₹16 ಲಕ್ಷ ವಿದ್ಯುತ್ ಬಿಲ್ಲು ಬಾಕಿ: ಪಂಚಾಯಿತಿಗೆ ವಿದ್ಯುತ್ ಸಂಪರ್ಕ ಕಡಿತ!

ಲಕ್ಷಾಂತರ ರೂಪಾಯಿ ಬಿಲ್ಲು ಬಾಕಿ ಉಳಿಸಿಕೊಂಡಿರುವುದರಿಂದ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಆದರೆ ಪಂಚಾಯಿತಿ ಅಧ್ಯಕ್ಷ ಮಾತ್ರ ಇದು ರಾಜಕೀಯ ದುರುದ್ದೇಶ ಎಂದು ಆರೋಪಿಸಿದ್ದಾರೆ. 

16 lakh electricity bill pending  Power cut to panchayat at kodagu

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಡಿ.16): ಲಕ್ಷಾಂತರ ರೂಪಾಯಿ ಬಿಲ್ಲು ಬಾಕಿ ಉಳಿಸಿಕೊಂಡಿರುವುದರಿಂದ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಆದರೆ ಪಂಚಾಯಿತಿ ಅಧ್ಯಕ್ಷ ಮಾತ್ರ ಇದು ರಾಜಕೀಯ ದುರುದ್ದೇಶ ಎಂದು ಆರೋಪಿಸಿದ್ದಾರೆ. 

ಹೌದು ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಬೀದಿ ದೀಪ, ಸಾರ್ವಜನಿಕರ ನಲ್ಲಿ ನೀರು ಪೂರೈಕೆ ಸೇರಿದಂತೆ ವಿವಿಧ ಬಳಕೆಗಳಿಂದ ಪಂಚಾಯಿತಿ ಇದುವರೆಗೆ 16 ಲಕ್ಷ ರೂಪಾಯಿ ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿದೆ. ವಿದ್ಯುತ್ ಬಿಲ್ಲು ಬಾಕಿ ಹೀಗೆ ಜಾಸ್ತಿಯಾದಂತೆ ಚೆಸ್ಕಾಂ ಅಧಿಕಾರಿಗಳು ಪಂಚಾಯತಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ. ಆದರೆ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಹಕೀಂ ಇದು ರಾಜಕೀಯ ದುರುದ್ದೇಶದಿಂದ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

 

Kodagu: ಮ್ಯಾಂಡೌಸ್ ಪರಿಣಾಮ ಅಕಾಲಿಕ ಮಳೆ: ಅಪಾರ ಬೆಳೆ ನಷ್ಟ

 ಕೊಡಗಿನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಆಡಳಿತ ನಡೆಸುತ್ತಿರುವ ಪಂಚಾಯಿತಿಗಳಲ್ಲಿ 50 ಲಕ್ಷದವರೆಗೆ ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿವೆ. ಇನ್ನು ಕೆಲವು ಪಂಚಾಯಿತಿಗಳಲ್ಲಿ 65 ಲಕ್ಷದವರೆಗೆ ಬಿಲ್ಲು ಬಾಕಿ ಉಳಿಸಿಕೊಂಡಿವೆ. ಇದು ಕೊಡಗಿನ ಪಂಚಾಯಿತಿಗಳಲ್ಲಿ ಸಾಮಾನ್ಯ ಎನ್ನುವಂತೆ ಆಗಿದೆ. ಆದರೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಡಳಿತ ನಡೆಸುತ್ತಿರುವ ಗ್ರಾಮ ಪಂಚಾಯತಿಗಳಲ್ಲಿ ಕಡಿಮೆ ಮೊತ್ತದ ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿದ್ದರೂ, ಅಂತಹ ಪಂಚಾಯತಿಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ ಎಂದು ದೂರಿದ್ದಾರೆ. 

ಅಧಿಕ ಮೊತ್ತದ ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿರುವ ಪಂಚಾಯತಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡದಿರುವಾಗ ಕಡಿಮೆ ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿರುವ ಪಂಚಾಯತಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಜಿಲ್ಲೆಯಲ್ಲಿ ಈ ರೀತಿ ಮಾಡುತ್ತಿರುವುದರಿಂದ ಪಂಚಾಯತಿಗಳ ಮೇಲೂ ಸರ್ಕಾರ ಮಲತಾಯಿ ಧೋರಣೆ ಮಾಡಿದಂತೆ ಆಗುತ್ತಿದೆ ಎಂದು ದೂರಿದ್ದಾರೆ. 

