ಕೊಪ್ಪಳ: ಬಿದ್ದಿದ್ದು 150 ಮನೆ, ಪರಿಹಾರ ಸಿಕ್ಕಿದ್ದು 1ಕ್ಕೆ ಮಾತ್ರ..!
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮಲೆಕ್ಕಾಧಿಕಾರಿ ನಿರ್ಲಕ್ಷ್ಯ: ಗ್ರಾಮಲೆಕ್ಕಾಧಿಕಾರಿ ಆರೋಪ
ಸೋಮರಡ್ಡಿ ಅಳವಂಡಿ
ಕೊಪ್ಪಳ(ನ.10): ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ನೂರಾರು ಮನೆಗಳು ಕುಸಿದು ಬಿದ್ದಿವೆ. ಆದರೆ, ಇದುವರೆಗೂ ಪರಿಹಾರ ಬಂದಿರುವುದು ಕೇವಲ 1 ಮನೆಗೆ ಮಾತ್ರ. ಗ್ರಾಮಲೆಕ್ಕಾಧಿಕಾರಿಯ ಯಡವಟ್ಟಿನಿಂದ ಸರ್ಕಾರದ ಪರಿಹಾರ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಈ ಕುರಿತು ಗ್ರಾಮಲೆಕ್ಕಾಧಿಕಾರಿ ಶಿವಲಿಂಗಪ್ಪ ಹಗರಿಬೊಮ್ಮನಳ್ಳಿ ಅವರನ್ನು ಕೇಳಿದರೆ, ‘ನಿಮ್ಮಪ್ಪ ಮನೆ ಕಟ್ಟಿಸಿದ್ದಾನೆ, ನಿನಗೆ ಬಿದ್ದಿರುವ ಮನೆ ಹಾಕಿಸಿಕೊಳ್ಳುವುದು ಆಗುವುದಿಲ್ಲವೇ?’ ಎಂದು ಉಡಾಫೆಯಾಗಿ ಮಾತನಾಡುತ್ತಾರೆ ಎನ್ನುವುದು ಸ್ಥಳೀಯರ ಆರೋಪ.
ಬಿದ್ದಿರುವ ಮನೆಗಳನ್ನು ಸರ್ವೇ ಮಾಡಿರುವ ಗ್ರಾಮಲೆಕ್ಕಾಧಿಕಾರಿ ಮತ್ತು ಎಂಜಿನಿಯರ್ ಅವರ ವರದಿಯ ಪ್ರಕಾರ ಹಾನಿಯ ಪ್ರಮಾಣವನ್ನು ಕೇವಲ 10- 12 ಪರ್ಸೆಂಟೇಸ್ ಮಾಡಿರುವುದುರಿಂದ ಯಾವೊಂದು ಮನೆಗೂ ಪರಿಹಾರ ಬಾರದಂತಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತ ವಿಶ್ವಗುರು : ಹಾಲಪ್ಪ ಆಚಾರ
ಗ್ರಾಮದ ಸುಶೀಲಮ್ಮ ಈಶ್ವರಪ್ಪ ಎಂಬವರ ಮನೆ ಬಹುತೇಕ ಬಿದ್ದಿದೆ. ಈಗ ಅದರಲ್ಲಿ ಇರಲು ಸಾಧ್ಯವಿಲ್ಲ (ಚಿತ್ರದಲ್ಲಿ ನೋಡಬಹುದು). ಆದರೂ ಈ ಮನೆ ಬಿದ್ದಿರುವುದು ಕೇವಲ 12 ಪರ್ಸೆಂಟೇಸ್ ಎಂದು ನಮೂದಿಸಿದ್ದಾರೆ. ಹೀಗಾಗಿ ನಯಾಪೈಸೆ ಪರಿಹಾರ ಬಂದಿಲ್ಲ.
ಇದು, ಒಬ್ಬರ ಮನೆಯ ಕತೆಯಲ್ಲ. ಬೆಟಗೇರಿ ಗ್ರಾಮದಲ್ಲಿ ಬಹುತæೕಕ ಮನೆಗಳ ವಿಚಾರದಲ್ಲೂ ಇದೇ ರೀತಿ ಆಗಿದೆ. ಅಧಿಕಾರಿಗಳ ತಪ್ಪು ಲೆಕ್ಕಾಚಾರದಿಂದ ಅತಿಯಾದ ಮಳೆಯಿಂದ ಮನೆ ಬಿದ್ದು ಸಂಕಷ್ಟದಲ್ಲಿರುವವರಿಗೆ ಸರ್ಕಾರದ ಪರಿಹಾರ ಸಿಗದಂತಾಗಿದೆ.
