ಔರಾದ್‌ನಲ್ಲಿ ಸುಂದರವಾದ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗಬೇಕು. ಇಲ್ಲಿನ ಜನತೆಗೆ ನ್ಯಾಯಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಅಲೆಯುವುದು ತಪ್ಪಬೇಕು ಎನ್ನುವುದು ನನ್ನ ಬಹುದಿನಗಳ ಆಶಯವಾಗಿತ್ತು. ಹಾಗಾಗಿ 2010ರಿಂದ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ: ಪ್ರಭು.ಬಿ ಚವ್ಹಾಣ 

ಬೀದರ್‌(ಜ.22): ಔರಾದ್‌ ಪಟ್ಟಣದಲ್ಲಿ ಸುಸಜ್ಜಿತವಾದ ನ್ಯಾಯಾಲಯ ಕಟ್ಟಡ ನಿರ್ಮಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 13.20 ಕೋಟಿ ರು. ಯೋಜನೆಗೆ ಅನುಮೋದನೆ ಸಿಕ್ಕಿದೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಸಚಿವರು, ತಾವು ಶಾಸಕರಾದ ನಂತರ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಾಗಿವೆ. ಶಾಲೆ-ಕಾಲೇಜುಗಳು, ವಸತಿ ನಿಲಯಗಳು, ಆಸ್ಪತ್ರೆಗಳು ಸೇರಿದಂತೆ ಹಲವು ಕಟ್ಟಡಗಳು ನಿರ್ಮಾಣಗೊಂಡಿವೆ. ಆದರೆ ಒಳ್ಳೆಯ ನ್ಯಾಯಾಲಯ ಕಟ್ಟಡದ ಕೊರತೆಯಿತ್ತು. ಔರಾದ್‌ನಲ್ಲಿ ಸುಂದರವಾದ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗಬೇಕು. ಇಲ್ಲಿನ ಜನತೆಗೆ ನ್ಯಾಯಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಅಲೆಯುವುದು ತಪ್ಪಬೇಕು ಎನ್ನುವುದು ನನ್ನ ಬಹುದಿನಗಳ ಆಶಯವಾಗಿತ್ತು. ಹಾಗಾಗಿ 2010ರಿಂದ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಬೀದರ್: ಗ್ರಾಮ ಪಂಚಾಯತಿಯಲ್ಲಿ ಕೋಟಿ ಕೋಟಿ ಪಂಗನಾಮ..!

ತಾಲೂಕಿನಲ್ಲಿ ಕೋರ್ಟ್‌ ಕಾಂಪ್ಲೆಕ್ಸ್‌ ನಿರ್ಮಿಸಬೇಕೆಂಬ ವಕೀಲರು ಹಾಗೂ ನ್ಯಾಯಾಲಯಕ್ಕೆ ಸಂಬಂಧಿಸಿದವರ ಬಹು ದಿನಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ. ಕೆಲವು ದಿನಗಳಲ್ಲಿಯೇ ಸುಂದರವಾದ ಕೋರ್ಚ್‌ ಕಾಂಪ್ಲೆಕ್ಸ್‌ ನಿರ್ಮಾಣಗೊಳ್ಳಲಿದೆ. ಶೀಘ್ರದಲ್ಲಿಯೇ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

1.15 ಎಕರೆ ಜಮೀನಿನಲ್ಲಿ ಭವ್ಯವಾದ ಬಹುಮಹಡಿಯ ಕೋರ್ಟ್‌ ಕಾಂಪ್ಲೆಕ್ಸ್‌ ನಿರ್ಮಿಸಲಾಗುತ್ತಿದ್ದು, ಇದರಲ್ಲಿ ಕೋರ್ಟ್‌ ಹಾಲ್‌ಗಳು, ನ್ಯಾಯಾಧೀಶರ ಕೊಠಡಿಗಳು, ಗ್ರಂಥಾಲಯ ಸೇರಿದಂತೆ ಎಲ್ಲ ರೀತಿಯ ಮೂಲ ಸೌಕರ್ಯಗಳು ಇರಲಿವೆ ಎಂದು ಮಾಹಿತಿ ನೀಡಿದ್ದಾರೆ.

ನನ್ನ ಬೇಡಿಕೆಗೆ ಸ್ಪಂದಿಸಿ ಔರಾದ್‌ ಕೋರ್ಟ್‌ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ 13.20 ಕೋಟಿಗೆ ಅನುಮೋದನೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಂಪುಟದ ಎಲ್ಲರಿಗೂ ಔರಾದ್‌ ಮಹಾಜನತೆಯ ಪರವಾಗಿ ಸಚಿವ ಚವ್ಹಾಣ ಧನ್ಯವಾದ ಸಲ್ಲಿಸಿದ್ದಾರೆ.