ಕೊಡಗಿನಲ್ಲಿ ಮಳೆಗೆ ಮುರಿದು ಬಿದ್ದ 1638 ವಿದ್ಯುತ್ ಕಂಬಗಳು: 2 ಕೋಟಿ ನಷ್ಟ!
ಜಿಲ್ಲೆಯಲ್ಲಿ ಸಾಕಷ್ಟು ಗಾಳಿ ಮಳೆ ಸುರಿಯುವುದರಿಂದ ಭಾರಿ ನಷ್ಟ ಅನುಭವಿಸುವುದು ಸಾಮಾನ್ಯ ಎನ್ನುವಂತೆ ಆಗಿದೆ. ಆದರೆ ಹಿಂದೆಂದಿಗಿಂತ ಈ ವರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಚೆಸ್ಕಾಂಗೆ ನಷ್ಟ ಉಂಟಾಗಿರುವುದು ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನ ಮೂಡುವಂತೆ ಮಾಡಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಆ.05): ಜಿಲ್ಲೆಯಲ್ಲಿ ಸಾಕಷ್ಟು ಗಾಳಿ ಮಳೆ ಸುರಿಯುವುದರಿಂದ ಭಾರಿ ನಷ್ಟ ಅನುಭವಿಸುವುದು ಸಾಮಾನ್ಯ ಎನ್ನುವಂತೆ ಆಗಿದೆ. ಆದರೆ ಹಿಂದೆಂದಿಗಿಂತ ಈ ವರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಚೆಸ್ಕಾಂಗೆ ನಷ್ಟ ಉಂಟಾಗಿರುವುದು ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನ ಮೂಡುವಂತೆ ಮಾಡಿದೆ. ಹೌದು! ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಚೆಸ್ಕಾಂ ಇಲಾಖೆಗೆ ಬರೋಬ್ಬರಿ 1.96 ಕೋಟಿ ರೂಪಾಯಿ ನಷ್ಟವಾಗಿದೆ. ಅದರಲ್ಲೂ ಸಾವಿರಾರು ಸಂಖ್ಯೆಯಲ್ಲಿ ವಿದ್ಯುತ್ ಕಂಬಗಳೇ ಮುರಿದು ಬೀಳುತ್ತಿರುವುದು ಅವುಗಳ ಗುಣಮಟ್ಟವನ್ನು ಪ್ರಶ್ನಿಸುವಂತೆ ಮಾಡಿದೆ.
ಹೌದು ಜುಲೈ ತಿಂಗಳ ಕೊನೆಯಲ್ಲಿ ಬಿಟ್ಟು ಬಿಡದೆ ಸುರಿದಿದ್ದ ಭಾರೀ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಪ್ರವಾಹದ ರೂಪ ಪಡೆದಿತ್ತು. ಅದಕ್ಕಿಂತ ಮುಖ್ಯವಾಗಿ ಮಳೆಯ ಜೊತೆಗೆ ಬೀಸಿದ್ದ ಭೀಕರ ಗಾಳಿ ಸಾವಿರಾರು ಮರ, ವಿದ್ಯುತ್ ಕಂಬಗಳು ಧರಾಶಾಯಿಯಾಗುವಂತೆ ಮಾಡಿತ್ತು. ಮರಗಳು ವಿದ್ಯುತ್ ಲೈನ್ಗಳ ಮೇಲೆ ಉರುಳಿ ಬಿದ್ದ ಪರಿಣಾಮ ದೊಡ್ಡ 1638 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದವು. ಜೊತೆಗೆ 78 ಟ್ರಾನ್ಸ್ಫರ್ಮರ್ ಗಳು ಹಾಳಾಗಿವೆ ಎಂದು ಸ್ವತಃ ಚೆಸ್ಕಾಂ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯ ನಿಯಮಾವಳಿಗಳನ್ನು ಮೀರಿಲ್ಲ: ಸಚಿವ ಮಹದೇವಪ್ಪ
ವಿದ್ಯುತ್ ಕಂಬ ಮತ್ತು ಟ್ರಾನ್ಸ್ಫರ್ಮರ್ಗಳು ಹಾಳಾದ ಪರಿಣಾಮ ಇಲಾಖೆ 1.96 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕೊಡಗು ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ ಅವರೇ ಮಾಹಿತಿ ನೀಡಿದ್ದಾರೆ. ಆದರೆ ಕಳೆದ ಕೆಲವು ಎರಡು ಮೂರು ವರ್ಷಗಳಲ್ಲಿ ನೋಡಿದರೆ, ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮುರಿದು ಬಿದ್ದ ಸಂಖ್ಯೆ ಕಡಿಮೆ. ವಿದ್ಯುತ್ ಲೈನ್ ಗಳ ಮೇಲೆ ಮರಗಳು ಉರುಳಿ ಬಿದ್ದರೂ ವಿದ್ಯುತ್ ಲೈನ್ ತುಂಡಾಗುತ್ತಿದ್ದವೇ ಹೊರತ್ತು, ಕಂಬಗಳು ಮುರಿದು ಬೀಳುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅಳವಡಿಸುತ್ತಿರುವ ವಿದ್ಯುತ್ ಕಂಬಗಳು ಸಣ್ಣ ಗಾಳಿ ಮಳೆಗೆ ಮುರಿದು ಬೀಳುತ್ತಿವೆ.
