ಸುಮಾರು 1400 ಹೈನುಗಾರರಿಗೆ ಹಸುಗಳನ್ನು ಖರೀದಿಸಲು ತಲಾ 2 ಲಕ್ಷ ರು. ಸಾಲ ನೀಡುವಂತೆ ತುಮಕೂರು ಹಾಲು ಒಕ್ಕೂಟವು ಕೆನರಾ ಬ್ಯಾಂಕ್‌ಗೆ ಮನವಿ ಮಾಡಿದೆ. ಈ ಸಾಲವನ್ನು ಸದ್ಬಳಕೆ ಮಾಡಿಕೊಂಡು ಪ್ರಾಮಾಣಿಕವಾಗಿ ಮರುಪಾವತಿ ಮಾಡುವುದರ ಮಹತ್ವವನ್ನು ತಿಳಿಸಲಾಗಿದ್ದು, ಇದರಿಂದ ರೈತರ ಅಭಿವೃದ್ಧಿ ಸಾಧ್ಯ ಎಂದು ಒತ್ತಿಹೇಳಲಾಗಿದೆ.

ತುಮಕೂರು: ಶಿರಾನೂರು ಹೈನುಗಾರರಿಗೆ ಹಸುಗಳನ್ನು ಖರೀದಿಸಲು ಸುಮಾರು 14 ರೈತರಿಗೆ ಕನಿಷ್ಠ 2 ಲಕ್ಷ ರು. ಸಾಲ ನೀಡುವಂತೆ ಕೆನರಾ ಬ್ಯಾಂಕ್‌ಗೆ ಬೇಡಿಕೆ ಇಡಲಾಗಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ನಗರದ ನಂದಿನಿ ಕ್ಷೀರ ಭವನದಲ್ಲಿ ತುಮಕೂರು ಹಾಲು ಒಕ್ಕೂಟ, ಕೆನರಾ ಬ್ಯಾಂಕ್ ಜೊತೆ ರೈತರಿಗೆ ಸಾಲ ವಿತರಣೆಗೆ ರೈತ ಸಂಪರ್ಕ ಸಭೆ ಉದ್ಘಾಟಿಸಿದರು. ಪ್ರಸ್ತುತ ಬ್ಯಾಂಕ್ ಪ್ರತಿ ಸಂಘಕ್ಕೆ 10 ರಿಂದ 15 ಲಕ್ಷ ರು.ಗಳ ಸಾಲವನ್ನು ನೀಡಲು ತಯಾರಿವೆ. ಇಂದು ಉತ್ತಮ ಹಸುವಿನ ಬೆಲೆ 70 ಸಾವಿರದಿಂದ 1 ಲಕ್ಷದವರೆಗೆ ಇರುತ್ತದೆ. ಈ ಸಾಲದ ಮೊತ್ತದಲ್ಲಿ ಎರಡು ಹಸುಗಳನ್ನು ಖರೀದಿಸಲು ರೈತರಿಗೆ ಅನುಕೂಲ ಮಾಡಲು ಈ ಕಾರ್ಯಕ್ರಮ ರೂಪಿಸಲಾಗಿದೆ. 

ಪ್ರಾಮಾಣಿಕ ಮರುಪಾವತಿ

ಕೆಲವು ರೈತರು ಸಾಲ ಮಂಜೂರಾದ ತಕ್ಷಣ, ಹೊಸ ಹಸು ಖರೀದಿಸುವ ಬದಲು ಮನೆಯಲ್ಲಿರುವ ಹಳೆಯ ಹಸುಗಳನ್ನೇ ತೋರಿಸಿ ವಿಮೆ ಮಾಡಿಸಿ, ಬಂದ ಹಣವನ್ನು ಮಗಳ ಮದುವೆ, ಶಿಕ್ಷಣ ಅಥವಾ ಇತರ ವೈಯಕ್ತಿಕ ಖರ್ಚುಗಳಿಗೆ ಬಳಸುವ ಪ್ರವೃತ್ತಿ ಇದೆ. ಇದು ಅತ್ಯಂತ ತಪ್ಪು. ಇದರಿಂದ ಸಾಲ ತೀರಿಸಲಾಗದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹತ್ತು ಜನ ಸೇರಿ ಈ ರೀತಿ ಮಾಡಿದರೆ, ಸೊಸೈಟಿಯ ಮೇಲಿನ ನಂಬಿಕೆ ಕಳೆದುಹೋಗಿ ಭವಿಷ್ಯದಲ್ಲಿ ನಿಜವಾದ ಅರ್ಹ ರೈತನಿಗೂ ಸಾಲ ಸಿಗದಂತಾಗುತ್ತದೆ. ಈ ಬ್ಯಾಂಕ್ ಸಾಲದ ಸದುಪಯೋಗ ಹಾಗೂ ಪ್ರಾಮಾಣಿಕ ಮರುಪಾವತಿಯಿಂದ ಮಾತ್ರ ರೈತರ ಅಭಿವೃದ್ಧಿ ಸಾಧ್ಯವಾಗಿದೆ.

ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಗಂಗೇಶ್ ಗುಂಜನ್ ಮಾತನಾಡಿ, ರೈತರಿಗೆ ಅನುಕೂಲವಾಗುವಂತೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ), ಹೈನುಗಾರಿಕೆ, ಹಾಗೂ ಸ್ವಸಹಾಯ ಸಂಘಗಳ ಮೂಲಕ ವಿವಿಧ ಕೃಷಿ ಸಾಲ ಯೋಜನೆಗಳನ್ನು ಜಾಮೀನು ರಹಿತವಾಗಿ ಬ್ಯಾಂಕ್ ಒದಗಿಸುತ್ತಿದೆ ಎಂದರು.

ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಗಿರೀಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವಲಯ ಮ್ಯಾನೇಜರ್ ಅಭಿನವ್, ಸೀನಿಯರ್ ಮ್ಯಾನೇಜರ್ ರಮಾನಾಥ್ ರಾಮನ್, ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ಹರೀಶ್ ಕುಮಾರ್, ಗಿರೀಶ್, ಬಾಲಾಜಿ, ಪುಷ್ಪಲಕ್ಷ್ಮೀ, ಸುಬೇಂದ್ರ ,ಪ್ರವೀಣ್, ಬಾಬಾ ಫಕೃದ್ಧಿನ್ ಪಿ. ಎಂ., ಹನುಮಂತರಾಯ ಇತರರಿದ್ದರು.

ಇದನ್ನೂ ಓದಿ: ನವೀಕರಣಗೊಂಡ ರಾಜ್ಯದ 4 ರೈಲು ನಿಲ್ದಾಣಗಳು ಜುಲೈ 17ರಂದು ಲೋಕಾರ್ಪಣೆ; ಅತ್ಯಾಧುನಿಕ ಸೌಲಭ್ಯ