Bramhani industries limited ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Gaali janardana reddy) ಒಡೆತನದ ಬ್ರಾಹ್ಮಣಿ ಸ್ಟೀಲ್ಸ್‌ಗೆ ಮಂಜೂರಾಗಿದ್ದ ಸುಮಾರು 14 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು 18 ವರ್ಷ ಸುದೀರ್ಘ ಕಾನೂನು ಪ್ರಕ್ರಿಯೆಯ ಬಳಿಕ ಆಂಧ್ರಪ್ರದೇಶ ಸರ್ಕಾರ ಮತ್ತೆ ತನ್ನ ವಶಕ್ಕೆ ಪಡೆದಿದೆ.
ಬಳ್ಳಾರಿ (ಜು.೧೨): ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Gaali janardana reddy) ಒಡೆತನದ ಬ್ರಾಹ್ಮಣಿ ಸ್ಟೀಲ್ಸ್‌ಗೆ ಮಂಜೂರಾಗಿದ್ದ ಸುಮಾರು 14 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು 18 ವರ್ಷ ಸುದೀರ್ಘ ಕಾನೂನು ಪ್ರಕ್ರಿಯೆಯ ಬಳಿಕ ಆಂಧ್ರಪ್ರದೇಶ ಸರ್ಕಾರ ಮತ್ತೆ ತನ್ನ ವಶಕ್ಕೆ ಪಡೆದಿದೆ.
ಭೂಮಿ ಬಳಕೆಯಾಗದ್ದಕ್ಕೆ ಈ ಕ್ರಮ?
ಉದ್ದೇಶಿತ ಕೈಗಾರಿಕಾ ಯೋಜನೆಗಳನ್ನು ಜಾರಿಗೊಳಿಸದೆ ಭೂಮಿಯನ್ನು ಬಳಕೆ ಆಗದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ವೈಎಸ್‌ಆರ್ ಕಡಪ ಜಿಲ್ಲೆಯ ಜಮ್ಮಲಮಡುಗು ಮಂಡಲದ ಅಂಬಾವರಂ ಗ್ರಾಮದಲ್ಲಿ 2007ರಲ್ಲಿ ಮೆಗಾ ಉಕ್ಕಿನ ಕಾರ್ಖಾನೆ ನಿರ್ಮಾಣಕ್ಕಾಗಿ 10,700 ಎಕರೆ, ವಿಮಾನ ನಿಲ್ದಾಣ, ಫ್ಲೈಯಿಂಗ್ ಅಕಾಡೆಮಿ ಯೋಜನೆಗಳಿಗಾಗಿ 3,115 ಎಕರೆ ಭೂಮಿಯನ್ನು ಬ್ರಾಹ್ಮಣಿ ಸ್ಟೀಲ್ಸ್‌ಗೆ ಮಂಜೂರು ಮಾಡಲಾಗಿತ್ತು. ಈ ಭೂಮಿಯ ಪ್ರಸ್ತುತ ಮೌಲ್ಯ ಸುಮಾರು ₹5,000 ಕೋಟಿ ಎಂದು ಅಂದಾಜಿಸಿದ್ದಾರೆ.

ಸರ್ಕಾರವು ಈ ಹಿಂದೆ 2011 ರಲ್ಲಿ ಭೂಮಿಯನ್ನು ಮರಳಿ ಪಡೆಯಲು ಆದೇಶಗಳನ್ನು ಹೊರಡಿಸಿದ್ದರೂ, ನಿಜವಾದ ಸ್ವಾಧೀನ ನಡೆದಿರಲಿಲ್ಲ. ಕಾನೂನು ವಿವಾದಗಳನ್ನು ಪರಿಹರಿಸಲು ಮತ್ತು ಭೂಮಿಯನ್ನು ಯಶಸ್ವಿಯಾಗಿ ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಶ್ರೀಧರ್ ದೊಡ್ಡ ಹೆಜ್ಜೆ ಇಟ್ಟಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬಳಕೆಯಾಗದ ಭೂಮಿ
2008 ರಲ್ಲಿ, ಆಗಿನ ಸರ್ಕಾರವು ವಾಣಿಜ್ಯ ವಿಮಾನ ನಿಲ್ದಾಣ, ಫ್ಲೈಯಿಂಗ್ ಅಕಾಡೆಮಿ ಮತ್ತು ವಾಯುಯಾನ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಗಾಗಿ ಬ್ರಹ್ಮಣಿ ಇಂಡಸ್ಟ್ರೀಸ್‌ಗೆ ಎಕರೆಗೆ ₹25,000 ದರದಲ್ಲಿ 3,115.64 ಎಕರೆ ಭೂಮಿಯನ್ನು ಮಂಜೂರು ಮಾಡಿತು. ಭೂಮಿಯನ್ನು ಹಸ್ತಾಂತರಿಸಲಾಗಿದ್ದರೂ, ಯಾವುದೇ ನಿರ್ಮಾಣ ಚಟುವಟಿಕೆಯನ್ನು ಪ್ರಾರಂಭಿಸಲಾಗಿಲ್ಲ. ಪ್ರಸ್ತುತ, ಇಡೀ ಪ್ರದೇಶವು ಬಳಕೆಯಾಗದೆ ಉಳಿದಿದೆ.
ಕಂಪನಿ ವಿವರಣೆ ನೀಡಲು ವಿಫಲ
ಕಂಪನಿಯು ವಿವರಣೆ ನೀಡಲು ವಿಫಲವಾದ ಕಾರಣ, ಹಂಚಿಕೆಯನ್ನು ರದ್ದುಗೊಳಿಸಿ ನಿಯಮಾವಳಿಗಳ ಪ್ರಕಾರ ಭೂಮಿಯನ್ನು ಮರಳಿ ಪಡೆಯಲು ನಿರ್ಧರಿಸಲಾಯಿತು. ಜಿಲ್ಲಾಧಿಕಾರಿಗಳು ಜಮ್ಮಲಮಡುಗು ತಹಶೀಲ್ದಾರ್ ಅವರಿಗೆ 48 ಗಂಟೆಗಳ ಒಳಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ನಿರ್ದೇಶಿಸಿದರು. ಅಂದಿನಿಂದ ಈ ಭೂಮಿಯನ್ನು ವೆಬ್‌ಲ್ಯಾಂಡ್, ಅಡಂಗಲ್ ಮತ್ತು 1-ಬಿ ದಾಖಲೆಗಳಲ್ಲಿ ಸರ್ಕಾರಿ ಆಸ್ತಿಯಾಗಿ ಮರು ದಾಖಲಿಸಲಾಗಿದೆ. ಈ ಭೂಮಿಯಲ್ಲಿ ಯಾವುದೇ ನೋಂದಣಿ ಅಥವಾ ಗುತ್ತಿಗೆ ಒಪ್ಪಂದಗಳನ್ನು ತಡೆಯಲು ಜಿಲ್ಲಾ ನೋಂದಣಾಧಿಕಾರಿಗೆ ಸೂಚನೆಗಳನ್ನು ನೀಡಲಾಗಿದೆ.