ಲೈನ್ಗಳ ಮೇಲೆ ಮರದ ಸಣ್ಣ ಕೊಂಬೆಗಳು ಮುರಿದು ಬಿದ್ದರೂ ವಿದ್ಯುತ್ ಕಂಬಗಳೇ ಮುರಿದು ಬೀಳುತ್ತಿವೆ. ಈ ಕುರಿತು ತನಿಖೆಯಾಗಬೇಕು. ಇದೊಂದು ದುಡ್ಡು ಮಾಡುವ ದಂಧೆಯಾಗಿದೆ ಎನಿಸುತ್ತಿದೆ. ವಿದ್ಯುತ್ ಕಂಬಗಳನ್ನು ಟ್ರ್ಯಾಕ್ಟರ್ಗಳ ಮೂಲಕ ತರುವಾಗಲೇ ಮುರಿದು ಹೋಗುತ್ತಿವೆ. ಹೀಗಾಗಿ ವಿದ್ಯುತ್ ಕಂಬಗಳು ಕಳಪೆಯಾಗಿವೆ ಎನ್ನುವುದು ಸ್ಪಷ್ಟವಾಗುತ್ತದೆ. ಯಾವ ಕಂಪೆನಿಯಿಂದ ವಿದ್ಯುತ್ ಕಂಬಗಳನ್ನು ಖರೀದಿಸುತ್ತಿದ್ದಾರೋ ಅವುಗಳಿಗೆ ಕೊಡಬೇಕಾಗಿರುವ ಹಣವನ್ನು ತಡೆ ಹಿಡಿದು ತನಿಖೆ ನಡೆಸಲಿ ಎಂದು ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಮನುಸೋಮಯ್ಯ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಮಹಿಳಾ ಕಾಂಗ್ರೆಸ್!
ಈ ಕುರಿತು ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ ಅವರು ಕಳೆದ 10 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅತೀ ಹೆಚ್ಚು ಗಾಳಿ ಬೀಸಿದೆ. ಇದೇ ಕಾರಣಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಎನ್ನುತ್ತಾರೆ. ವಿದ್ಯುತ್ ಕಂಬಗಳ ಗುಣಮಟ್ಟವನ್ನು ಪರಿಶೀಲಿಸುವುದಕ್ಕೆ ಮೈಸೂರಿನಲ್ಲಿ ಅದಕ್ಕೆ ಪ್ರತ್ಯೇಕವಾದ ಸಮಿತಿ ಇದೆ. ಅದು ಇದೆಲ್ಲವನ್ನು ಗಮನಿಸುತ್ತದೆ. ಹೀಗಾಗಿ ನಮಗೆ ಐಎಸ್ಐ ಗುರುತ್ತಿನ ಕಂಬಗಳನ್ನೇ ಕಳುಹಿಸಿಕೊಡುತ್ತಾರೆ. ಆದರೂ ಅತಿಯಾದ ಗಾಳಿ ಬೀಸಿದ್ದರಿಂದ ಇಷ್ಟೊಂದು ಪ್ರಮಾಣದಲ್ಲಿ ವಿದ್ಯುತ್ ಕಂಬಗಳು ಮುರಿದಿವೆ ಎಂದಿದ್ದಾರೆ.