ಕೊರೋನಾ 2ನೇ ಅಲೆ: ಬೆಂಗ್ಳೂರಲ್ಲಿ 11520ಕ್ಕೇರಿದ ಸಕ್ರಿಯ ಕೇಸ್
45 ರೋಗಿಗಳ ಆರೋಗ್ಯ ಸ್ಥಿತಿ ಗಂಭೀರ| ಬುಧವಾರ 7 ಮಂದಿ ಕೊರೋನಾಗೆ ಬಲಿ| 637 ಮಂದಿ ಸೋಂಕಿನಿಂದ ಗುಣಮುಖ| ಬೆಂಗಳೂರಿನಲ್ಲಿ ಕ್ಲಸ್ಟರ್ ಮಾದರಿ ಕೊರೋನಾ ಸೋಂಕಿತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಳ| 21 ಕಡೆಗಳಲ್ಲಿ ಕ್ಲಸ್ಟರ್ ಮಾದರಿ ಪ್ರಕರಣಗಳು ದೃಢ|
ಬೆಂಗಳೂರು(ಮಾ.25): ಸತತ ನಾಲ್ಕನೇ ದಿನವೂ ರಾಜಧಾನಿ ಬೆಂಗಳೂರಿನಲ್ಲಿ ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 11,520ಕ್ಕೆ ಏರಿಕೆಯಾಗಿದೆ.
ಬುಧವಾರ 1,398 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 637 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಏಳು ಮಂದಿ ಸೋಂಕಿನಿಂದ ಮೃತಪಟ್ಟವರದಿಯಾಗಿದೆ. ನಗರದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 4,21,236ಕ್ಕೆ ಏರಿಕೆಯಾಗಿದ್ದು, ಗುಣಮುಖರ ಸಂಖ್ಯೆ 4,05,152ಕ್ಕೆ ತಲುಪಿದೆ. ಈ ಪೈಕಿ 45 ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಈವರೆಗೆ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 4,563ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನಗರದಲ್ಲಿ 21 ಕ್ಲಸ್ಟರ್:
ನಗರದಲ್ಲಿ ಕ್ಲಸ್ಟರ್ ಮಾದರಿ ಕೊರೋನಾ ಸೋಂಕಿತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ. ಹಾಸ್ಟೆಲ್, ಪ್ರೌಢಶಾಲೆ, ಕಾಲೇಜುಗಳು ಸೇರಿದಂತೆ ಅಪಾರ್ಟ್‌ಮೆಂಟ್‌ಗಳಲ್ಲಿ ಕ್ಲಸ್ಟರ್ ಮಾದರಿ ಸೋಂಕಿನ ಪ್ರಕರಣ ಜಾಸ್ತಿಯಾಗುತ್ತಿದ್ದು, ಆತಂಕ ಮೂಡಿಸಿದೆ.
ದೇಶದಲ್ಲಿ ಅತಿಹೆಚ್ಚು ಕೊರೋನಾ ಕೇಸ್ ಇರೋ ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ 1 ಜಿಲ್ಲೆ
ದಾಸರಹಳ್ಳಿಯ ಶಂಕರೇಶ್ವರ ಸರ್ಕಾರಿ ಶಾಲೆ, ಎಸ್‌ಬಿಎಂ ಇಂಗ್ಲಿಷ್ ಹೈಸ್ಕೂಲ್, ಯಲಹಂಕದ ಸಂಭ್ರಮ ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸೇರಿದಂತೆ 21 ಕಡೆಗಳಲ್ಲಿ ಕ್ಲಸ್ಟರ್ ಮಾದರಿ ಪ್ರಕರಣಗಳು ದೃಢಪಟ್ಟಿವೆ ಎಂದು ಪಾಲಿಕೆ ವರದಿ ಮಾಹಿತಿ ನೀಡಿದೆ.
ದಕ್ಷಿಣ ವಲಯ-ಸರ್ಕಾರಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಹಾಸ್ಟೆಲ್ ವಿದ್ಯಾಪೀಠ (8 ಪ್ರಕರಣ), ಪಶ್ಚಿಮ ವಲಯ-ಸಲರ್ಪುರಿಯಾ ಸತ್ವ ಲಕ್ಷ್ಯುರಿಯ ಅಪಾಟ್‌ಮೆಂಟ್(6), ಆರ್ಯ ಈಡಿಗ ಬಾಲಕಿಯರ ಹಾಸ್ಟೆಲ್(15), ವೈಯಾಲಿಕಾವಲ್(7), ಆರ್ ಆ್ಯಂಡ್ ಎಸ್ ವಿಲ್ಲೆ ಅಪಾರ್ಟ್‌ಮೆಂಟ್ಸ್ (4), ದಾಸರಹಳ್ಳಿ ವಲಯ-ಕಾಳಹಸ್ತಿ ನಗರ ಟಿ.ದಾಸರಹಳ್ಳಿ(5), ಶಿವಕೃಪ ನಿಲಯ (7), ಜಿಜಿ ಟ್ರೋನಿಕ್ಸ್ (8), ಶೋಭಾ ಅಪಾರ್ಟ್‌ಮೆಂಟ್ಸ್(8), ಕಿರಣ್ ಹೈಸ್ಕೂಲ್(5), ಶಂಕರೇಶ್ವರ ಸರ್ಕಾರಿ ಶಾಲೆ (5), ಎಸ್‌ಬಿಎಂ ಇಂಗ್ಲಿಷ್ ಹೈಸ್ಕೂಲ್ (5), ಪೂರ್ವ ವಲಯ- ಅಡ್ಮಿರಾಲ್ಟಿ ಅವೆನ್ಯು(7), ಸ್ಪಾನ್‌ಡಿಕ್ಸ್ (5), ಎಸ್‌ಆರ್ ನಗರ 8ನೇ ತಿರುವು(5), ಯಲಹಂಕ ವಲಯ- ಗೋವರ್ಧನ ರೆಸಿಡೆನ್ಸಿ, ಅಭಿನಂಜನ ಬಿಲ್ಡಿಂಗ್- ಬಿಇಎಲ್ ಲೇಔಟ್(ತಲಾ 7), ಚಿಕ್ಕಬೊಮ್ಮಸಂದ್ರ 1ಮೈನ್(6), ನವನಾಮಿ ಪ್ಲಾಟಿನ(7), ಶೋಭಾ ಕ್ರೈಸಾಂಥೆಮಮ್ (6) ಮತ್ತು ಸಂಭ್ರಮ ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್(6).