ಅಂದಾಜು ಲೆಕ್ಕಾಚಾರದ ಪ್ರಕಾರ ಸುಮಾರು 150 ಮನೆಗಳು ಬಿದ್ದಿವೆ ಎಂದು ಸ್ಥಳೀಯರು ಹೇಳುತ್ತಾರೆ. ಆದರೆ, ಗ್ರಾಮಲೆಕ್ಕಾಧಿಕಾರಿ ಶಿವಲಿಂಗಪ್ಪ ಅವರು ನೀಡಿರುವ ಲೆಕ್ಕಾಚಾರದ ಮೇಲೆ ಇದುವರೆಗೂ ಕೇವಲ 1 ಮನೆಗೆ ಮಾತ್ರ ಪರಿಹಾರ ದೊರೆತಿದೆ. ಅದು ಕೇವಲ .50 ಸಾವಿರ. ಗ್ರಾಮಲೆಕ್ಕಾಧಿಕಾರಿ ಶಿವಲಿಂಗಪ್ಪ ಅವರನ್ನು ಪರಿಹಾರದ ಕುರಿತು ಕೇಳಿದರೆ ಉಡಾಫೆಯಾಗಿ ಮಾತನಾಡುತ್ತಾರೆ.
ಮರು ಸರ್ವೇಗೆ ಆಗ್ರಹ:
ಗ್ರಾಮದಲ್ಲಿ ಅತಿಯಾದ ಮಳೆಯಿಂದ ಬಹಳಷ್ಟುಮನೆಗಳು ಬಿದ್ದಿವೆ. ಅದರಲ್ಲೂ ಮಣ್ಣಿನ ಮನೆಗಳು ಅಲ್ವಸ್ವಲ್ಪ ಬಿದ್ದಿದ್ದರೂ ಯಾವಾಗ ಬೇಕಾದರೂ ಬೀಳುವಂತಾಗಿವೆ. ಆದರೂ ಅದ್ಯಾವುದನ್ನು ಲೆಕ್ಕಾಚಾರ ಮಾಡದೆ ಮತ್ತು ಸ್ಥಳಕ್ಕೆ ಬಾರದೆ ತಪ್ಪು ಮಾಹಿತಿ ನೀಡಿದ್ದಾರೆ. ಈಗ ಮರು ಸರ್ವೇ ಮಾಡುವಂತೆ ಗ್ರಾಮಸ್ಥರು ಆಗ್ರಹಿಸುತ್ತಾರೆ.
ನಾವು ವಾಸವಾಗಿರುವ ಮನೆಯೇ ಬಿದ್ದು ಹೋಗಿದೆ. ಅಲ್ಲಿ ಈಗ ಇರಲು ಸಾಧ್ಯವೇ ಇಲ್ಲದಂತಾಗಿದೆ. ಆದರೂ ಕೇವಲ 12 ಪರ್ಸೆಂಟೇಸ್ ಹಾಕಿದ್ದರಿಂದ ನಯಾಪೈಸೆ ಪರಿಹಾರ ಬಂದಿಲ್ಲ. ನಿಮ್ಮಪ್ಪ ಮನೆಯನ್ನೇ ಕಟ್ಟಿಸಿದ್ದಾನೆ, ನಿನಗೆ ಬಿದ್ದಿರುವ ಮನೆ ಹಾಕಿಸಿಕೊಳ್ಳಲು ಆಗುವುದಿಲ್ಲವೇ ಎನ್ನುತ್ತಾರೆ ಗ್ರಾಮ ಲೆಕ್ಕಾಧಿಕಾರಿ ಶಿವಲಿಂಗಪ್ಪ.
ಕೊಪ್ಪಳ: ನುಡಿಜಾತ್ರೆಗೂ ‘ಗ್ರಹಣ’; ಜಿಲ್ಲಾ ಸಾಹಿತ್ಯ ಸಮ್ಮೇಳನ ಯಾವಾಗ?
ನಾನು ಉಡಾಫೆಯಾಗಿ ಮಾತನಾಡಿಲ್ಲ, ತಮಾಷೆಗೆ ಅಂದಿರಬಹುದು. ಆದರೆ, ಮನೆ ಬಿದ್ದಿರುವುದನ್ನು ನೋಡಿ ಎಂಜಿನಿಯರ್ ಲೆಕ್ಕ ಕೊಡುತ್ತಾರೆ. ಅದರ ಆಧಾರದಲ್ಲಿ ಪರಿಹಾರ ಬರುತ್ತದೆ ಅಂತ ಗ್ರಾಮ ಲೆಕ್ಕಾಧಿಕಾರಿ ಶಿವಲಿಂಗಪ್ಪ ಹಗರಿಬೊಮ್ಮನಳ್ಳಿ ತಿಳಿಸಿದ್ದಾರೆ.
ನಮ್ಮೂರಲ್ಲಿ ಬಹಳ ಮನೆಗಳು ಬಿದ್ದಿವೆಯಾದರೂ ಇದುವರೆಗೂ ಪರಿಹಾರ ಬಂದಿರುವುದು ಕೇವಲ 1 ಮನೆಗೆ ಮಾತ್ರ. ಉಳಿದ ಮನೆಗಳಿಗೂ ಪರಿಹಾರ ನೀಡುವಂತೆ ಆಗ್ರಹಿಸಿದ್ದೇವೆ. ಆದರೆ, ಅಪ್‌ಲೋಡ್ ಮಾಡುವ ದಿನಾಂಕ ಮುಗಿದಿದೆ ಎನ್ನುತ್ತಾರೆ. ಒಪನ್ ಆದರೆ ಅಪ್‌ಲೋಡ್ ಮಾಡುವುದಾಗಿ ಹೇಳುತ್ತಾರೆ.