಂಕಿನಿಂದ ಮೃತಪಟ್ಟ ವರದಿಯಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಯಂತೆ 30-39 ವರ್ಷದೊಳಗಿನ ಆರು ಮಂದಿ, 40ರಿಂದ 49 ವರ್ಷದ 15, 50ರಿಂದ 59 ವರ್ಷದೊಳಗಿನ 25 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ, 60 ವರ್ಷ ಮೇಲ್ಪಟ್ಟ21 ಪುರುಷರು, 12 ಮಹಿಳೆಯರು ಮತ್ತು 70 ವರ್ಷ ಮೇಲ್ಪಟ್ಟ19 ಮಹಿಳೆಯರು, 26 ಪುರುಷರು ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹೀಗೆ ಒಟ್ಟು 124 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
 

Follow Us:
Download App:
  • android
  • ios