ಸಾರ್ವಜನಿಕರ ಉಪಯೋಗಕ್ಕೆ ಪಂಚಾಯತಿಯಿಂದ ವ್ಯಯಿಸುತ್ತಿರುವ ವಿದ್ಯುತ್ತಿಗೆ ಇದುವರೆಗೆ ಪ್ರತೀ ತಿಂಗಳು ಒಂದುವರೆ ಲಕ್ಷ ರೂಪಾಯಿ ಬಿಲ್ಲು ಬರುತಿತ್ತು. ಆದರೆ ಇತ್ತೀಚೆಗೆ ಅದನ್ನು ಎರಡು ಪಟ್ಟು ಹೆಚ್ಚಳ ಮಾಡಿ ಪ್ರತೀ ತಿಂಗಳು 3 ಲಕ್ಷ ರೂಪಾಯಿಯವರೆಗೆ ವಿದ್ಯುತ್ ಬಿಲ್ಲು ವಸೂಲಿ ಮಾಡಲಾಗುತ್ತಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಪಂಚಾಯತಿಗಳಿಗೆ ಹೊರೆ ಬೀಳುತ್ತಿದೆ. ಕಳೆದ ಒಂದು ವಾರದಿಂದ ಪಂಚಾಯತಿಯಲ್ಲಿ ವಿದ್ಯುತ್ ಇಲ್ಲದೆ ಸಾರ್ವಜನಿಕರ ಕೆಲಸಗಳನ್ನು ಮಾಡುವುದಕ್ಕೆ ತೀವ್ರ ತೊಂದರೆ ಆಗುತ್ತಿದೆ. ಆದರೆ ಜನರ ಹಿತದೃಷ್ಟಿಯಿಂದ ಪಂಚಾಯತಿಯಲ್ಲಿ ಜನರೇಟರ್ ಬಳಸಿಕೊಂಡು ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. 

Kodagu: ಜನತೆಗೆ ಸಿಗದ ಆರೋಗ್ಯ ಸೇವೆ, ಪಾಲಿಬೆಟ್ಟ ಆಸ್ಪತ್ರೆ ಎದುರು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

ಸರ್ಕಾರದ ಮಲತಾಯಿ ಧೋರಣೆಯಿಂದ ಜನರು ತೀವ್ರ ಸಮಸ್ಯೆ ಅನುಭವಿಸುತ್ತಿರುವುದರಿಂದ ಆ ಸಮಸ್ಯೆ ಮುಂದುವರಿಯಬಾರದು ಎಂಬ ದೃಷ್ಟಿಯಿಂದ ಪಂಚಾಯತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಮಾಡಿದ್ದ ಕ್ರಿಯಾ ಯೋಜನೆಗಳನ್ನು ಕೈಬಿಟ್ಟು, ಆ ವೆಚ್ಚದ ಹಣವನ್ನೇ ವಿದ್ಯುತ್ ಬಿಲ್ಲು ಪಾವತಿಸಲು ಮುಂದಾಗಿದ್ದೇವೆ ಎಂದು ಹಕೀಂ ತಿಳಿಸಿದ್ದಾರೆ.  ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಪಂಚಾಯತಿ ಮಾಜಿ ಅಧ್ಯಕ್ಷ ವಗೀಸ್ ಕಳೆದ ಒಂದುವರೆ ವರ್ಷದಲ್ಲಿ 8 ಕೋಟಿ ರೂಪಾಯಿಗಳ ವಿವಿಧ ಕಾಮಗಾರಿಗಳನ್ನು ಮಾಡಿದ್ದೇವೆ. ಪಂಚಾಯತಿಯನ್ನೇ ಡಿಜಿಟಲೀಕರಣ ಮಾಡಿದ್ದೇವೆ. ಉತ್ತಮ ಕಾಮಗಾರಿಗಳನ್ನು ಮಾಡುವ ಜೊತೆಗೆ ಅತೀ ಹೆಚ್ಚು ಕಂದಾಯ ಸಂಗ್ರಹಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೇ ಗುರುತಿಸಿಕೊಂಡು ಪ್ರಶಸ್ತಿ ಗಳಿಸಿದೆ. ಹೀಗಿರುವಾಗ ಪಂಚಾಯತಿಯಲ್ಲಿ 16 ಲಕ್ಷ ರೂಪಾಯಿ ವಿದ್ಯುತ್ ತೆರಿಗೆ ಉಳಿಸಿಕೊಳ್ಳಲಾಗಿದೆ ಎಂದು ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ.  ಇದು ರಾಜಕೀಯ ದುರುದ್ದೇಶಕ್ಕಾಗಿಯೇ ಮಾಡಿರುವ ಕೆಲಸ ಎಂದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಪಂಚಾಯಿತಿ ವಿದ್ಯುತ್ ತೆರಿಗೆ ಬಾಕಿ ಉಳಿಸಿಕೊಂಡಿದ್ದರಿಂದ ಸಂಪರ್ಕ ಕಡಿತವಾಗಿ ಇದೀಗ ಸಾರ್ವಜನಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Latest Videos
Follow Us:
Download App:
  • android
  • ios