ರಾಮನಗರದಲ್ಲಿ ನಿಷೇಧಾಜ್ಞೆ ಜಾರಿ : ಎಲ್ಲಿಂದ ಎಲ್ಲಿವರೆಗೆ?
ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಾಲೂಕು ಆಡಳಿತ ಮಂಡಳಿ ಆದೇಶಿಸಿದೆ.
ರಾಮನಗರ(ಫೆ.20): ಜನಜಾಗೃತಿ ವೇದಿಕೆ ಫೆ. 20ರಂದು ರಾಮನಗರ ಟೌನ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತಾಲೂಕು ಆಡಳಿತ ಫೆ. 19ರ ರಾತ್ರಿ 10ರಿಂದ ಫೆ. 21ರ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದೆ.
ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ರಾಮನಗರ ಬಂದ್‌ಗೆ ಕರೆ ಕೊಟ್ಟಿರುವ ಬಗ್ಗೆ ರಾಮನಗರ ಪುರ ವೃತ್ತ ಆರಕ್ಷಕ ವೃತ್ತ ನಿರೀಕ್ಷಕರು ಸಲ್ಲಿಸಿರುವ ವರದಿ ಮೇರೆಗೆ ತಾಲೂಕು ದಂಡಾಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
'ಯೋಗೇಶ್ವರ್ ತಾಲೂಕು ಮಟ್ಟದಲ್ಲಿ ಹಣ ಮಾಡುತ್ತಿದ್ರು, ಈಗ ರಾಜ್ಯ ಮಟ್ಟದಲ್ಲಿ ದುಡ್ಡು ಮಾಡಲು ಅಧಿಕಾರ' ..
ರಾಮನಗರ ಟೌನ್, ಮತೀಯವಾಗಿ ಹಾಗೂ ರಾಜಕೀಯವಾಗಿ ಅತಿ ಸೂಕ್ಷ್ಮ ಪ್ರದೇಶವಾಗಿದೆ. ಮೆರವಣಿಗೆ, ಬಂದ್ ನಡೆಸಿದಲ್ಲಿ ಗಲಭೆ, ಸಾರ್ವಜನಿಕ ಅಸ್ತಿಪಾಸ್ತಿಗೆ ನಷ್ಟಮತ್ತಿತರೆ ಘಟನೆಗಳು ಸಂಭವಿಸಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿಗಳಾದ ಟಿ.ಎಂ.ನರಸಿಂಹ ಮೂರ್ತಿ ಅವರು ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144 ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟಮತ್ತಿತರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಫೆ. 19ರ ರಾತ್ರಿ 10ರಿಂದ ಫೆ. 21ರ ಮಧ್ಯರಾತ್ರಿ 12 ಗಂಟೆಗೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಸಮಯದಲ್ಲಿ ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ಪ್ರತಿಭಟನೆ, ಧರಣಿ, ಜಾಥಾ, ಮುಷ್ಕರ, ರಸ್ತಾ ರೋಖೋ, ಸಾರ್ವಜನಿಕ ಹಾಗೂ ರಾಜಕೀಯ ಸಭೆ, ಸಮಾರಂಭಗಳನ್ನು ನಡೆಸುವುದನ್ನು, ಶಸ್ತಾ್ರಸ್ತ್ರಗಳನ್ನು, ಮಾರಾಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಲಾಗಿದೆ ಎಂದು ಅವರು ಅದೇಶದಲ್ಲಿ ತಿಳಿಸಿದ್ದಾರೆ.