Asianet Suvarna News Asianet Suvarna News

ಕ್ವಿಂಟಲ್ ಕೊಬ್ಬರಿಗೆ 15ಸಾವಿರ ರು. ಘೋಷಿಸಲಿ : ಜೆಡಿಎಸ್ ಮುಖಂಡ ಶಾಂತಕುಮಾರ್

ಚುನಾವಣೆ ಸಂದರ್ಭದಲ್ಲಿ ಕ್ವಿಂಟಲ್ ಕೊಬ್ಬರಿಗೆ 15ಸಾವಿರ ರು. ನಿಗದಿ ಮಾಡುವುದಾಗಿ ಭರವಸೆ ಕೊಟ್ಟ ಕಾಂಗ್ರೆಸ್ ಸರ್ಕಾರ ಈಗ ಕೊಬ್ಬರಿಗೆ 250 ರು. ಪ್ರೋತ್ಸಾಹ ಧನ ಹೆಚ್ಚಿಸುವ ಮೂಲಕ ರೈತರಿಗೆ ಭಿಕ್ಷೆ ಹಾಕುತ್ತಿದೆ.

15 thousand per quintal of  coconut Let it be announced  snr
Author
First Published Dec 12, 2023, 10:19 AM IST

  ತಿಪಟೂರು :  ಚುನಾವಣೆ ಸಂದರ್ಭದಲ್ಲಿ ಕ್ವಿಂಟಲ್ ಕೊಬ್ಬರಿಗೆ 15ಸಾವಿರ ರು. ನಿಗದಿ ಮಾಡುವುದಾಗಿ ಭರವಸೆ ಕೊಟ್ಟ ಕಾಂಗ್ರೆಸ್ ಸರ್ಕಾರ ಈಗ ಕೊಬ್ಬರಿಗೆ 250 ರು. ಪ್ರೋತ್ಸಾಹ ಧನ ಹೆಚ್ಚಿಸುವ ಮೂಲಕ ರೈತರಿಗೆ ಭಿಕ್ಷೆ ಹಾಕುತ್ತಿದೆ. ಈ ಭಿಕ್ಷೆ ಹಾಕಿ ರೈತರಿಗೆ ಅವಮಾನ ಮಾಡುವ ಬದಲು ಕೂಡಲೇ ನಾಫೆಡ್ ಕೇಂದ್ರ ಪ್ರಾರಂಭಿಸಿ ಕ್ವಿಂಟಲ್ ಕೊಬ್ಬರಿಗೆ 15ಸಾವಿರ ರು. ಘೋಷಿಸಬೇಕೆಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಗ್ಯಾರಂಟಿ ಯೋಜನೆಯ ಬಗ್ಗೆ ಜಾಹೀರಾತು ನೀಡಲು, ಸಚಿವರು ಕಾರು ಖರೀದಿಸಲು ಕೋಟ್ಯಂತರ ರು. ಹಣವಿರುತ್ತದೆ. ಆದರೆ, ರೈತರಿಂದಲೇ ಅಧಿಕಾರಕ್ಕೆ ಬಂದ ಇವರಿಗೆ ರೈತರ ಕೊಬ್ಬರಿ ಕೊಳ್ಳಲು ಹಣವಿಲ್ಲದಿರುವುದು ವಿಪರ್ಯಾಸ.

ಕೊಬ್ಬರಿ ಬೆಲೆ ಏಳು ಸಾವಿರಕ್ಕೆ ಇಳಿಕೆಯಾಗಿದ್ದು ಜಿಲ್ಲೆ, ತಾಲೂಕುಗಳಲ್ಲಿ ಪ್ರತಿಭಟನೆ, ಧರಣಿ, ಚಳವಳಿ ಮಾಡಿದರೂ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ.

