ಬೆಂಗ್ಳೂರಿನ 3ನೇ ಹಂತದ ಮೆಟ್ರೋಗೆ 16 ಸಾವಿರ ಕೋಟಿ ವೆಚ್ಚ..!

16,368 ಕೋಟಿ ರು. ವೆಚ್ಚದಲ್ಲಿ ಯೋಜನೆ, ಕೆಂಪಾಪುರದಿಂದ ಜೆಪಿ ನಗರ ತನಕ ಒಟ್ಟು 32.16 ಕಿಮೀ ಉದ್ದ ಮಾರ್ಗ

16368 Crores for Bengaluru's 3rd Phase Namma Metro Project grg

ಬೆಂಗಳೂರು(ನ.05):  ಬೆಂಗಳೂರು ಮೆಟ್ರೋ ನಿಗಮದ 16,368  ಕೋಟಿ ರು. ವೆಚ್ಚದ ಮೂರನೇ ಹಂತದ ಯೋಜನೆಗೆ ರಾಜ್ಯದ ಹಣಕಾಸು ಇಲಾಖೆ ತಾತ್ವಿಕ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ಈ ಪ್ರಸ್ತಾವನೆಯನ್ನು ಕೇಂದ್ರದ ನಗರಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಲಿದೆ.

ಕೆಂಪಾಪುರವನ್ನು ಜೆಪಿ ನಗರ ನಾಲ್ಕನೇ ಹಂತಕ್ಕೆ ಮತ್ತು ಹೊಸಹಳ್ಳಿಯಿಂದ ಕಡಬಗೆರೆ ತನಕ ಸಾಗುವ ಮೂರನೇ ಹಂತದ ಯೋಜನೆ ಇದಾಗಿದೆ. ರಾಜ್ಯದ ನಗರಾಭಿವೃದ್ಧಿ ಇಲಾಖೆ ಈಗಾಗಲೇ ಯೋಜನೆಗೆ ತನ್ನ ಒಪ್ಪಿಗೆ ನೀಡಿದೆ.
ಈಗ ಜಾರಿಯಲ್ಲಿರುವ ಯೋಜನೆಗಳಂತೆ ಇದರಲ್ಲಿಯೂ ಯೋಜನಾ ವೆಚ್ಚದ ಶೇ. 40ರಷ್ಟನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಂಚಿಕೊಳ್ಳಲಿದೆ. ಉಳಿದ ಶೇ.60ರಷ್ಟು ಹಣವನ್ನು ಬಾಹ್ಯ ಹಣಕಾಸು ಏಜೆನ್ಸಿಗಳಿಂದ ಸಂಗ್ರಹಿಸಬೇಕಿದೆ.

Bengaluru Metro Mobile Ticket: ರಾಜ್ಯೋತ್ಸವಕ್ಕೆ ಗಿಫ್ಟ್: ನ.1ರಿಂದ ಮೊಬೈಲ್‌ನಲ್ಲೇ 'ನಮ್ಮ ಮೆಟ್ರೋ' ಟಿಕೆಟ್‌

ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ಬಳಿಕ 5 ವರ್ಷದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಮೆಟ್ರೋ ನಿಗಮದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಮೊದಲ ಮತ್ತು ಎರಡನೇ ಹಂತದ ಯಾವೊಂದು ಯೋಜನೆಯು ಕಾಲಮಿತಿಯಲ್ಲಿ ಪೂರ್ಣಗೊಂಡಿಲ್ಲದಿರುವುದನ್ನು ಗಮನಿಸಿದರೆ 2030ರ ಹೊತ್ತಿಗೆ ಈ ಯೋಜನೆ ಜಾರಿಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಬಹುದು.

ಕೆಂಪಾಪುರದಿಂದ ಜೆಪಿ ನಗರ ನಾಲ್ಕನೇ ಹಂತದ ತನಕ ಒಟ್ಟು 32.16 ಕಿಮೀ ಉದ್ದ ಈ ಮಾರ್ಗ ಸಾಗಲಿದೆ. ಇದರಲ್ಲಿ 22 ಮೆಟ್ರೋ ನಿಲ್ದಾಣಗಳು ಬರಲಿವೆ. ಹಾಗೆಯೇ ಸುಮನಹಳ್ಳಿಯಲ್ಲಿ ಇಂಟರ್‌ಚೇಂಜ್‌ ನಿಲ್ದಾಣ ಬರಲಿದ್ದು, ಅಲ್ಲಿಂದ 12.82 ಕಿಮೀ ಉದ್ದದ ಕಡಬಗೆರೆ - ಹೊಸಹಳ್ಳಿ ಮಾರ್ಗ ಹಾದುಹೋಗಲಿದೆ. ಈ ಮಾರ್ಗದಲ್ಲಿ ಒಟ್ಟು 9 ನಿಲ್ದಾಣಗಳು ಬರಲಿವೆ.

ಸುಂಕದಕಟ್ಟೆಯಲ್ಲಿ ಸುಮಾರು 70 ಎಕರೆಯಷ್ಟುವಿಶಾಲ ಜಾಗದಲ್ಲಿ ಡಿಪೋ ನಿರ್ಮಿಸುವ ಉದ್ದೇಶವನ್ನು ಮೆಟ್ರೋ ನಿಗಮ ಹೊಂದಿದೆ. 2028ಕ್ಕೆ ಯೋಜನೆಯನ್ನು ಪೂರ್ಣಗೊಳಿಸುವ ಇರಾದೆಯನ್ನು ಮೆಟ್ರೋ ನಿಗಮ ಹೊಂದಿದೆ.

* ಹೊಸಹಳ್ಳಿಯಿಂದ ಕಡಬಗೆರೆಗೆ 12.82 ಕಿಮೀ
* 70 ಎಕರೆಯಷ್ಟು ವಿಶಾಲ ಜಾಗದಲ್ಲಿ ಡಿಪೋ
* ಐದು ವರ್ಷದಲ್ಲಿ ಅನುಷ್ಠಾನಗೊಳ್ಳುವ ವಿಶ್ವಾಸ
 

Latest Videos
Follow Us:
Download App:
  • android
  • ios