ಬೆಂಗಳೂರು [ಡಿ.19]:  ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ನಾಗರಿಕ ರಾಷ್ಟ್ರೀಯ ನೋಂದಣಿ ಅಭಿಯಾನ (ಎನ್‌ಆರ್‌ಸಿ) ಸಂಬಂಧ ಪರ-ವಿರೋಧದ ಹೋರಾಟಗಳು ತೀವ್ರಗೊಂಡ ಬೆನ್ನೆಲ್ಲೇ ಎಚ್ಚೆತ್ತ ಆಯುಕ್ತರು, ಮುಂಜಾಗ್ರತಾ ಕ್ರಮವಾಗಿ ಗುರುವಾರದಿಂದ ಶನಿವಾರದವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.

ನಗರದಲ್ಲಿ ಬುಧವಾರ ತಡರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಅವರು, ನಗರದ ನಾಗರಿಕರ ಶಾಂತಿ ಕಾಪಾಡುವ ಸಲುವಾಗಿ ಪ್ರತಿಭಟನೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದರು.

ಸಿಎಎ ಮತ್ತು ಎನ್‌ಆರ್‌ಸಿ ಪರ-ವಿರೋಧವಾಗಿ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಸುಮಾರು 60ಕ್ಕೂ ಸಂಘಟನೆಗಳು ಅರ್ಜಿ ಸಲ್ಲಿಸಿವೆ. ಕೆಲವರು ಒಂದರಿಂದ ಒಂದೂವರೆ ಲಕ್ಷ ಜನರನ್ನು ಸೇರಿಸಿ ಬೃಹತ್‌ ಮಟ್ಟದಲ್ಲಿ ಹೋರಾಟ ಸಂಘಟಿಸಲು ಮುಂದಾಗಿದ್ದಾರೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆಯಿಂದ ಶನಿವಾರ ಮಧ್ಯ ರಾತ್ರಿವರೆಗೆ ನಗರ ವ್ಯಾಪ್ತಿ ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಆಯುಕ್ತರು ವಿವರಿಸಿದರು.

ಇದುವರೆಗೆ ಕೆಲವೆಡೆ ಶಾಂತಿಯುತ ಪ್ರತಿಭಟನೆಗಳು ನಡೆದಿವೆ. ಆದರೆ ಮುಂದಿನ ದಿನಗಳಲ್ಲಿ ಪರ-ವಿರೋಧ ಗುಂಪುಗಳು ಬಲ ಪ್ರದರ್ಶನಕ್ಕೆ ಮುಂದಾದರೆ ಪರಿಸ್ಥಿತಿ ನಿಯಂತ್ರಿಸುವುದು ಸುಲಭವಾಗುವುದಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ರೀತಿಯ ಪ್ರತಿಭಟನೆಗಳಿಗೆ ಅನುಮತಿ ನೀಡದಿರಲು ನಿರ್ಧರಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಪ್ರತಿಭಟನೆ ಹತ್ತಿಕ್ಕಲು ಪೊಲೀಸರನ್ನು ಬಳಕೆ ಮಾಡಲಾಗುತ್ತದೆ ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿದ ಆಯುಕ್ತರು, ‘ನನ್ನ ಮೇಲೆ ಯಾವುದೇ ರೀತಿಯ ಒತ್ತಡವಿಲ್ಲ. ನಗರದ ನಾಗರಿಕರ ಹಿತ ದೃಷ್ಟಿಯಿಂದ ಪೊಲೀಸ್‌ ಆಯುಕ್ತನಾಗಿ ಪ್ರತಿಭಟನೆಗಳಿಗೆ ನಿರ್ಬಂಧಿಸುವ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ಈ ಮೂರು ದಿನಗಳಲ್ಲಿ ನಗರ ವ್ಯಾಪ್ತಿ ಬಿಗಿ ಬಂದೋಬಸ್‌್ತ ಕಲ್ಪಿಸಲಾಗಿದೆ. 16 ಕೆಎಸ್‌ಆರ್‌ಪಿ, 60 ಸಿಎಆರ್‌ ತುಕಡಿಗಳನ್ನು ನಿಯೋಜಿಸಲಾಗಿದ್ದು, ಹೊಯ್ಸಳ ಸಿಬ್ಬಂದಿಗೆ ಸಹ ಸದಾ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚಿಸಲಾಗಿದೆ. ಆಯುಕ್ತ ಮಟ್ಟದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಸಹ ಜಾಗರೂಕರಾಗಿರುವಂತೆ ಹೇಳಲಾಗಿದೆ ಎಂದು ವಿವರಿಸಿದರು.

ಕಾನೂನು ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾದರೆ ಕಠಿಣ ಎದುರಿಸಬೇಕಾಗುತ್ತದೆ. ಈಗಾಗಲೇ ಪ್ರತಿಭಟನೆಗೆ ಅನುಮತಿ ಕೋರಿದವರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದ್ದು, ಬೀದಿಗಿಳಿದು ಹೋರಾಟದ ದನಿ ಮೊಳಗಿಸುವವರನ್ನು ವಿಡಿಯೋ ಚಿತ್ರೀಕರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎರಡು ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್‌

ಅನುಮತಿ ಪಡೆಯದೆ ಪ್ರತಿಭಟನೆಗೆ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶ ನೀಡಿದ ಆರೋಪದ ಮೇರೆಗೆ ನಗರದ ಎರಡು ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಆಯುಕ್ತ ಭಾಸ್ಕರ್‌ ರಾವ್‌ ಹೇಳಿದರು. ಇದುವರೆಗೆ ಪ್ರತಿಭಟನೆ ಸಂಬಂಧ ಯಾರನ್ನು ಬಂಧಿಸಿಲ್ಲ. ಆದರೆ ಕಾನೂನು ಉಲ್ಲಂಘಿಸಿದ ಶಿಕ್ಷಣ ಸಂಸ್ಥೆಗಳಿಗೆ ವಿವರಣೆ ಕೇಳಿದ್ದೇವೆ ಎಂದು ಸ್ಪಷ್ಟಪಡಿಸಿದರು.

ನಮ್ಮೂರಿನಲ್ಲಿ (ಬೆಂಗಳೂರು) ಯಾವುದೇ ರೀತಿಯ ಪ್ರತಿಭಟನೆಗೆ ಅವಕಾಶವಿಲ್ಲ. ಪ್ರತಿಭಟನೆ ಮಾಡಲೇಬೇಕು ಎನ್ನುವವರು ಬೇರೆ ಊರಿಗೆ ಹೋಗಲಿ ಮಾಡಿಕೊಳ್ಳಲಿ. ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ. ಆದರೆ ಅದೂ ಕಾನೂನು ಚೌಕಟ್ಟು ಮೀರಬಾರದು.

-ಭಾಸ್ಕರ್‌ ರಾವ್‌, ಆಯುಕ್ತರು, ಬೆಂಗಳೂರು ನಗರ.