ಈಗ ಬೆಳಗಾವಿ ಅಧಿವೇಶನದಲ್ಲಿ ಕ್ವಿಂಟಲ್ ಕೊಬ್ಬರಿಗೆ 250 ರು. ಪ್ರೋತ್ಸಾಹ ಧನ ನೀಡುತ್ತೇವೆಂದು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ.

ಕಳೆದ ಬಾರಿಯೂ ಇದೇ ರೀತಿ ಹೇಳಿ ಏಕಾಏಕಿ ನಫೆಡ್ ಕೇಂದ್ರಗಳನ್ನೇ ಮುಚ್ಚಲಾಯಿತು. ಘೋಷಿಸಿದ ಪ್ರೋತ್ಸಾಹ ಧನ ಯಾವೊಬ್ಬ ರೈತನಿಗೂ ಸಿಗಲಿಲ್ಲ. ಈಗಲೂ ಇದೇ ಹುನ್ನಾರ ಮಾಡುತ್ತಾ ಸರ್ಕಾರ ರೈತರ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಈ ಭಾಗದ ರೈತರು ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದು, ಮಳೆ ಇಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಈಗ ದಿಢೀರನೇ ಕೊಬ್ಬರಿ ಬೆಲೆ ಇಳಿಕೆಯಾಗಿರುವುದು ಮತ್ತಷ್ಟು ಆಘಾತವನ್ನುಂಟು ಮಾಡಿದೆ. ಕೇವಲ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುವ ಬಗ್ಗೆಯೇ ಸರ್ಕಾರ ಚಿಂತಿಸುತ್ತಿದ್ದು, ಇದರ ಬದಲು ಕೊಬ್ಬರಿಯ ಬೆಲೆಯನ್ನಾದರೂ ಹೆಚ್ಚಿಸಿದ್ದರೂ ರೈತರಿಗೆ ಅನುಕೂಲಕರವಾಗುತ್ತಿತ್ತು. ಹಾಗಾಗಿ, ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಕೊಬ್ಬರಿ ಬೆಲೆಯನ್ನು 15ಸಾವಿರಕ್ಕೆ ಹೆಚ್ಚಳ ಮಾಡಬೇಕು. ಸರ್ಕಾರ ರೈತರನ್ನು ಮರೆತರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರೈತರೇ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಕೆ ನೀಡಿದರು.

ಕೊಬ್ಬರಿಗೆ 15ಸಾವಿರ ಬೆಲೆ ನಿಗದಿ ಮಾಡಲಿ

ತಾಲೂಕಿನಲ್ಲಿ ಬರಗಾಲ ಆವರಿಸಿದ್ದು ಮತ್ತೊಂದೆಡೆ ವಿದ್ಯುತ್ ಸಮಸ್ಯೆ ತಾಂಡವವಾಡುತ್ತಿದೆ. ದನಕರುಗಳಿಗೆ ಮೇವಿನ ಕೊರತೆ ಎದುರಾಗಿ ಹೈನುಗಾರಿಕೆಗೆ ತೊಂದರೆಯಾಗುತ್ತಿದ್ದು, ಹೊಸ ಸರ್ಕಾರದ ಬಗ್ಗೆ ರೈತರು ಭ್ರಮನಿರಸನಗೊಂಡಿದ್ದಾರೆ. ಕೊಟ್ಟ ಮಾತಿನಂತೆ ಕೊಬ್ಬರಿಗೆ 15ಸಾವಿರ ರು. ಬೆಲೆ ನಿಗದಿ ಮಾಡಬೇಕು.

ಇಲ್ಲದಿದ್ದರೆ ಜಿಲ್ಲೆಯಲ್ಲಿ ರೈತರನ್ನು ಸಂಘಟಿಸಿ ಬೃಹತ್ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಕೆ.ಟಿ.ಶಾಂತಕುಮಾರ್, ಜೆಡಿಎಸ್ ಮುಖಂಡರು, ತಿಪಟೂರು.

Latest Videos
Follow Us:
Download App:
  • android
  • ios